- ಡಾ. ಶಿವರಂಜನ್ ಸತ್ಯಂಪೇಟೆ
ಒಂದುಸಲ ವರ್ಗಕೋಣೆಯಲ್ಲಿ ಗುರುಗಳು ನಮ್ಮ ಶಾಲೆಗೆ ವೀಕ್ಷಕರು ಬರಲಿದ್ದಾರೆ ಎಂದು ವಿದ್ಯಾರ್ಥಿಗಿಗೆ ತಿಳಿಸುತ್ತಾರೆ. ನಾಳೆ ಎಲ್ಲರು ಸ್ವಚ್ಛ ಬಟ್ಟೆ ತೊಟ್ಟುಕೊಂಡು ಬರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಧ್ಯಾಪಕರು ನಾಳೆ ಯಾವ ಪ್ರಶ್ನೆಯನ್ನು ಕೇಳಲಾಗುವುದ ಮತ್ತು ನೀವು ಯಾವ ಉತ್ತರ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಬಾಲಕ ಭೀಮರಾವ ಅವರಿಗೆ ವರ್ಗಕೋಣೆಯಲ್ಲಿ ಎಲ್ಲಕ್ಕಿಂತ ಮೂಲೆಯಲ್ಲಿ ಕುಳಿತುಕೊಳ್ಳಬೇಕು ಎಂದು ಎಚ್ಚರಿಕೆ ಸಹ ನೀಡಿದರು.
ಮರುದಿನ ಎಲ್ಲ ವಿದ್ಯಾರ್ಥಿಗಳು ಸ್ವಚ್ಛ ಬಟ್ಟೆಗಳನ್ನು ಧರಿಸಿ ಬಂದರು. ಆ ದಿನ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವೀಕ್ಷಕರು ಶಾಲೆಗೆ ಬಂದ ತರುವಾಯ ವಿದ್ಯಾರ್ಥಿಗಳ ಎದೆ ಢವ ಢವ ಎನತೊಡಗಿತ್ತು. ಎಲ್ಲರೂ ತಮ್ಮ ತಮ್ಮ ಕ್ಲಾಸ್ ರೂಂಗಳಿಗೆ ಹೋದರು. ಕೆಲ ಸಮಯದ ನಂತರ ಭೀಮರಾವ ಇರುವ ವರ್ಗಕೋಣೆಗೆ ವೀಕ್ಷಕರು ಆಗಮಿಸಿದರು. ವೀಕ್ಷಕರು ಕೋಣೆಯೊಳಗೆ ಕಾಲಿಟ್ಟ ಕೂಡಲೇ ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು ಆ ಅಧಿಕಾರಿಗಳನ್ನು ಸ್ವಾಗತಿಸಿದರು.
ಆಗ ವೀಕ್ಷಕರು ಎಲ್ಲ ಮಕ್ಕಳಿಗೆ ಕೂಡಲು ಹೇಳಿ, “ಮಕ್ಕಳೇ ಈ ಪ್ರಪಂಚದಲ್ಲಿ ನಾವು ಒಂದು ವಸ್ತುವನ್ನು ನೋಡಬಹುದು. ಆದರೆ ಅದನ್ನು ಮುಟ್ಟಲು ಸಾಧ್ಯವಿಲ್ಲ. ಆ ವಸ್ತು ಯಾವುದು” ಎಂದು ಪ್ರಶ್ನಿಸಿದರು. ಎಲ್ಲರಿಗೂ ಪ್ರಶ್ನೆಯ ಉತ್ತರ ಗೊತ್ತಿತ್ತು. ಹೀಗಾಗಿ ಎಲ್ಲರೂ ಕೈ ಎತ್ತ ಸರ್, ಸೂರ್ಯನನ್ನು ನಾವು ನೋಡಬಹುದು. ಆದರೆ ಮುಟ್ಟಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಮಕ್ಕಳ ಈ ಉತ್ತರ ಕೇಳಿ ವೀಕ್ಷಕರು ಸಂತೋಷ ವ್ಯಕ್ತಪಡಿಸಿದರು. ಬಾಲಕ ಭೀಮರಾವ ಮಾತ್ರ ತಮ್ಮ ಕೈ ಹಾಗೆ ಮೇಲೆ ಹಿಡಿದಿದ್ದರು. ವೀಕ್ಷಕರು ಆಶ್ಚರ್ಯದಿಂದ ಆ ಬಾಲಕನ ಕಡೆಗೆ ನೋಡಿ ಇನ್ನೂ ಏಕೆ ಕೈ ಮೇಲೆ ಎತ್ತಿರುವೆ? ಪ್ರಶ್ನೆಗೆ ಉತ್ತರವಂತೂ ಸಿಕ್ಕಿದೆಯಲ್ಲ! ಎಂದರು.
ಇಲ್ಲ ಸರ್, ಈ ಪ್ರಶ್ನೆಗೆ ನನ್ನ ಬಳಿ ಇನ್ನೊಂದು ಉತ್ತರ ಇದೆ ಎಂದು ಹೇಳಿದ. ಆಗ ವೀಕ್ಷಕರು ಸರಿ ಹಾಗಾದರೆ ಇನ್ನೊಂದು ಉತ್ತರ ಯಾವುದು? ನಾವು ಕೂಡ ಆ ಬಗ್ಗೆ ತಿಳಿಯಬಹುದು ಎಂದು ಕೇಳಿದರು. ಆಗ ಭೀಮರಾವ ಅಲ್ಲಿಯೇ ಇದ್ದ ನೀರಿನ ಕೊಡದ ಕಡೆ ಕೈ ಮಾಡಿ “ಈ ಕೊಡವನ್ನು ನಾವು ನೋಡಬಹುದು. ಆದರೆ ನಾವು ಅಸ್ಪೃಶ್ಯರಾಗಿರುವುದರಿಂದ ಮುಟ್ಟಲು ಆಗುವುದಿಲ್ಲ” ಎಂದು ಉತ್ತರಿಸಿದ. ಬಾಲಕ ಭೀಮರಾವ ಅವರ ಈ ಉತ್ತರ ಕೇಳಿದ ವೀಕ್ಷಕರು ಕಕ್ಕಾಬಿಕ್ಕಿಯಾದರು. ಬಾಲಕನ ಈ ಉತ್ತರಕ್ಕೆ ಪ್ರತಿಯಾಗಿ ಹೇಳಲು ಆ ವೀಕ್ಷಕರಲ್ಲಿ ಯಾವುದೇ ಬಗೆಯ ಸಮಜಾಯಿಸಿ ಕೊಡಲು ಆಗಲಿಲ್ಲ. ಹೀಗಾಗಿ ಒಂದೂ ಮಾತು ಆಡದೆ ವರ್ಗಕೋಣೆಯಿಂದ ಅವರು ಹೊರಟು ಹೋದರು.
ಭೀಮರಾವ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಹೇಗೆ ವಿಭಿನ್ನವಾಗಿ ಆಲೋಚಿಸುತ್ತಿದ್ದರು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. “ಬೆಳೆವ ಸಿರಿ ಮೊಳಕೆಯಲ್ಲಿ ಕಾಣು” ಎನ್ನುವ ಮಾತಿನಂತೆ ಭೀಮರಾವ ಅಂಬೇಡ್ಕರ್ ಅವರು ಮುಂದೊಂದು ದಿನ, ಇಡೀ ಜಗತ್ತಿಗೆ ಮಾದರಿಯಾದ ಭಾರತದ ಸಂವಿಧಾನವನ್ನು ರಚಿಸುತ್ತಾರೆ. ತಾವು ಬಾಲ್ಯದಲ್ಲಿ ಕಂಡುಂಡ ನೋವು, ಅಪಮಾನ ಸಹಿಸಿಕೊಂಡು ತನ್ನ ಅಸ್ಪೃಶ್ಯ ಜನಾಂಗ ಹೀಗೆ ತಲೆ ತಗ್ಗಿಸಿ ಬದುಕಬಾರದು. ಅವರು ತಲೆ ಎತ್ತಿ ನಡೆಯುವಂತಾಗಬೇಕು ಎಂಬ ಕನಸು ಕಂಡಿದ್ದರು. ಆ ಕನಸನ್ನು ಸಂವಿಧಾನದಲ್ಲಿ ನನಸಾಗಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಈ ಸಾಧನೆಯನ್ನು ಗಮನಿಸಿದರೆ, ನೆಲದಲ್ಲಿ ಹುಟ್ಟಿದ ಬಸವನ ಹುಳು ಹೇಗೆ ಮುಗಿಲೆತ್ತರಕ್ಕೆ ಬೆಳೆದು ನಿಂತಿತು ಎಂಬುದು ನಮಗೆ ಮನದಟ್ಟಾಗಬಲ್ಲದು. ಅವರ ಜ್ಞಾನದಾಹ ಇಂದಿನ ವಿದ್ಯಾರ್ಥಿ ಹಾಗೂ ಯುವಕರು ಬೆಳೆಸಿಕೊಳ್ಳಬೇಕಾಗಿದೆ.
ರಾಜಿನಾಮೆಗೆ ಈ ಮೂವರು ಮಾದರಿ: ಇಂದಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸವುದಾದರೆ ದಿನಾಲು ಪರಸ್ಪರ (ಆಡಳಿತ ಪಕ್ಷ-ವಿರೋಧಪಕ್ಷ) ಆಯಾ ಪಕ್ಷಗಳ ಪ್ರಮುಖರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಮಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ಮಾದರಿಯಾಗಬೇಕಾಗಿದೆ.
ರೋಹಿಣಿ ನದಿ ನೀರು ಹಂಚಿಕೆ ಹಿನ್ನಲೆಯಲ್ಲಿ ತಮ್ಮವರಿಗೆ ನೀರು ಕೊಡಲಾಗುವುದಿಲ್ಲವಲ್ಲ ಎಂದು ತನ್ನ ರಾಜಕುಮಾರ ಪದವಿಯನ್ನು ಬುದ್ಧ (ಸಿದ್ಧಾರ್ಥ) ತ್ಯಾಗ ಮಾಡುತ್ತಾರೆ. ಜಾತಿ ಮತಗಳಿಲ್ಲದ ಸಮ ಸಮಾಜ ಕಟ್ಟುವುದಕ್ಕಾಗಿ ಅಂತರ್ಜಾತಿ ವಿವಾಹ ನಡೆಯುತ್ತದೆ. ತುಳಿತಕ್ಕೊಳಗಾಗದವರ ಪರ ನನಗೆ ನಿಲ್ಲಲಾಗುತ್ತಿಲ್ಲವಲ್ಲ ಎಂದು ಬಿಜ್ಜಳನ ಆಸ್ಥಾನದ ತನ್ನ ಮಂತ್ರಿ ಪದವಿಗೆ ಬಸವಣ್ಣನವರು ರಾಜೀನಾಮೆ ನೀಡುತ್ತಾರೆ.
ಅದರಂತೆ ಬಿ.ಆರ್. ಅಂಬೇಡ್ಕರ್ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗಾಗಿ ಹಿಂದು ಕೋಡ್ ಬಿಲ್ ಮಂಡಿಸುತ್ತಾರೆ. ಆದರೆ ಅದು ಲೋಕಸಭೆಯಲ್ಲಿ ಬಿದ್ದು ಹೋಗುತ್ತದೆ. ಮಹಿಳೆಯರ ಉನ್ನತಿಗೆ ನನ್ನಿಂದ ಸಹಾಯ ಮಾಡಲಾಗುತ್ತಿಲ್ಲವಲ್ಲ ಎಂದು ಹೇಳಿ ತಮ್ಮ ಮಂತ್ರಿ ಪದವಿಗೆ ಅವರು ರಾಜೀನಾಮೆ ನೀಡುತ್ತಾರೆ. ಅಷ್ಟೇ ಏಕೆ ಸ್ವತಂತ್ರ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಅವಧಿಯಲ್ಲಾದ ರೈಲ್ವೆ ದುರಂತ ಕಂಡು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರೆ.
ಮೇಲಿನ ಈ ಘಟನೆಗಳು ನಮ್ಮ ಇಂದಿನ ರಾಜಕಾರಣಿಗಳಿಗೆ ಮಾದರಿ ಮತ್ತು ಆದರ್ಶದ ನಡೆಗಳು ಆಗುವುದು ಇನ್ಯಾವಾಗ?