ಸೋಯಾಬಿನ್, ತೊಗರಿ ಬೀಜ ಪೂರೈಸಲು ಜಿಪಂ ಸದಸ್ಯರ ಒತ್ತಾಯ

0
75

ಬೀದರ್: ಸೋಯಾಬಿನ್ ಮತ್ತು ತೊಗರಿ ಬೀಜಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಅಗತ್ಯ ಪ್ರಮಾಣದಲ್ಲಿ ರೈತರಿಗೆ ಬೀಜ ಪೂರೈಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಅಗತ್ಯ ಪ್ರಮಾಣದಲ್ಲಿ ಬೀಜ ಸಿಗದೇ ಇದ್ದುದಕ್ಕೆ ಜನರು ಕಂಗಾಲಾಗಿದ್ದಾರೆ. ಸೋಯಾ ಬಿತ್ತನೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ. ರಾಜೇಶ್ವರದಲ್ಲಿ ಬೀಜ ಇಲ್ಲ. ರೈತರಿಗೆ ಬೀಜವನ್ನು ಅಸಮರ್ಪಕವಾಗಿ ವಿತರಿಸಲಾಗುತ್ತಿದೆ. ಬರೀ ಎರಡೇ ಪಾಕೇಟ್ ನೀಡುತ್ತಿದ್ದಾರೆ ಎಂದು ಕೆಲವು ಸದಸ್ಯರು ಸಭೆಯ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈಗಾಗಲೇ 35,೦೦೦ ಕ್ವಿಂಟಲ್ ಸೋಯಾ ಬೀಜವನ್ನು ರೈತರಿಗೆ ವಿತರಿಸಿದ್ದೇವೆ. ಜಿಲ್ಲೆಯಲ್ಲಿ 73 ಬೀಜ ವಿತರಣೆಯ ಕೇಂದ್ರಗಳಿವೆ. ಬೀದರ ಜಿಲ್ಲೆಗೆ ಸೊಯಾ ಹಾಗೂ ತೊಗರಿ ಬೀಜ ಹೆಚ್ಚಿನ ಪ್ರಮಾಣದಲ್ಲಿ ಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿಜಯಾನಂದ ಸಿ ಪ್ರತಿಕ್ರಿಯಿಸಿದರು.

ಬೀಜ ಸಂಗ್ರಹಿಸಿ: ಈಗ ಮಳೆ ಇಲ್ಲ. ಮಳೆಯಾದ ಕೂಡಲೇ ಬೀಜ ಕೊಡಿ ಎಂದು ಜನರು ದುಂಬಾಲು ಬೀಳುತ್ತಾರೆ. ಆದ್ದರಿಂದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಬೀಜವನ್ನು ಸ್ಟಾಕ್ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ತಿಳಿಸಿದರು.

ತೊಗರಿ ಬೀಜ ಇಲ್ಲ: ತೊಗರಿ ಬಿತ್ತನೆ ಕೂಡ ಕಡಿಮೆ ಆಗಿದೆ. ತೊಗರಿ ಬೀಜ ಕೂಡ ಸಿಗುತ್ತಿಲ್ಲ. ಅಧಿಕಾರಿಗಳು ಹೇಳುವುದೇ ಬೇರೆ. ಇರುವ ವಾಸ್ತವ ಸ್ಥಿತಿಯೇ ಬೇರೆ. ಇಡೀ ರಾಜ್ಯದಲ್ಲಿಯೇ ಬೀದರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬೆಳೆಯಲಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ಸೋಯಾ ಬೀಜ ಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಭಾರತಬಾಯಿ ಶೇರಿಕಾರ, ಡಾ.ಪ್ರಕಾಶ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಸರಿಯಾಗಿ ಸ್ಪಂದಿಸಿ: ಬಿತ್ತನೇ ಬೀಜ ಸಿಕ್ಕಿಲ್ಲ ಎಂದು ಯಾವುದೇ ರೈತರು ತೊಂದರೆ ಎದುರಿಸುವಂತಾಗಬಾರದು. ಈ ಬಗ್ಗೆ ಗಮನ ಹರಿಸಿರಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಅವರು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಗತ್ಯ ದಾಖಲೆ ಮಾತ್ರ ಪಡೆಯಿರಿ: ರೈತರ ಬೇಡಿಕೆಯನುಸಾರ ಬೀಜ ಪೂರೈಕೆಗೆ ಮೊದಲ ಆದ್ಯತೆ ಕೊಡಿ. ರೈತ ಸಂಪರ್ಕ ಕೇಂದ್ರದಲ್ಲಿ ಪಹಣಿ, ಜಾತಿ, ಆಧಾರ್ ಕಾರ್ಡ್‌ನಂತಹ ಒಂದೆರಡು ದಾಖಲೆಗಳನ್ನು ಮಾತ್ರ ನೋಡಿ ಬೀಜ ವಿತರಣೆಗೆ ಕ್ರಮ ವಹಿಸಿರಿ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಣ ಬುಳ್ಳಾ ಅವರು ಅಧಿಕಾರಿಗಳಿಗೆ ತಿಳಿಸಿದರು. ಬೀಜ ಬೇಡಿಕೆಯ ಮಾಹಿತಿ ಇದೆ: ಬೀದರ ಜಿಲ್ಲೆಗೆ ಸೋಯಾ ೬೦ ಸಾವಿರ ಕ್ವಿಂಟಲ್ ಹೆಚ್ಚಿಗೆ ಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರು ನಡೆಸಿದ ಸಭೆಯಲ್ಲಿ ಬೇಡಿಕೆ ಇಡಲಾಗಿದೆ. ಜಿಲ್ಲೆಯ ಜನತೆಗೆ ತೊಂದರೆಯಾಗದಂತೆ ಬಿತ್ತನೆ ಬೀಜ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರು ಜಿಲ್ಲಾ ಪಂಚಾಯತ್ ಸದಸ್ಯರಿಗೆ ಸ್ಪಷ್ಟಪಡಿಸಿದರು.

ಕೃಷಿ ಅಧಿಕಾರಿಗಳಿಗೆ ಸೂಚನೆ: ಬೀಜ ವಿತರಣೆ ವಿಷಯದಲ್ಲಿ ಕೇಳಿ ಬಂದ ದೂರುಗಳ ಬಗ್ಗೆ ತಾವು ಗಮನ ಹರಿಸಿ. ಕೂಡಲೇ ಆರ್‌ಎಸ್‌ಕೆ ಸೇರಿದಂತೆ ಕೃಷಿ ಇಲಾಖೆಯ ಇನ್ನೀತರ ಅಧಿಕಾರಿಗಳ ಸಭೆ ನಡೆಸಿ ಅವರಿಗೆ ಎಚ್ಚರಿಕೆ ನೀಡಬೇಕು. ಬೀಜ ಬೇಕು ಎಂದು ರೈತರು ಕೇಳಿದಾಗ ಜನತೆಗೆ ಬೀಜ ವಿತರಣೆ ಕೇಂದ್ರದ ಮೂಲಕ ಬೀಜ ಲಭ್ಯವಾಗುವಂತೆ ನೋಡಿಕೊಳ್ಳಿ ಎಂದು ಸಿಇಓ ಅವರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ವರ್ಗಾವಣೆ ಮಾಡಿ: ಕೃಷಿ ಇಲಾಖೆಯ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಜಂಟಿ ನಿರ್ದೇಶಕರ ಕಂಟ್ರೋಲ್‌ನಲ್ಲಿ ಇಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಆರೋಪಿಸಿದರು. ಕೆಲ ಅಧಿಕಾರಿಗಳು ಬಹಳ ದಿನಗಳಿಂದ ಇಲ್ಲಿಯೆ ಇದ್ದು, ಅವರನ್ನು ಬೇರೆಡೆ ವರ್ಗಾವಣೆ ಮಾಡಿ. ಹೀಗೆ ಮಾಡಿದಲ್ಲಿ ಕೃಷಿ ಇಲಾಖೆ ಸುಧಾರಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಸಭೆಗೆ ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ಜಿಪಂನ ಹೆಚ್ಚುವರಿ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here