ಅಣಬೆ ಬೆಳೆಯುವ ವಿಧಾನ ಮತ್ತು ಸಂಸ್ಕರಣೆ

0
34

ಬಾರತದಲ್ಲಿ ಹಲವಾರು ವಿಧವಾದ ಅಣಬೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಇವು ಅಧಿಕ ಸಸಾರಜನಕಯುಕ್ತ ಶಿಲೀಂದ್ರವಾಗಿವೆ. ಅವುಗಳಲ್ಲಿ ಕೆಲವು ವಿಷಪೂರಿತವಾದವು ಮತ್ತು ಕೆಲವು ಅಣಬೆಗಳು ಆಹಾರವಾಗಿ ಬಳಸಲು ಯೋಗ್ಯವಾಗಿವೆ. ತಿನ್ನುವ ಅಣಬೆಗಳು ಇತರ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುತ್ತವೆ. ಅಣಬೆಗಳಲ್ಲಿ ಪ್ರೋಟೀನ್, ಜೀವಸತ್ವಗಳು, ಹೆಚ್ಚು ಸಸಾರಜನಕ, ಅನ್ನಾಂಗಗಳು ಮತ್ತು ಖನಿಜಗಳು ಹೇರಳವಾಗಿವೆ. ತಿನ್ನುವ ಅಣಬೆಗಳಲ್ಲಿ ಸಕ್ಕರೆ ಅಂಶ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮದುಮೇಹ ರೋಗಿಗಳಿಗೆ ಮತ್ತು ಹೃದಯ ಸಂಬಂಧ ರೋಗಿಗಳಿಗೆ ಒಂದು ಉತ್ತಮ ಆಹಾರ. ಇವು ಅಪ್ಪಟ ಸಸ್ಯಾಹಾರವಾಗಿದ್ದು ಇವನ್ನು “ಬಿಳಿ ತರಕಾರಿ” ಎಂತಲೂ ಕರೆಯುತ್ತಾರೆ.

ಚಿಪ್ಪಣಬೆ: ಈ ಅಣಬೆಯು ಕಪ್ಪೆಚಿಪ್ಪಿನ ಆಕಾರದಲ್ಲಿರುವುದರಿಂದ ಇದನ್ನು ಚಿಪ್ಪಣಬೆ ಅಥವಾ ಕಪ್ಪೆಚಿಪ್ಪಿನ ಅಣಬೆ ಎಂದು ಕರೆಯುತ್ತಾರೆ. `ಈ ಅಣಬೆಯನ್ನು ಸುಲಭವಾಗಿ ಮನೆಯಲ್ಲಿ ಬೆಳೆಯಬಹುದು, ಈ ಅಣಬೆಗೆ ಭತ್ತದಹುಲ್ಲು ಮತ್ತು ಗೋದಿಹುಲ್ಲು ಸೂಕ್ತ ಸುಮಾರು 20 – 25 ಡಿಗ್ರಿ ಸೆಂ. ಉಷ್ಣಾಂಶ ಮತ್ತು ಶೇ. 70 ರಷ್ಟು ತೇವಾಂಶವಿರುವ ಕಡೆಗಳಲ್ಲಿ ಫಲಪ್ರದವಾಗಿ ಬೆಳೆಯುತ್ತದೆ.

Contact Your\'s Advertisement; 9902492681

ಬೇಕಾಗುವ ಮುಖ್ಯವಾದ ಸಾಮಗ್ರಿಗಳು:

ಒಣ ಭತ್ತದ ಹುಲ್ಲು ಅಥವಾ ಗೋದಿಹುಲ್ಲು, ಪಾಲಿಥೀನ್ ಚೀಲ, ಅಣಬೆ ಬೀಜ (ಸ್ವಾನ್), ಹುಲ್ಲು ಕುದಿಸಲು ಕುಕ್ಕರ್ ಅಥವಾ ಆಟೋತ್ತೇವೆ, ಉಷ್ಣತಾಮಾಪಕ

ಬೆಳೆಯುವ ವಿಧಾನ

  1. ಒಣ ಭತ್ತದ ಹುಲ್ಲನ್ನು 3-5 ಸೆಂ. ಮೀ. ಉದ್ದದ ತುಂಡುಗಳಾಗಿ ಕತ್ತರಿಸಬೇಕು. ಹೀಗೆ ಕತ್ತರಿಸಿದ ಹುಲ್ಲನ್ನು ಶುಚಿಯಾದ ನೀರಿನಲ್ಲಿ ಸುಮಾರು 8 ಗಂಟೆಗಳ ಕಾಲ ನೆನೆಸಿಡುವುದು.
  2. ನೀರನ್ನು ಬಸಿದು, ನೆನೆಸಿದ ಹುಲ್ಲನ್ನು ಕುದಿಯುವ ನೀರಿನಲ್ಲಿ ಅರ್ಧಗಂಟೆಗಳಕಾಲ ಕುದಿಸಿ, ಇದರಿಂದ ಹುಲ್ಲಿನಲ್ಲಿರುವ ರೋಗಕಾರಕ ಕ್ರಿಮಿಗಳು ನಾಶವಾಗುತ್ತವೆ.
  3. ನೀರನ್ನು ಬಸಿದು ಬೇಯಿಸಿದ ಹುಲ್ಲನ್ನು ಕೊಠಡಿಯೊಳಗೆ ಶುಚಿಯಾದ ಜಾಗದಲ್ಲಿ ಹರಡಿ, ಆರಲು ಮತ್ತು ಹೆಚ್ಚಿನ ನೀರು ಬಸಿದು ಹೋಗಲು ಬಿಡಬೇಕು.
  4. ಅನಂತರ ಪಾಲಿಥೀನ್ ಚೀಲಗಳನ್ನು ತೆಗೆದುಕೊಂಡು (18 ಅಂಗುಲ 12 ಅಂಗುಲ) ತಳಭಾಗದಲ್ಲಿ ಸ್ವಲ್ಪ (ಕಾಲುಹಿಡಿ) ಅಣಬೆ ಬೀಜ ಹರಡಬೇಕು.
  5. ಚೀಲ ತುಂಬುವ ಮುಂಚೆ ಪ್ರತಿ ಕಿ. ಗ್ರಾಂ ಹುಲ್ಲಿಗೆ 8-10 ಗ್ರಾಂ ತೊಗರಿ ನುಚ್ಚು, 40 ಗ್ರಾಂ ಅಕ್ಕಿ ತೌಡು, 20 ಗ್ರಾಂ ಕ್ಯಾಲ್ಸಿಯಂ ಕಾರ್ಬೋನೇಟ್ ಅಥವಾ ಕ್ಯಾಲ್ಸಿಯಂ ಸಟ್‌ನ್ನು ಸೇರಿಸಬೇಕು.
  6. ನಂತರ ಒಂದು ಪದರ ಬೇಯಿಸಿದ ಹುಲ್ಲು (4 ರಿಂದ 5 ಅಂಗುಲ) ಆನಂತರ ಅಣಬೆ ಬೀಜ (ಒಂದು ಹಿಡಿ), ಹೀಗೆಪದರ ಪದರವಾಗಿ ಹುಲ್ಲು ಮತ್ತು ಅಣಬೆ ಬೀಜವನ್ನು ಹಾಕಿ ಚೀಲ ತುಂಬುವವರೆಗೆ ತುಂಬಿ ಮೇಲಿನ ಪದರದಲ್ಲಿ ಬೀಜ ಹರಡಬೇಕು (ಪ್ರತಿ ಚೀಲಕ್ಕೆ ಸುಮಾರು 100 ಗ್ರಾ ಬೀಜ ಬೇಕಾಗುತ್ತದೆ).
  7. ತುಂಬಿದ ಚೀಲದ ಬಾಯಿಯನ್ನು ನೂಲಿನ ದಾರದಿಂದ ಅಥವಾ ರಬ್ಬರ್ ಬ್ಯಾಂಡ್‌ನಿಂದ ಕಟ್ಟಬೇಕು.
  8. ತುಂಬಿದ ಚೀಲದ ತಳ ಭಾಗದಲ್ಲಿ 3-4 ಸಣ್ಣ ರಂಧ್ರಗಳನ್ನು ಮಾಡಿ ಹೆಚ್ಚಿನ ನೀರು ಬಸಿದು ಹೋಗುವಂತೆ ಮಾಡಬೇಕು. ಹಾಗೆಯೇ ಚೀಲದ ಮೇಲ್ಬಾಗದಲ್ಲಿ 5 ರಿಂದ 6 ಚಿಕ್ಕ ರಂಧ್ರಗಳನ್ನು ಮಾಡಿ ಗಾಳಿಯಾಡುವಂತೆ ಮಾಡಬೇಕು.
  9. ಹೀಗೆ ಸಿದ್ಧಪಡಿಸಿದ ಅಣಬೆ ಚೀಲವನ್ನು ಅಣಬೆ ಬೆಳೆಸುವ ಕೋಣೆಯಲ್ಲಿ ಕಪಾಟುಗಳ ಮೇಲೆ ಜೋಡಿಸಿ 18-20 ದಿನಗಳ ಕಾಲ ಬೆಳೆಯಲು ಬಿಡಬೇಕು. ಈ ಸಮಯದಲ್ಲಿ ಸುಮಾರು 25 ಡಿಗ್ರಿ ಸೆಂ. ಉಷ್ಣಾಂಶವನ್ನು ಕಾಪಾಡಬೇಕು.
  10. ಇಪ್ಪತ್ತು ದಿನಗಳ ನಂತರ ಅಣಬೆಯ ತಂತುಗಳು ಹುಲ್ಲಿನಲ್ಲಿ ಬೆಳೆದು ಗೆಪ್ಪೆಯಾಗುತ್ತವೆ. ಈ ಸಮಯದಲ್ಲಿ ಪಾಲಿಥೀನ್ ಚೀಲಗಳನ್ನು ಕಪಾಟುಗಳ ಮೇಲೆ ಸಾಲಾಗಿಟ್ಟು ದಿನಕ್ಕೆ 2-3 ಬಾರಿ ಶುದ್ಧವಾದ ನೀರನ್ನು ಸಿಂಪಡಿಸುತ್ತಿರಬೇಕು.
  11. ಚೀಲವನ್ನು ಬಿಚ್ಚಿದ 4-5 ದಿನಗಳಲ್ಲಿ ಅಣಬೆ ಮೊಳಕೆಗಳು ಕಾಣಿಸಿಕೊಂಡು ಮತ್ತೆರಡು ದಿನಗಳಲ್ಲಿ ಕೊಯ್ದು ಮಾಡಬಹುದು. ಮತ್ತೆ ಹುಲ್ಲಿನ ಪಿಂಡಿಯ ಮೇಲೆ ನೀರು ಚಿಮಕಿಸುತ್ತಿದ್ದರೆ ಮುಂದಿನ 5-6 ದಿನಗಳಲ್ಲಿ ಎರಡನೆಯ ಬಾರಿ ಮೊಳಕೆಗಳು ಬಂದು ಅಣಬೆಗಳು ಕೊಯಿಲಿಗೆ ಬರುತ್ತವೆ. ಹೀಗೆ 3-4 ಬಾರಿ ಅಣಬೆ ಕೊಯಿಲು ಮಾಡಬಹುದು.
  12. ಪ್ರತಿ 2 ಕಿ. ಗ್ರಾಂ. ಒಣಗಿದ ಹುಲ್ಲಿನಿಂದ (3 ಬ್ಯಾಗ್‌ನಿಂದ) ಸುಮಾರು 1 ಕಿ. ಗ್ರಾಂ. ಇಳುವರಿಯನ್ನು ಪಡೆಯಬಹುದು.

ಸಂಗ್ರಹಣೆ ಮತ್ತು ಸಂಸ್ಕರಣೆ: ತಾಜಾ ಅಣಬೆಯನ್ನು ಕೊಯ್ದು ಮಾಡಿ ಮಾರಾಟ ಮಡಬಹುದು. ಹೆಚ್ಚುವರಿ ಅಣಬೆಯನ್ನು ಶೀತಾಗಾರ / ರೆಫ್ರಿಜರೇಟರ್‌ಗಳಲ್ಲಿ ಶೇಖರಿಸಿಡಬಹುದು. ಕೊಯಿಲು ಮಾಡಿದ ಅಣಬೆಯನ್ನು ಒಂದು ದಿನದಲ್ಲೇ ತಿನ್ನಲು ಬಳಸಬೇಕು. ತಾಜಾ ಅಣಬೆಯನ್ನು ಒಣಗಿಸಿ ಒಂದರಿಂದ ಎರಡು ತಿಂಗಳುಗಳವರೆಗೆ ಶೇಖರಿಸಿಡಬಹುದು. ಸೂರ್ಯನ ಶಾಖದಿಂದ ಒಣಗಿಸುವಾಗ ಟ್ರೇಗಳಲ್ಲಿ ತೆಳ್ಳಗೆ ಹರಡಿ ಮೇಲೆ ಬಟ್ಟೆಯಿಂದ ಮುಚ್ಚಬೇಕು. ಹೀಗೆ ಒಣಗಿಸಿದ ಅಣಬೆಯಲ್ಲಿ ಶೇ.10 ರಷ್ಟು ಕಡಿಮೆ ತೇವಾಂಶವಿರಬೇಕು. ತದನಂತರ ಇವನ್ನು ಹವೆಯಾಡದ ಡಬ್ಬಿಗಳಲ್ಲಿ ಅಥವಾ ಪಾಲಿಥೀನ್ ಚೀಲಗಳಲ್ಲಿ ಶೇಖರಿಸಿಡಬಹುದು.

-ಅಶ್ವಿನಿ ಆರ್, ಬಿಂದು ಕೆ ಜಿ ಮತ್ತು  ಜಹೀರ್ ಅಹಮದ್ ಬಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here