ವಾಡಿ: ಮಹಾಮಾರಿ ಕೊರೊನಾ ವೈರಸ್ ಸಂಕಷ್ಟದ ಲಾಕ್ಡೌನ್ ಫಜೀತಿಗೆ ಸಿಲುಕಿ ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರು ಗುರುವಾರ ವಾಡಿ ಪಟ್ಟಣದಲ್ಲಿ ಆನ್ಲೈನ್ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಟೀಚರ್ ಅಸೋಸಿಯಷನ್ ಸ್ಕೂಲ್ ಆಫ್ ಕರ್ನಾಟಕ ಹಾಗೂ ಕಾಲೇಜ್ ಇನ್ವರ್ಸಿಟಿ ಲಕ್ಚರ್ ಅಸೋಸಿಯೇಷನ್ ಸಂಘಟನೆಗಳು ಕರೆ ನೀಡಿದ ರಾಜ್ಯಮಟ್ಟದ ಆನ್ಲೈನ್ ಚಳಿವಳಿ ಬೆಂಬಲಿಸಿ ಪೋಸ್ಟರ್ ಪ್ರದರ್ಶನ ನಡೆಸಿದರು. ಕೊವಿಡ್ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಮಾಸಿಕ ವೇತನ ಹಾಗೂ ಉದ್ಯೋಗ ಭದ್ರತೆ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕ ಆರ್.ಕೆ.ವೀರಭದ್ರಪ್ಪಾ, ಖಾಸಗಿ ಶಾಲಾ ಕಾಲೇಜುಗಳ ಗಗನಚುಂಬಿ ಕಟ್ಟಡಗಳಿಗೆ ಶಿಕ್ಷಕರೇ ಆಧಾರ ಸ್ತಂಬಗಳಾಗಿದ್ದಾರೆ. ಮಕ್ಕಳ ಅಕ್ಷರ ಭವಿಷ್ಯ ಬರೆಯುವ ಲಕ್ಷಾಂತರ ಶಿಕ್ಷಕರ ಭವಿಷ್ಯ ಮಣ್ಣುಪಾಲಾಗಿದೆ.
ಲಾಕ್ಡೌನ್ ಹೊಡೆತ ನೀಡಿರುವ ಸರಕಾರ ಶಿಕ್ಷಕರ ಜೀವನದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಸ್ವಾಭಿಮಾನ ಸ್ವಾವಲಂಬನೆ ಹಾಗೂ ಪ್ರಾಮಾಣಿಕತೆಯಿಂದ ಬದುಕುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಸಮುದಾಯ ಸಂಕಷ್ಟಮಯ ಜೀವನ ನಡೆಸುತ್ತಿದೆ. ಕಳೆದ 14 ತಿಂಗಳಿಂದ ಶಾಲೆಗಳ ಬಾಗಿಲು ಮುಚ್ಚಿದ್ದರಿಂದ ಸಿಗುತ್ತಿದ್ದ ಅಲ್ಪಸ್ವಲ್ಪ ವೇತನವೂ ಕೈತಪ್ಪಿದೆ. ಹೇಗಾದರೂ ಮಾಡಿ ಬದುಕಲೇಬೇಕಲ್ಲ ಎಂಬ ಕಾರಣಕ್ಕೆ ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ತರಕಾರಿ, ಹೂ, ಹಣ್ಣು ವ್ಯಾಪಾರದಲ್ಲಿ ತೊಡಗಿದ್ದಾರೆ.
ಲಾಕ್ಡೌನ್ ಜಾರಿಯಿಂದ ಕೆಲವು ಕೆಲಸಗಳು ಕೈಗೆಟಕುತ್ತಿಲ್ಲ. ಕುಟುಂಬದ ಆರ್ಥಿಕ ದಿವಾಳಿಯಿಂದ ಶಿಕ್ಷಕರು ಗೋಳಾಡುತ್ತಿದ್ದಾರೆ. ವಿದ್ಯೆ ನೀಡುವ ಗುರುಗಳ ಜೀವನ ಚಿಂತಾಜನಕ ಸ್ಥಿತಿ ತಲುಪಿದೆ. ಹೇಳಿಕೊಳ್ಳಲಾಗದ ಪರಸ್ಥಿತಿಯಲ್ಲಿ ಖಾಸಗಿ ಶಿಕ್ಷಕರಿದ್ದಾರೆ. ಸರಕಾರಕ್ಕೆ ಗುರುಗಳ ಬಗ್ಗೆ ಗೌರವವಿದ್ದರೆ ಹಿಂದೆಮುಂದೆ ಯೋಚನೆ ಮಾಡದೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದ ವೀರಭದ್ರಪ್ಪ, ನಿರ್ಲಕ್ಷ್ಯ ವಹಿಸದೆ ತಿಂಗಳಿಗೆ ರೂ.10,000 ದಂತೆ 14 ತಿಂಗಳ ಪರಿಹಾರ ಮಂಜೂರು ಮಾಡಬೇಕು. ಶಿಕ್ಷಕರ ಸಮಸ್ಯೆ ಕಡೆಗಣಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಉಳಿಸಿ ಸಮಿತಿ ನಗರ ಘಟಕ ಸಂಚಾಲಕ ರಮೇಶ ಮಾಶಾಳ, ಸದಸ್ಯರಾದ ಯೇಸಪ್ಪ ಕೇದಾರ, ವಿವಿಧ ಖಾಸಗಿ ಶಾಲೆಗಳ ಶಿಕ್ಷಕರಾದ ಪದ್ಮರೇಖಾ, ಶರಣುಕುಮಾರ ದೋಶಟ್ಟಿ, ಪ್ರಕಾಶ, ಮಂದಾಖಿನಿ ಎಸ್. ದೋಶಟ್ಟಿ, ಅಂಬಿಕಾ ಮಠಪತಿ ನಾಲವಾರ, ಸಾಯಬಣ್ಣ ನಾಟೇಕರ ಇಂಗಳಗಿ, ಸುಜಾತಾ ಎನ್ ಸರಡಗಿ ಹಳಕರ್ಟಿ, ಭಾಗ್ಯಶ್ರೀ ಬಿ ಅಲ್ಲಿಪೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.