ಸಿನಿಮಾ ಲೋಕದ ಧ್ರುವತಾರೆ ಚಾರ್ಲಿ ಚಾಪ್ಲಿನ್ ರವರ 132ನೇ ಜನ್ಮದಿನ

0
51

ಈ ಸಂದರ್ಭದಲ್ಲಿ , ಹಿಟ್ಲರ್ ಬದುಕಿದ್ದಾಗಲೇ ನಿರ್ಮಿಸಿದ ಚಾಪ್ಲಿನ್ ರ ಅಸಮ ಧೈರ್ಯದ ಅದ್ಭುತ ಕೃತಿ ‘ದಿ ಗ್ರೇಟ್ ಡಿಕ್ಟೇಟರ್’ ಚಲನಚಿತ್ರದ ಐತಿಹಾಸಿಕ ಭಾಷಣ…

ಮಾನವ ಜನಾಂಗದ ಬಗೆಗಿನ ಅವರ ಅಪರಿಮಿತ ಭಾವನೆಗಳ ಸ್ಪಷ್ಟ ಅಭಿವ್ಯಕ್ತಿ….!!

Contact Your\'s Advertisement; 9902492681

‘ದಿ ಗ್ರೇಟ್ ಡಿಕ್ಟೇಟರ್’

ಸಿನಿಮಾದಲ್ಲಿನ ಚಾರ್ಲಿ ಚಾಪ್ಲಿನ್ ಭಾಷಣದ ಕನ್ನಡ ಅನುವಾದ ಒಂದು ತುಣುಕು ಇಲ್ಲಿದೆ.

“ನನ್ನನ್ನು ಕ್ಷಮಿಸಿ, ನನಗೆ ಸರ್ವಾಧಿಕಾರಿಯಾಗುವ ಆಸೆಯಿಲ್ಲ. ಅದು ನನ್ನ ಕೆಲಸವಲ್ಲ. ನನಗೆ ಯಾರನ್ನೂ ಆಳುವ ಅಥವಾ ಕೈವಶ ಮಾಡಿಕೊಳ್ಳುವ ಆಕಾಂಕ್ಷೆ ಇಲ್ಲ. ಸಾಧ್ಯವಾದರೆ ನಾನು ಎಲ್ಲರಿಗೂ ಸಹಾಯ ಮಾಡಬೇಕು. ಯಹೂದಿಗಳಿಗೂ, ಯಹೂದಿಗಳಲ್ಲದವರಿಗೂ, ಕಪ್ಪು ಜನರಿಗೂ, ಬಿಳಿಯ ಜನರಿಗೂ, ಎಲ್ಲರಿಗೂ.”

“ನಾವೆಲ್ಲರೂ ಪರಸ್ಪರ ಸಹಾಯ ಮಾಡಲು ಇಷ್ಟಪಡುತ್ತೇವೆ. ಮನುಷ್ಯರ ಸ್ವಭಾವವೇ ಹಾಗೆ. ನಾವು ಮತ್ತೊಬ್ಬರ ಸಂತೋಷದಲ್ಲಿ ಬದುಕಬೇಕೆಂದು ಬಯಸುತ್ತೇವೆ, ಇನ್ನೊಬ್ಬರ ಸಂಕಷ್ಟದ ಲಾಭ ಪಡೆದು ಅಲ್ಲ. ಇತರರನ್ನು ದ್ವೇಷಿಸುವ ಮತ್ತು ತಾತ್ಸಾರ ಮಾಡುವ ಇಚ್ಛೆ ನಮಗಿಲ್ಲ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಸ್ಥಳವಿದೆ. ಈ ಭೂಮಿ ಸಂಪದ್ಭರಿತವಾಗಿದೆ ಮತ್ತು ಎಲ್ಲರ ಅವಶ್ಯಕತೆಯನ್ನೂ ಪೂರೈಸಬಲ್ಲದು.”

“ಬದುಕಿನ ದಾರಿ ಸುಂದರವೂ, ಮುಕ್ತವೂ ಆಗಿರಲು ಸಾಧ್ಯವಿದೆ. ಆದರೆ ನಾವು ದಾರಿ ತಪ್ಪಿದ್ದೇವೆ. ದುರಾಸೆ ಮನುಷ್ಯರ ಆತ್ಮಗಳನ್ನು ವಿಷಮಯಗೊಳಿಸಿದೆ. ಜಗತ್ತಿನ ಸುತ್ತ ದ್ವೇಷದ ಗೋಡೆಗಳನ್ನು ಎಬ್ಬಿಸಿದೆ. ನಮ್ಮನ್ನು ಯಾತನೆಗೂ ಮತ್ತು ರಕ್ತಪಾತಕ್ಕೂ ತಳ್ಳಿದೆ. ನಾವು ವೇಗವನ್ನು ಸಾಧಿಸಿದ್ದೇವೆ. ಆದರೆ ನಮ್ಮ ಮನಸ್ಸುಗಳನ್ನು ಮುಚ್ಚಿಬಿಟ್ಟಿದ್ದೇವೆ.

ನಮಗೆ ಸಮೃದ್ಧಿಯನ್ನು ನೀಡಬೇಕಾದ ಯಂತ್ರಗಳು ನಮ್ಮನ್ನು ಇನ್ನೂ ಕೊರತೆಯಲ್ಲಿಯೇ ಉಳಿಸಿವೆ. ನಮ್ಮ ತಿಳುವಳಿಕೆ ನಮ್ಮನ್ನು ಸಿನಿಕರನ್ನಾಗಿಯೂ, ನಮ್ಮ ಚಾಣಾಕ್ಷತೆ ನಮ್ಮನ್ನು ಕಲ್ಲು ಹೃದಯದವರು ಮತ್ತು ನಿಷ್ಕರುಣಿಗಳನ್ನಾಗಿಸಿದೆ. ನಾವು ಅತಿಯಾಗಿ ಯೋಚಿಸುತ್ತೇವೆ, ಆದರೆ ಭವನೆಗಳು ಕ್ಷೀಣಿಸುತ್ತಿವೆ. ಯಂತ್ರಗಳಿಗಿಂತ ಮುಖ್ಯವಾಗಿ ನಮಗೆ ಮನುಷ್ಯತ್ವ ಬೇಕಾಗಿದೆ. ಚಾಣಾಕ್ಷತನಕ್ಕಿಂತ ಹೆಚ್ಚಾಗಿ ನಮಗೆ ಕರುಣೆ ಮತ್ತು ಸಹೃದಯತೆ ಬೇಕಿದೆ. ಈ ಗುಣಗಳಿಲ್ಲದೆ ಹೋದಲ್ಲಿ ಬದುಕು ಹಿಂಸಾತ್ಮಕವಾಗುತ್ತದೆ ಮತ್ತು ಎಲ್ಲವೂ ನಿರ್ನಾಮವಾಗುತ್ತದೆ.”

“ವಿಮಾನ ಮತ್ತು ರೇಡಿಯೊ ಮನುಷ್ಯರ ನಡುವಿನ ದೂರವನ್ನು ಕಡಿಮೆ ಮಾಡಿವೆ. ಈ ಆವಿಷ್ಕರ ಗಳಲ್ಲಿ ಅಡಕವಾಗಿರುವ ಸಹಜ ಸ್ವಭಾವವೇ ಮಾನವನಲ್ಲಿ ಒಳ್ಳೆಯತನಕ್ಕಾಗಿ ಮೊರೆಯಿಡುತ್ತದೆ. ಸಾರ್ವತ್ರಿಕ ಭ್ರಾತೃತ್ವ ಮತ್ತು ಮಾನವರ ಐಕ್ಯತೆಗೆ ಕರೆ ನೀಡುತ್ತದೆ. ಈಗಲೂ ನನ್ನ ಧ್ವನಿ ಪ್ರಪಂಚದಾದ್ಯಂತ ಮಿಲಿಯಾಂತರ ಜನರನ್ನು ಮುಟ್ಟುತ್ತಿದೆ. ಮುಗ್ಧ ಜನರನ್ನು ಯಾತನೆಗೊಳಪಡಿಸುವ ಮತ್ತು ಬಂಧಿಸುವ ವ್ಯವಸ್ಥೆಗೆ ಬಲಿಪಶುಗಳಾಗಿರುವ, ಹತಾಶರಾಗಿರುವ ಮಿಲಿಯಾಂತರ ಸ್ತ್ರೀ-ಪುರುಷರಿಗೆ, ಪುಟ್ಟ ಮಕ್ಕಳಿಗೆ ತಲುಪುತ್ತಿದೆ.

ನನ್ನ ಮಾತನ್ನು ಕೇಳುತ್ತಿರುವ ಎಲ್ಲರಿಗೂ ನಾನು ಹೇಳುವುದಿಷ್ಟೇ: ‘ಹತಾಶರಾಗಬೇಡಿ’, ನಾವು ಇಂದು   ಅನುಭವಿಸುತ್ತಿರುವ ಸಂಕಷ್ಟವು ಮಾನವನ ಪ್ರಗತಿಯ ಪಥವನ್ನು ಕಂಡರೆ ಹೆದರುವ ಜನಗಳ ಮನಸ್ಸಿನಲ್ಲಿರುವ ವಿಷ ಮತ್ತು ದುರಾಶೆಗಳ ಕಾರಣದಿಂದಾಗಿ ಬಂದೆರಗಿದೆ. ಒಂದು ದಿನ ಮನುಷ್ಯರ ದ್ವೇಷ ನಾಶವಾಗುತ್ತದೆ. ಸರ್ವಾಧಿಕಾರಿಗಳು ಸಾಯುತ್ತಾರೆ, ಯಾವ ಅಧಿಕಾರವನ್ನು ಅವರು ಜನರಿಂದ ಕಸಿದುಕೊಂಡರೋ ಅದು ಜನರಿಗೇ ಮರಳುತ್ತದೆ. ಎಲ್ಲಿಯವರೆಗೂ ಮನುಷ್ಯರು ಸ್ವಾತಂತ್ರ್ಯಕ್ಕಾಗಿ ಸಾಯಲು ಸಿದ್ಧರಿರುತ್ತಾರೋ ಅಲ್ಲಿಯವರೆಗೂ ಸ್ವಾತಂತ್ರ್ಯಕ್ಕೆ ಸಾವಿಲ್ಲ.”

“ಯೋಧರೇ! ನೀವು ಈ ಮೃಗಗಳಿಗೆ – ನಿಮ್ಮನ್ನು ತಿರಸ್ಕರಿಸುವ, ಗುಲಾಮರಾಗಿಸುವ, ಯಂತ್ರಗಳಂತೆ ನಿಯಂತ್ರಿಸುವ ಮತ್ತು ನೀವೇನು ಮಾಡಬೇಕು, ಏನು ಯೋಚಿಸಬೇಕು, ಯಾವ ಭಾವನೆಯನ್ನು ಅನುಭವಿಸಬೇಕು ಎಂಬುದನ್ನು ನಿರ್ಧರಿಸುವ ಮೃಗಗಳಿಗೆ – ಶರಣಾಗಬೇಡಿ. ನಿಮ್ಮನ್ನು ಕವಾಯಿತು ಮಾಡಿಸುವ, ನಿಮ್ಮ ಆಹಾರವನ್ನು ನಿಯಂತ್ರಿಸುವ, ನಿಮ್ಮನ್ನು ಪಶುಗಳಂತೆ ….ಫಿರಂಗಿಯ ಹಸಿವು ನೀಗಿಸುವ ಮೇವಿನಂತೆ ಉಪಯೋಗಿಸಿಕೊಳ್ಳುವ, ಯಂತ್ರದ ಹೃದಯ, ಯಂತ್ರದ ಮನಸ್ಸುಗಳ ಯಂತ್ರಮಾನವರಿಗೆ ಶರಣಾಗಬೇಡಿ. ನೀವು ಯಂತ್ರಗಳಲ್ಲ, ನೀವು ಮನುಷ್ಯರು! ಹೃದಯದಲ್ಲಿ ಮಾನವತೆಯ ಬಗ್ಗೆ ಪ್ರೀತಿಯುಳ್ಳ ಮನುಷ್ಯರು.

ನೀವು ಯಾರನ್ನೂ ದ್ವೇಷಿಸಬೇಡಿ! ಪ್ರೀತಿ ಗೊತ್ತಿಲ್ಲದವರು ಮಾತ್ರ ದ್ವೇಷಿಸುತ್ತಾರೆ, ಪ್ರೀತಿಸಲ್ಪಡದವರು ಮತ್ತು ಅಸಹಜ ವ್ಯಕ್ತಿಗಳು ಮಾತ್ರ ದ್ವೇಷಿಸುತ್ತಾರೆ! ಯೋಧರೇ, ನೀವು ಗುಲಾಮಗಿರಿಗೋಸ್ಕರ ಹೋರಾಡಬೇಡಿ! ಸ್ವಾತಂತ್ರ್ಯಕ್ಕಾಗಿ ಹೋರಾಡಿ! ಸೆಂಟ್ ಲೂಕನ ಹದಿನೇಳನೇ ಅಧ್ಯಾಯದಲ್ಲಿ ‘ದೇವರ ರಾಜ್ಯ ಮಾನವನೊಳಗಿದೆ’ ಎಂದು ಬರೆದಿದೆ.

ಅದು ಒಬ್ಬ ಮಾನವನಲ್ಲಿ ಅಲ್ಲ, ಒಂದು ಗುಂಪಿನಲ್ಲಿರುವ ಮಾನವರಲ್ಲಿ ಮಾತ್ರ ಅಲ್ಲ, ಬದಲಾಗಿ ಎಲ್ಲಾ ಮಾನವರಲ್ಲಿ. ನಿಮ್ಮಲ್ಲಿ ಸಹ. ನಿಮ್ಮಲ್ಲಿ ಶಕ್ತಿಯಿದೆ. ಯಂತ್ರಗಳನ್ನು ಸೃಷ್ಟಿಸುವ ಶಕ್ತಿ, ಸಂತೋಷವನ್ನು ಸೃಷ್ಟಿಸುವ ಶಕ್ತಿ. ಈ ಬದುಕನ್ನು ಸ್ವತಂತ್ರವೂ, ಸುಂದರವೂ, ಒಂದು ಅದ್ಭುತ ಸಾಹಸಯಾತ್ರೆಯನ್ನಾಗಿ ಪರಿವರ್ತಿಸುವ ಶಕ್ತಿಯನ್ನು ನೀವು ಹೊಂದಿದ್ದೀರಿ. ಆದ್ದರಿಂದಲೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವೆಲ್ಲರೂ ಒಂದಾಗೋಣ. ನಿಮ್ಮ ಆ ಶಕ್ತಿಯನ್ನು ಉಪಯೋಗಿಸೋಣ. ಯಾವ ಜಗತ್ತು ದುಡಿಯುವ ಕೈಗೆ ಕೆಲಸ ಮಾಡಲು ಅವಕಾಶ ಕೊಡುತ್ತದೋ, ಯಾವುದು ಯುವಕರಿಗೆ ಭವಿಷ್ಯವನ್ನೂ, ವೃದ್ದರಿಗೆ ರಕ್ಷಣೆಯನ್ನೂ ಒದಗಿಸುತ್ತದೋ ಅಂತಹ ಜಗತ್ತಿಗಾಗಿ ನಾವು ಹೋರಾಡೋಣ.”

“ಈ ಆಶ್ವಾಸನೆಗಳನ್ನೇ ನಿಮಗೆ ನೀಡುತ್ತಾ ಇಂದು ಮೃಗಗಳು ಅಧಿಕಾರಕ್ಕೆ ಬಂದಿವೆ. ಆದರೆ ಅವರು ನಿಜ ಹೇಳುತ್ತಿಲ್ಲ! ಆ ಆಶ್ವಾಸನೆಗಳನ್ನು ಅವರು ಪೂರೈಸುವುದಿಲ್ಲ. ಎಂದೆಂದಿಗೂ ಪೂರೈಸುವುದಿಲ್ಲ! ಸರ್ವಾಧಿಕಾರಿಗಳು ತಾವು ಮಾತ್ರ ಸ್ವತಂತ್ರರಾಗುತ್ತಾರೆ, ಆದರೆ ಜನರನ್ನು ಗುಲಾಮಗಿರಿಗೆ ತಳ್ಳುತ್ತಾರೆ. ಆದರೆ ನಾವು ಆ ಆಶ್ವಾಸನೆಗಳನ್ನು ಪೂರೈಸಲು ಹೋರಾಡೋಣ! ಜಗತ್ತನ್ನು ಬಿಡುಗಡೆಗೊಳಿಸಲು ನಾವು ಹೋರಾಡೋಣ. ರಾಷ್ಟ್ರೀಯ ಗಡಿಗಳನ್ನು ಕೊನೆಗಾಣಿಸಲು, ದುರಾಶೆ, ದ್ವೇಷ ಹಾಗೂ ಅಸಹನೆಗೆ ಕೊನೆ ಹಾಕಲು ಹೋರಾಡೋಣ. ಒಂದು ಪ್ರಜ್ಞಾಪೂರ್ವಕ ಜಗತ್ತನ್ನು ಕಟ್ಟಲು ಹೋರಾಡೋಣ. ಯಾವ ಜಗತ್ತಿನಲ್ಲಿ ವಿಜ್ಞಾನ ಮತ್ತು ಪ್ರಗತಿಯು ಎಲ್ಲಾ ಜನಗರಿಗೂ ಸಂತೋಷ ತರುತ್ತದೋ ಆ ಜಗತ್ತಿಗಾಗಿ! ಯೋಧರೇ, ಬನ್ನಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವೆಲ್ಲರೂ ಒಂದಾಗೋಣ!!

✍️ *ಭೀಮಾಶಂಕರ್ ಪಾಣೇಗಾಂವ್* ಹವ್ಯಾಸಿ ಬರಹಗಾರರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here