ಕಲಬುರ್ಗಿ : ಅಮಾನವೀಯ ಪದ್ದತಿಯನ್ನು ನಾಶಮಾಡಿ ನಮಗೆ ಸಂವಿಧಾನ ರಚನೆ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಫಲವನ್ನು ಎಲ್ಲ ವರ್ಗದ ಜನರು ಪಡೆದುಕೊಂಡಿದ್ದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 130 ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸ್ಪೃಶ್ಯತೆ ವಿರುದ್ದ ಹೋರಾಟ ಮಾಡಿ ಬಡವರನ್ನು ಹಿಂದುಳಿದವರನ್ನು ಮೇಲ್ವರ್ಗದವರ ಕಪಿ ಮುಷ್ಟಿಯಿಂದ ವಿಮೋಚನೆಗೊಳಿಸಿದ ಮಹಾನ್ ಮಾನವತಾವಾದಿ ಅಂಬೇಡ್ಕರ್. ನಾವೆಲ್ಲರೂ ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಆಗಿದ್ದಾರೆ. ಸತ್ಯವೂ ಎಂದಿಗೂ ಗೆಲ್ಲುತ್ತದೆ. ಮತ್ತೆ ಇತಿಹಾಸ ಮರುಕಳಿಸುತಿದೆ ಎಂದು ಅವರು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಪ್ರವೀಣ್ ಕುಮಾರ್ ಕುಂಬಾರಗೌಡ್ರು ಮುಖ್ಯ ಅತಿಥಿಯಾಗಿ ಮಾತನಾಡಿ
ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸ್ತ್ರೀಯರಿಗೂ ಪುರುಷರಷ್ಟೆ ಸಮಾನತೆ ಕೊಟ್ಟ ಸಮನತವಾದಿ ಅಂಬೇಡ್ಕರ್ ಆಗಿದ್ದಾರೆ.
ರಕ್ತಪಾತವಿಲ್ಲದೆ ಜನತೆಯ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುವ ಅಂಬೇಡ್ಕರರನ್ನು ಇವತ್ತು ನಾವೆಲ್ಲರೂ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಬೇಕಾಗಿದೆ ಎಂದರು. ಸಮಾಜದಲ್ಲಿ ಕಣ್ಣಿಗೆ ಕಟ್ಟುವಂತೆ ಅಸಮಾನತೆ ಇರಬಾರದು. ಸಾಂವಿಧಾನಿಕ ನೈತಿಕತೆಯನ್ನು ಪ್ರತಿಯೊಬ್ಬರೂ ಸದಾ ಆಚರಿಸಬೇಕು, ಎತ್ತಿಹಿಡಿಯಬೇಕು. ಬಹುಸಂಖ್ಯೆಯ ಜನರಿಂದ ಅಲ್ಪಸಂಖ್ಯೆಯ ಜನರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಇರಬಾರದು. ಸಮಾಜದಲ್ಲಿ ನೈತಿಕ ನಡವಳಿಕೆ ಸದಾ ಕ್ರಿಯಾಶೀಲವಾಗಿರಬೇಕು. ಹೀಗೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಭಾರತೀಯ ನಾಗರಿಕ ಪ್ರತಿಯೊಬ್ಬ ಪಾಲಿಸಬೇಕು ಎಂದು ಅವರು ಹೇಳಿದರು.
ಡಾ. ರಾಜಕುಮಾರ ಎಂ. ದಣ್ಣೂರ, ಪ್ರವೀಣ್ ಕುಮಾರ್ ಪಟ್ಟಣಕರ್, ಹಣಮಂತ ತಳಕೇರಿ, ಶರಣಕುಮಾರ ಪಾಟೀಲ, ಶಿವಲಿಂಗ ನಿಂಗಪ್ಪ ಕರನಾಳಕರ್, ಶ್ರೀನಿವಾಸ್, ನಿಖಿಲ್ ಮತ್ತು ಗ್ರಂಥಾಲಯ ಸಿಬ್ಬಂದಿಗಳು ಹಾಜರಿದ್ದರು.