ಬಿಜೆಪಿಯಲ್ಲಿ ಸಿಎಂ ಆಗುವ ಸಾಮರ್ಥ್ಯ ಇರುವವರು ಇರಬಹುದು. ಆದರೆ, ಸಮಸ್ಯೆ ಅದಲ್ಲ. ಸಮಸ್ಯೆ ಇರುವುದು ಯಡಿಯೂರಪ್ಪನವರಂತ ಸಾಮರ್ಥ್ಯ ಇರುವವರು ಇದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇರಲಿಕ್ಕಿಲ್ಲ..
ಜೋಷಿ, ನಿರಾಣಿ, ಬೆಲ್ಲದ್, ಬೊಮ್ಮಾಯಿ, ಕತ್ತಿ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಂದಿನ ಚುನಾವಣೆಯಲ್ಲಿ ಇಡೀ ರಾಜ್ಯ ಸುತ್ತಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ತಾಳ್ಮೆ ಹಾಗೂ ತಾಕತ್ತು ಯಾರಿಗಿದೆ? ಹಾಗಾದರೆ, ಯಡಿಯೂರಪ್ಪನವರೇ ಮುಂದುವರೆಯಬೇಕಾ ? ನಿಜ, ಮುಂದಿನ ಚುನಾವಣೆಯವರೆಗೆ ಅವರನ್ನೇ ಮುಂದುವರೆಸಿ ಆ ವೇಳೆಗೆ ಯಾರಾದರೊಬ್ಬರ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಮತ್ತೆ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಅವರ ನೈಜ ಸಾಮರ್ಥ್ಯ ಹೊರಬರಲಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅವಕಾಶ ಮಾಡಿಕೊಡದೆ ಅಖಾಡದಲ್ಲಿ ಬಿಜೆಪಿಯನ್ನು ಮಣಿಸಲು ಹೋರಾಡುತ್ತವೆ.
ಬಿಎಸ್ ವೈಅವರನ್ನ ಬಲವಂತದಿಂದ ಇಳಿಸಿದರೆ ಬಿಜೆಪಿಗೆ ಖಂಡಿತವಾಗಿ ಹಿನ್ನೆಡೆಯಾಗಲಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಯಡಿಯೂರಪ್ಪನವರ ಸಲುವಾಗಿಯೇ ಬಿಜೆಪಿಗೆ ಬಂದ ಕೆಲ ನಾಯಕರು ಮತ್ತೆ ಮೂಲ ಪಕ್ಷಗಳಿಗೆ ಅಥವಾ ಅದಲು ಬದಲಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗಾದಲ್ಲಿ, ಬಿಜೆಪಿಗೆ ಬಿಗ್ ಬ್ಲೋ. ಇಂತಹ ಒಂದು ರಿಸ್ಕ್ ಗೆ ಬಿಜೆಪಿ ಹೈಕಮಾಂಡ್ ಕೈ ಹಾಕಲಿದೆಯಾ?
ಬಿಎಸ್ ವೈ ಲಿಂಗಾಯತರು ಎನ್ನುವ ಕಾರಣಕ್ಕೆ ಇಡೀ ಸಮುದಾಯ ಬಿಜೆಪಿ ಪರ ಇದೆ ಎಂದುಕೊಳ್ಳುವುದು ಎಷ್ಟು ಅಸಮಂಜಸವೋ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿಯೂ ಕೂಡಾ ಬಿಎಸ್ ವೈ ಅವರನ್ನು ಇಷ್ಟಪಡುವವರು ಇದ್ದಾರೆ ಎನ್ನುವುದು ಅಷ್ಟೆ ಸಮಂಜಸ. ತಮ್ಮನ್ನು ಬಲವಂತದಿಂದ ಇಳಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿನ ಗುಂಪನ್ನು ಕಟ್ಟಿಕೊಂಡು ಬಿಜೆಪಿಯ ನಾಯಕರನ್ನು ಸೇರಿಸಿ ಹೊಸ ಪ್ರಾದೇಶಿಕ ಪಕ್ಷವನ್ನು ಬಿಎಸ್ ವೈ ಕಟ್ಟಬಹುದೇ? ಇದು ಸ್ವಲ್ಪ ಕಷ್ಟ ಸಾಧ್ಯ ಯಾಕೆಂದರೆ, ಬಹುತೇಕ ನಾಯಕರಿಗೆ ಬಿಎಸ್ ವೈ ಅವರ ಮಗ ವಿಜೇಯಂದ್ರ ಅಪಥ್ಯ. ಮಗನನ್ನು ಮಹತ್ವದ ಜಾಗಕ್ಕೆ ಕೂಡಿಸುವುದೇ ಅವರ ಪ್ರಯತ್ನವಾಗಿರುವಾಗ ಅವರನ್ನು ಪ್ರಮುಖವಲ್ಲದ ವ್ಯಕ್ತಿಯನ್ನಾಗಿ ಬಿಎಸ್ ವೈ ಮಾಡಲಾರರು.
ಒಂದು ವೇಳೆ ಬಿಜೆಪಿ ಹೈಕಮಾಂಡ್ ಬಿಎಸ್ ವೈ ಅವರನ್ನು ಇಳಿಸುವ ಪ್ರಸಂಗ ಒದಗಿಬಂದರೆ. ಯಾರಾದರೂ ಲಿಂಗಾಯತ ನಾಯಕರನ್ನೇ ಸಿಎಂ ಮಾಡಿ ಆಗ ವಿಜೇಯಂದ್ರರನ್ನು ಉಪಮುಖ್ಯಮಂತ್ರಿ ಮಾಡುವ ಬೇಡಿಕೆ ಯನ್ನು ಬಿಎಸ್ ವೈ ಇಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.. ಈ ಎಲ್ಲ ಗೊಂದಲಗಳಿಗೆ ಉತ್ತರ ಸಿಗಬೇಕೆಂದರೆ ಕಾದುನೋಡಬೇಕು.