ಶಹಾಬಾದ:ನಗರದ ಬೀದಿ ವ್ಯಾಪಾರಿಗಳು ಕೋವಿಡ್ ಲಸಿಕೆಯಿಂದ ದೂರ ಉಳಿದಿರುವುದನ್ನು ಕಂಡು ಅವರಿಗೆ ನಗರಸಭೆಯಿಂದ ಕೋವಿಡ್ ಲಸಿಕೆಯನ್ನು ಹಾಕಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.
ಅವರು ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೀದಿ ವ್ಯಾಪಾರಿಗಳಿಗೆ ಆಯೋಜಿಸಲಾದ ಲಸಿಕೆ ಹಾಕಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇದೊಂದು ಕೊರೊನಾ ವೈರಸ್ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಲಸಿಕೆಯಾಗಿದೆ.ಇದರಿಂದ ಕೊರೊನಾ ತೀವ್ರತೆ ಕಡಿಮೆಯಾಗುತ್ತದೆ.ಆದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಕೊರೊನಾ ಮುಕ್ತ ನಗರ ಮಾಡಲು ಪಣತೊಡಬೇಕು.ಅಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ನಿಮ್ಮ ಹಾಗೂ ಕುಟುಂಬದ ಸ್ವಾಸ್ಥ್ಯ ಕಾಪಾಡಲು ಬಹು ಮುಖ್ಯ ಪಾತ್ರ ವಹಿಸಿ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಹೀಮ್, ಲಸಿಕೆ ಹಾಕಿಸಿಕೊಳ್ಳುವುದರಿಂದ ಜ್ವರ ಬರುತ್ತದೆ.ಮೈಕೈ ನೋವು ಆಗುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಸಾವಿರಾರು ಜನರು ಈ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.ಅದರಲ್ಲಿ ಬೆರಳಣಿಕೆಯಷ್ಟು ಜನರಿಗೆ ಸ್ವಲ್ಪ ಜ್ವರ ಹಾಗೂ ಮೈಕೈ ನೋವು ಬರುತ್ತದೆ.ಎಲ್ಲರಿಗೂ ಬರುವುದಿಲ್ಲ.ಆದರೂ ಭಯಪಡುವ ಅಗತ್ಯವಿಲ್ಲ.ಕೇವಲ ಒಂದು ದಿನದಲ್ಲಿ ಮತ್ತೆ ಆರಾಮವಾಗಿರುತ್ತೀರಿ.ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ರೋಗಾಣುಗಳ ವಿರುದ್ಧ ಹೋರಾಡುತ್ತದೆ.ಆದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಹಾಗೂ ಸುತ್ತಮುತ್ತಲಿನ ಜನರಿಗೂ ತಿಳಿಸಿ ಎಂದು ಹೇಳಿದರು.
ನಗರಸಭೆ ಕಾರ್ಯಲಯ ಶಹಾಬಾದ ವತಿಯಿಂದ ಸುಮಾರು 63 ಬೀದಿ ಬಿದಿ ವ್ಯಾಪಾರಿ ಗಳಿಗೆ ಕೋವಿಡ ಲಸಿಕೆ ನೀಡಲಾಯಿತು. ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಸಮುದಾಯ ಸಂಘಟನಾಧಿಕಾರಿ ರಘುನಾಥ ನರಸಾಳೆ, ಶಂಕರ ವಾಘಮಾರೆ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇತರರು ಇದ್ದರು.