ಸುರಪುರ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ರದ್ದು ಮಾಡಲಾಗಿದ್ದ ಬಸ್‌ಗಳ ಓಡಾಟಕ್ಕೆ ಸುರಪುರ ಘಟಕದಿಂದ ಶಹಾಪುರಕ್ಕೆ ಪೊಲೀಸರ ನೆರವಿನೊಂದಿಗೆ ಓಡಿಸಲಾಗುತ್ತಿದೆ ಎಂದು ಸುರಪುರ ಘಟಕ ವ್ಯವಸ್ಥಾಪಕ ಭದ್ರಪ್ಪ ಅವರು ತಿಳಿಸಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು,ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆಯಿದೆ.ಕೆಲ ಖಾಸಗಿ ವಾಹನಗಳ ಮೂಲಕ ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗಿತ್ತು,ಅಲ್ಲದೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಮ್ಮಲ್ಲಿಯ ಕೆಲ ಚಾಲಕರು ಮತ್ತು ನಿರ್ವಾಹಕರಿಗೆ ಕರೆದು ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದ್ದು,ಸ್ಥಳಿಯ ಪೊಲೀಸರ ನೆರವಿನೊಂದಿಗೆ ಸುರಪುರ ದಿಂದ ಶಹಾಪುರಕ್ಕೆ ಈಗಾಗಲೇ ಒಂದು ಬಸ್ ಕಳುಹಿಸಲಾಗಿದ್ದು ಪ್ರಯಾಣಿಕರು ಹೆಚ್ಚು ಕಂಡುಬಂದಲ್ಲಿ ಇನ್ನೊಂದು ಬಸ್ ಓಡಿಲಾಗುವುದು ಎಂದು ತಿಳಿಸಿದರು.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನಿಲ್ದಾಣಕ್ಕೆ ಬಾರದ ಜನತೆ
ಕಳೆದ ಎರಡು ದಿನಗಳಿಂದ ಬಸ್‌ಗಳ ಓಡಾಟವಿಲ್ಲದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು ಅನೇಕ ಜನ ಬಸ್ ನಿಲ್ದಾಣದಲ್ಲಿ ಬಸ್‌ಗಳು ಇಲ್ಲದಿರುವುದಕ್ಕೆ ಸಾರಿಗೆ ಇಲಾಖೆ ಮತ್ತು ನೌಕರರ ಮೇಲೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿದ್ದು ಯಾವಾಗ ಬಸ್‌ಗಳು ಆರಂಭಗೊಳ್ಳುತ್ತವೆ,ನಾವು ನಿತ್ಯ ಪ್ರಯಾಣಿಸುವವರು ಖಾಸಗಿ ವಾಹನಗಳಿಗೆ ದುಬಾರಿ ಹಣ ನೀಡಿ ಪ್ರಯಾಣಿಸಲಾಗುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ.