ಕಲಬುರಗಿ: ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ವರ್ಷದ ೩೬೫ ದಿನವೂ ಅವಿರತವಾಗಿ ಶ್ರಮಿಸುವುದರ ಜತೆಗೆ ಕನ್ನಡ ಸಾಹಿತ್ಯದ ಸೌಗಂಧವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಕೊಂಡೊಯ್ಯುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ನಗರದಲ್ಲಿ ತಮ್ಮ ಸಾಂಸ್ಕೃತಿಕ ಬಳಗದ ಸಮ್ಮುಖದಲ್ಲಿ ಜರುಗಿದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇ ೯ ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷದ ೩೬೫ ದಿನವೂ ಒಂದಿಲ್ಲೊಂದು ವಿಶಿಷ್ಟ ಮತ್ತು ವಿಭಿನ್ನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಹೊಸ ವಾತಾವರಣ ಸೃಷ್ಠಿಸುವುದಾಗಿ ಹೇಳಿದರು.
ಎಲ್ಲ ಕನ್ನಡಪರ ಸಂಘಟನೆಗಳು ಮತ್ತು ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗಿನ ಎಲ್ಲ ಶಿಕ್ಷಕ ಹಾಗೂ ಸರಕಾರಿ ನೌಕರರ ವೃಂದದ ಜ್ಞಾನದ ಸಂಪನ್ಮೂಲ ಬಳಸಿಕೊಂಡು ಸಾಹಿತ್ಯ ಪರಿಷತ್ತನ್ನು ಕ್ರಿಯಾಶೀಲಗೊಳಿಸಲು ಪ್ರಯತ್ನಿಸಲಾಗುವುದು. ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಸರಕಾರಿ ಆಶ್ರಯವಿಲ್ಲದೆಯೇ ಖಾಸಗಿ ನೆಲೆಯಲ್ಲಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಘಟನೆಯೊಂದಿಗೆ ಕನ್ನಡಮ್ಮನ ಕಾರ್ಯ ಸೇವೆರಯೇ ಎನ್ನ ಜೀವದುಸಿರಾಗಿಸಿಕೊಂಡು ತೆರೆಮರೆಯಲ್ಲಿರುವ ಅನೇಕ ಪ್ರತಿಭೆಗಳಿಗೆ ತಮ್ಮ ಸಹಕಾರದ ಬಲದಿಂದ ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಸಾಪ ಚುನಾವಣೆ: ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಅವರಿಂದ ಪ್ರಣಾಳಿಕೆ ಬಿಡುಗಡೆ
ಸಮಗ್ರ ಸಮಾಜದ ಪರಿವರ್ತನೆಯನ್ನು ಉದ್ದೇಶಿಸಿ ಯೋಜಿಸಿದ ರಾಜ್ಯ ಮಟ್ಟದ ಅನೇಕ ವಿವಿಧ ಸಾಹಿತ್ಯ ಸಮ್ಮೇಳನಗಳು, ಸಾಹಿತ್ಯ ಸಂಭ್ರಮ, ಪೊಲೀಸ್ ಸಾಹಿತಿಗಳ ಸಮಾವೇಶ, ಶಿಕ್ಷಕರ ಚಿಂತನಾ ಸಮಾವೇಶ, ಹರಟೆ, ಪತ್ರಕರ್ತರ ವಿಶೇಷ ಕವಿಗೋಷ್ಠಿಗಳು ಸೇರಿದಂತೆ ಈ ನೆಲದ ಇತಿಹಾಸವನ್ನು ಪ್ರತಿಬಿಂಬಿಸುವ ಆಲೋಚನಾಪೂರ್ಣ ಮತ್ತು ಆರೋಗ್ಯಪೂರ್ಣ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯದ ಚಿಂತನಾ ನೆಲೆಗಟ್ಟಿನಲ್ಲಿ ನಡೆಸಿಕೊಂಡು ಬಂದಿರುತ್ತೇನೆ. ಈ ರೀತಿಯಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರೇರಣೆಯಿಂದಾಗಿ ಸಾರಸ್ವತ ಲೋಕಕ್ಕೆ ಹನ್ನೆರಡು ಕೃತಿಗಳನ್ನು ಸಂಪಾದಿಸಿ, ರಚಿಸಿ ಸಮರ್ಪಿಸಿದ್ದೇನೆ.
ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಗುಲಬರ್ಗ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಕುಲಕರ್ಣಿ ಕೋಗನೂರ, ನಿವೃತ್ತ ಶಿಕ್ಷಕ ಕರಬಸಯ್ಯ ಮಠ, ಕನ್ನಡ ಅಬಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಡಿ.ಬಡಿಗೇರ, ಕನ್ನಡಪರ ಚಿಂತಕ ಶಕೀಲ್ ಅಹ್ಮದ್ ಮಿಯ್ಯಾ, ಕವಿಗಳಾದ ನಾಗೇಂದ್ರಪ್ಪ ಮಾಡ್ಯಾಳೆ, ಪ್ರಭುಲಿಂಗ ಮೂಲಗೆ, ಶರಣರಾಜ್ ಛಪ್ಪರಬಂದಿ, ರವಿಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಎಂ.ಎಸ್.ಪಾಟೀಲ ನರಿಬೋಳ, ಸತೀಶ ಸಜ್ಜನಶೆಟ್ಟಿ, ವಿದ್ಯಾಸಾಗರ ದೇಶಮುಖ, ಶಿವರಾಜ ಅಂಡಗಿ, ಮಾಲತಿ ರೇಷ್ಮಿ, ಪ್ರೊ.ಯಶವಂತರಾಯ ಅಷ್ಠಗಿ, ಶಿವಾನಂದ ಮಠಪತಿ, ಶರಣಬಸವ ಜಂಗಿನಮಠ, ವಿಶ್ವನಾಥ ತೊಟ್ನಳ್ಳಿ, ಹಣಮಂತರಾಯ ಅಟ್ಟೂರ, ಗುರುಬಸಪ್ಪ ಸಜ್ಜನಶೆಟ್ಟಿ, ಧರ್ಮಣ್ಣ ಧನ್ನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಭಾಗದ ಸಾವಿರಾರು ಜನರಿಗೆ ವೇದಿಕೆ ನೀಡಿರುವ ಸಂಘಟಕ-ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ. – ಕಾವ್ಯಶ್ರೀ ಮಹಾಗಾಂವಕರ್, ಕಾದಂಬರಿಕಾರ್ತಿ
ಹೆಚ್ಚಿನ ಸಂಖ್ಯೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಲು ಮತ್ತು ನುಡಿ ಸೇವೆಗೈಯ್ಯಲು ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸಂಘಟಕ-ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಆಶೀರ್ವದಿಸಲಿದ್ದಾರೆ. ಜಿಲ್ಲೆಯಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. – ಸುರೇಶ ಬಡಿಗೇರ, ಸದಸ್ಯರು, ಕನ್ನಡ ಆಬಿವೃದ್ದಿ ಪ್ರಾಧಿಕಾರ