ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕರ ನೆರವಿಗಾಗಿ ರಾಜ್ಯದ ಮೊದಲ ಇ-ಸೇವೆ, ವಿಡಿಯೋ ಕಾನ್ಫರೆನ್ಸ್, ಸಹಾಯ ಕೇಂದ್ರ(ಹೆಲ್ಪ್ ಡೆಸ್ಕ್) ಮತ್ತು ಆರೋಗ್ಯ ಇಲಾಖೆಯ ನೆರವಿನಿಂದ ಸ್ಥಾಪಿಸಲಾಗಿರುವ ಡಿಸ್ಪೆನ್ಸರಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶರಾದ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಅವರು ಶನಿವಾರ ಉದ್ಘಾಟಿಸಿದರು.
ಇ-ಸೇವೆ ಸಹಾಯ ಕೇಂದ್ರದಲ್ಲಿ ವ್ಯಾಜ್ಯಗಳ ಸ್ಥಿತಿಗತಿ, ಪ್ರಕರಣಗಳ ದಿನಾಂಕ, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆ ಹಾಜರಾಗುವ ವ್ಯವಸ್ಥೆ ಹಾಗೂ ಇತರೆ ಇ-ಸೇವೆಗಳು ಸಾರ್ವಜನಿಕರು-ಕಕ್ಷಿದಾರರಿಗೆ ಲಭ್ಯವಾಗಲಿದೆ.
ಅರೋಗ್ಯ ಇಲಾಖೆಯ ನೆರವಿನಿಂದ ಸ್ಥಾಪಿಸಲಾಗಿರುವ ಡಿಸ್ಪೆನ್ಸರಿ ತುರ್ತು ಪರಿಸ್ಥಿತಿಯಲ್ಲಿ ಪ್ರಥಮ ಚಿಕಿತ್ಸೆ, ಔಷಧಿಗಳು ನೀಡುವ ಸೌಲಭ್ಯ ಹೊಂದಿದ್ದು, ಇಲ್ಲಿ ಓರ್ವ ವೈದ್ಯರು ಮತ್ತು ಸ್ಟಾಫ್ ನರ್ಸ್ ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲಾ ನ್ಯಾಯಾಲಯ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಕಂಪ್ಯೂಟರ್ಸ್ ಮತ್ತು ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನ್ಯಾ. ಸತೀಶ್ಚಂದ್ರ ಶರ್ಮಾ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿರುವ ನ್ಯಾ. ಬಿ.ವಿ.ನಾಗರತ್ನ, ಹೈಕೋರ್ಟ್ ಬಿಲ್ಡಿಂಗ್ ಕಮಿಟಿಯ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಅರವಿಂದ ಕುಮಾರ, ಬೆಂಗಳೂರು ಮಿಡಿಯೇಷನ್ ಸೆಂಟರ್ ಅಧ್ಯಕ್ಷರು ಮತ್ತು ಹೈಕೋರ್ಟ್ ಲೀಗಲ್ ಸರ್ವಿಸ್ ಕಮಿಟಿ ಅಧ್ಯಕ್ಷರಾದ ನ್ಯಾ.ಅಲೋಕ ಅರಾಧೆ, ಕಲಬುರಗಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ. ಎಸ್.ಜಿ.ಪಂಡಿತ್, ನ್ಯಾ.ಅಶೋಕ ಎಸ್. ಕಿಣಗಿ, ನ್ಯಾ.ಪಿ.ಎನ್.ದೇಸಾಯಿ, ನ್ಯಾ.ಎಂ.ಜಿ.ಎಸ್.ಕಮಲ್, ನ್ಯಾ.ರಾಜೇಂದ್ರ ಬಾದಾಮಿಕರ್, ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕ್ರೇಗೌಡ, ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸುಬ್ರಮಣ್ಯ, ಕಲಬುರಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಉಪಾಧ್ಯಕ್ಷ ಫತ್ರುಬಿ ಎ.ಕೆ.ಶಹಾ, ಪ್ರಧಾನ ಕಾರ್ಯದರ್ಶಿ ಪಿ.ಎನ್.ಕಪನೂರ, ಡಿ.ಹೆಚ್.ಓ ಡಾ.ಶರಣಬಸಪ್ಪ ಗಣಜಲಖೇಡ್ ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರು, ನ್ಯಾಯಾವಾದಿಗಳು, ನ್ಯಾಯಾಲಯದ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.