ಶಹಾಬಾದ: ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರ ಕನಿಷ್ಠ ದಿನಗೂಲಿ ನ್ಯೂನತೆಯನ್ನು ಸರಿಪಡಿಸಿ ಕೃಷಿ ಕಾರ್ಮಿಕರಿಗೆ ನೀಡುವಷ್ಟು ಕೂಲಿಯನ್ನು ಉದ್ಯೋಗ ಖಾತ್ರಿ ಕೆಲಸಗಾರರಿಗೂ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶುಕ್ರವಾರ ತಾಪಂ ಕಛೇರಿ ಎದುರುಗಡೆ ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗುವವರ ಕನಿಷ್ಠ ವೇತನವನ್ನು ಪರಿಷ್ಕರಿಸಿ ೦೧-೦೪-೨೦೨೧ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು.ಈ ಆದೇಶದ ಪ್ರಕಾರ ಕೃಷಿ ರಂಗದಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರಿಗೆ೪೨೪.೮೦ ರೂ. ಕನಿಷ್ಠ ವೇತನ ಜಾರಿಯಾಗಿರುತ್ತದೆ.
ಈಗ ಕೇಂದ್ರ ಸರ್ಕಾರದ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವವರ ಕನಿಷ್ಠ ದಿನಗೂಲಿಯನ್ನು ಪರಿಷ್ಕರಿಸುವ ಆದೇಶ ಹೊರಡಿಸಿದೆ.೧೫-೦೩-೨೦೨೧ ರಂದು ಹೊರಡಿಸಲಾದ ಆದೇಶದ ಪ್ರಕಾರ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರ ಕನಿಷ್ಠ ದಿನಗೂಲಿ ಕರ್ನಾಟಕದಲ್ಲಿ ಕೇವಲ ೨೮೯ ರೂ. ಆಗಲಿದೆ.ಈ ಎರಡು ಕೂಲಿ ದರಗಳ ನಡುವೆ ೧೩೫ ರೂ.ಯ ಗಣನೀಯವಾದ ವ್ಯತ್ಯಾಸವಿದೆ.ಇದು ಕಾನೂನಿಗೆ ವಿರುದ್ಧವಾಗಿದೆ.ಉದ್ಯೋಗ ಖಾತ್ರಿ ಕೆಲಸಗಾರರ ವೇತನವು ಕೃಷಿ ಕಾರ್ಮಿಕರಿಗೆ ಅಕುಶಲ ಕೆಲಸಕ್ಕೆ ನೀಡುವ ಕನಿಷ್ಠ ದಿನಗೂಲಿಗಿಂತ ಕಡಿಮೆಯಾಗಿರಬಾರದು.ಈ ನ್ಯೂನತೆಯನ್ನು ಸರಿಪಡಿಸಿ ಕೃಷಿ ಕಾರ್ಮಿಕರಿಗೆ ನೀಡುವಷ್ಟು ಕೂಲಿಯನ್ನು ಉದ್ಯೋಗ ಖಾತ್ರಿ ಕೆಲಸಗಾರರಿಗೂ ನೀಡಬೇಕೆಂದು ಒತ್ತಾಯಿಸಿದರು.
ಎಚ್‌ಸಿಜಿ ಕ್ಯಾನ್ಸರ್ ಕೇಂದ್ರ: ಏ.೧೧ ರಿಂದ ಉಚಿತ ಕ್ಯಾನ್ಸರ್ ತಪಾಸಣೆ
ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಗಳು ಗನಗನಕ್ಕೇರುತ್ತಿವೆ.ಗ್ರಾಮೀಣ ಕೂಲಿಕಾರರ ಜೀವನ ದುಸ್ತರವಾಗಿದೆ.ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಅವರ ಅವಲಂಬನೆ ಹೆಚ್ಚಾಗಿದೆ.ಆದ್ದರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ದುಡಿಯುವವರ ಕನಿಷ್ಠ ದಿನಗೂಲಿಯನ್ನು ೬೦೦ ರೂ ಗೆ ಹೆಚ್ಚಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಅಲ್ಲದೇ ತಾಲೂಕಿನ ಮುಗುಳನಾಗಾಂವ, ಹೊನಗುಂಟಾ, ತೊನಸನಹಳ್ಳಿ(ಎಸ್), ಮರತೂರ ಗ್ರಾಪಂಗಳ ಉದೈಓಗ ಖಾತ್ರಿ ಪ್ರಾರಂಭಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಿಐಟಿಯು ಮುಖಂಡ ರಾಮು ಜಾಧವ, ಸುನೀತಾ.ಎಮ್.ಜಿರಕಲ್, ಸಿಐಟಿಯು ಮುಖಂಡೆ ಸಂಪತ್ತಕುಮಾರಿ, ವಿಶ್ವರಾಜ ಫೀರೋಜಬಾದ,ವಿಜಯಕುಮಾರ ಕಂಠಿಕರ್,ಯಲ್ಲಪ್ಪ, ಮಲ್ಲು, ಮಲ್ಲಣ್ಣ ಕಾರೊಳ್ಳಿ ಇತರರು ಇದ್ದರು.