ಸುರಪುರ: ಕಳೆದ ವರ್ಷದ ಸಪ್ಟೆಂಬರ್ 1 ರಂದು ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪತ್ರಕರ್ತರಾಗಿ ದುಡಿದು ತೀವ್ರ ಉಸಿರಾಟದಿಂದಾಗಿ ಸಾವನ್ನಪ್ಪಿದ ತಾಲೂಕಿನ ಹಿರಿಯ ಪತ್ರಕರ್ತ ಸೋಮಶೇಖರ ನರಬೋಳಿ ಅವರ ಕುಟುಂಬ ವರ್ಗದವರಿಗೆ ಮುಖ್ಯಮಂತ್ರಿ ವಿಶೇಷ ಪರಿಹಾರ ನಿಧಿಯಿಂದ ರೂ ಮೂರು ಲಕ್ಷದ ಚೆಕ್ ನ್ನು ಶಾಸಕರಾದ ನರಸಿಂಹ ನಾಯಕ ( ರಾಜುಗೌಡ ) ಅವರು ವಿತರಿಸಿದರು. ಕುಟುಂಬದವರ ಪರವಾಗಿ ಅವರ ಸಹೋದರ ಹಾಗೂ ಪತ್ರಕರ್ತ ರವಿಕುಮಾರ ನರಬೋಳಿ ಚೆಕ್ ಸ್ವೀಕರಿಸಿದರು.
ದಿವಂಗತ ಸೋಮಶೇಖರ ನರಬೋಳಿ ಅವರು ಪತ್ರಕರ್ತರಾಗಿ ಒಂದು ದಶಕದ ಅವಧಿಯಲ್ಲಿ ಕನ್ನಡದ ಬೇರೆ ಬೇರೆ ಪತ್ರಿಕೆಗಳಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.ಕಳೆದ ವರ್ಷದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ತನ್ನ ಕರಾಳ ಹಸ್ತ ಚಾಚಿದ ಸಂದರ್ಭದಲ್ಲಿ ಸುರಪುರ ತಾಲೂಕಿನ ವರದಿಗಾರರಾಗಿದ್ದ ಹಾಗು ಕೆಜೆಯು ಸಂಘಟನೆಯ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿದ್ದ ಸೋಮಶೇಖರ ನರಬೋಳಿ ಅವರು ಸೋಂಕಿತರ ಸಂಕಷ್ಟಗಳ ಬಗ್ಗೆ ಹಾಗೂ ಆಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳ ಕುರಿತಾಗಿ ವರದಿಗಳನ್ನು ಮಾಡಿದ್ದರು.
ತದನಂತರ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದರು. ಮೃತ ಪತ್ರಕರ್ತರಿಗೆ ಮಡದಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಅರಿತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್, ತಾಲೂಕು ಅಧ್ಯಕ್ಷರಾದ ರಾಜು ಕುಂಬಾರ ಹಾಗೂ ಹಿರಿಯ ಉಪಾಧ್ಯಕ್ಷರಾದ ಮಲ್ಲು ಗುಳಗಿ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಿಸುವಂತೆ ಶಾಸಕರಿಗೆ ಮನವಿ ಮಾಡಿದ್ದರು.
ಪತ್ರಕರ್ತರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಗಳನ್ನು ಖುದ್ದಾಗಿ ಭೇಟಿಯಾ ಶಾಸಕ ನರಸಿಂಹ ನಾಯಕ (ರಾಜುಗೌಡ) 3ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿಸಿದ್ದರು. ಅಲ್ಲದೆ ತಾವುಕೂಡ ಪತ್ರಕರ್ತ ಸೋಮಶೇಖರ ನರಬೋಳಿ ಕುಟುಂಬಕ್ಕೆ 50 ಸಾವಿರ ರೂಪಾಯಿಗಳ ನೆರವನ್ನೂ ನೀಡಿದ್ದರು.
ಚೆಕ್ ವಿತರಿಸಿದ ಶಾಸಕ ರಾಜುಗೌಡ ಮಾತನಾಡಿ, ” ಸೋಮಶೇಖರ ನರಬೋಳಿ ಅವರು ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಕೊರೋನಾದಂತ ಸಂಕಷ್ಟದ ಸಮಯದಲ್ಲಿ ಜನರ ಕಷ್ಟಗಳನ್ನು ತಮ್ಮ ವರದಿಗಳ ಮೂಲಕ ಗಮಸೆಳೆದಿದ್ದರು. ಅವರ ಸಾವಿನಿಂದ ಕುಟುಂಬ ಸಂಕಷ್ಟದಲ್ಲಿ ಸಿಲುಕಿರುವುದು ತಿಳಿದು ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೆ. ಇದು ನನ್ನ ಕರ್ತವ್ಯ ” ಎಂದು ನರಸಿಂಹ ನಾಯಕ ಅವರು ಹೇಳಿದರು.
ಚೆಕ್ ಸ್ವೀಕರಿಸಿದ ಸೋಮಶೇಖರ ನರಬೋಳಿ ಅವರ ಸಹೋದರ ಹಾಗೂ ಪತ್ರಕರ್ತ ರವಿಕುಮಾರ ನರಬೋಳಿ ಅವರು ಶಾಸಕರ ಪರಿಶ್ರಮದಿಂದಾಗಿ ಚೆಕ್ ದೊರಕಿದೆ ಎಂದರು.
ಈ ಸಂದರ್ಭದಲ್ಲಿ ಡಿ.ಸಿ.ಪಾಟೀಲ್ ಜಿಲ್ಲಾಧ್ಯಕ್ಷರು ಕೆಜೆಯು ಯಾದಗಿರಿ ಬಸವರಾಜ ಅಂಗಡಿ ಬಾಲಪ್ಪ ಕುಪ್ಪಿ ಉಪಾಧ್ಯಕ್ಷರು, ರಾಜು ಕುಂಬಾರ ಕೆಜೆಯು ತಾಲೂಕು ಅಧಕ್ಷರು ಸುರಪುರ ಮಲ್ಲು ಗುಳಗಿ ಉಪಾಧ್ಯಕ್ಷರು ಸುರಪುರ ಹಾಗೂ ಬಾಪುಗೌಡ ಪಾಟೀಲ್ ತಾಲೂಕು ಅಧ್ಯಕ್ಷ ಹುಣಸಗಿ ಬಸವರಾಜ ಕಟ್ಟಿಮನಿ ಪ್ರಧಾನ ಕಾರ್ಯದರ್ಶಿ ಹುಣಸಗಿ ಪರಶುರಾಮ ಮಲ್ಲಿಬಾವಿ ಪ್ರಧಾನ ಕಾರ್ಯದರ್ಶಿ ಸುರಪುರ ಸೇರಿದಂತೆ ಅನೇಕರಿದ್ದರು.