ದೊಮ್ಮಲೂರು ಸಂಗ್ರಹಿಸಿದ ೪ ಲಕ್ಷ ಹಸ್ತಪ್ರತಿಗಳ ಸಂಶೋಧನೆಗೆ:ಕುಲಸಚಿವ ಡೋಣೂರ್ ನಿರ್ದೇಶನ

0
221

ಕಲಬುರ್ಗಿ, ಜು.೨೯- ನಾಡಿನಾದ್ಯಂತ ಏಕಾಂಗಿಯಾಗಿ ಸಂಚರಿಸಿ ವಚನಕಾರರ ತಾಳೆಗರಿಯ ಸುಮಾರು ೪ ಲಕ್ಷ ಹಸ್ತಪ್ರತಿಗಳನ್ನು ಸಂಗ್ರಹಿಸಿರುವ ಬೆಂಗಳೂರಿನ ಅಶೋಕ್ ದೊಮ್ಮಲೂರು ಅವರು ಕಳೆದ ಬುಧವಾರದಂದು ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗದೊಂದಿಗೆ ಕುಲಸಚಿವರು ಹಾಗೂ ಡೀನ್ ಪ್ರೊ. ಬಸವರಾಜ್ ಪಿ. ಡೋಣೂರ್ ಅವರನ್ನು ಭೇಟಿ ಮಾಡಿ ಹಸ್ತಾಂತರದ ಕುರಿತು ಸಮಾಲೋಚನೆ ನಡೆಸಿದರು.

ದೇಶ ಹಾಗೂ ವಿದೇಶಗಳಲ್ಲಿ ಹಾಗೂ ನಾಡಿನಲ್ಲಿ ಸಂಪರ್ಕ ಸಾಧಿಸಿ ಕನ್ನಡದ ತಾಳೆಗೆರಿಯ ಹಸ್ತಪ್ರತಿಗಳನ್ನು ಸಂಗ್ರಹಿಸಿರುವ ದೊಮ್ಮಲೂರು ಅವರು ಅವೆಲ್ಲವನ್ನೂ ಡಿಜಟಲೀಕರಣ ಮಾಡಿದ್ದು, ಅದೆಲ್ಲದರ ಮೇಲೆ ಸಂಶೋಧನೆ ಹಾಗೂ ವಿಮರ್ಶೆಗಳು ಆಗಬೇಕು. ದಾಖಲೆಗಳು ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ಹೇಳಿದರು.

Contact Your\'s Advertisement; 9902492681

ಗುಜರಾತ್ ಮತ್ತು ನೇಪಾಳ್‌ಕ್ಕೆ ಭೇಟಿ ಕೊಟ್ಟು ಅಲ್ಲಿನ ಕನ್ನಡದ ವವಚನಕಾರರ ಹಸ್ತಪ್ರತಿಗಳನ್ನು ಡಿಜಲೀಕರಣ ಮಾಡಿರುವೆ. ಗಡಿಮಾಕುಂಟೆ ಗ್ರಾಮದ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ಸಂರಕ್ಷಿಸಿದಂತಹ ಪುರಾತನ ಕಾಲದ ಬಿಜ್ಜಳ ಚರಿತ್ರೆ, ಭೋಜರಾಜ ಚರಿತ್ರೆ, ಯಡಿಯೂರು ಮಠದ ಚರಿತ್ರೆ, ಬ್ರಹ್ಮಪುರಾಣ, ಶಿವಲಿಂಗ ಸಮ್ಮಿಳನ, ಶಿವಪ್ರಸಾದ್ ಚಿಂತಾಮಣಿ, ಅಮರ ಗಣಂಗಳು, ಸೋಮನಾಥ ಚರಿತ್ರೆಗಳು, ಪ್ರಭುಗಣಗಳು, ರುದ್ರಗಣಗಳು, ಚನ್ನಮಲ್ಲಿಕಾರ್ಜುನನ ಚರಿತ್ರೆ, ಚೆನ್ನಬಸವ ಪುರಾಣ, ಬಾದರಾಯ ಪುರಾಣ, ಶಿವಪುರಾಣ, ಶಬರ ಶಂಕರ ವಿಲಾಸ ಮುಂತಾದ ಎಲ್ಲ ಗ್ರಂಥಗಳನ್ನು ಲೆಮನ್ ಗ್ಲಾಸ್ ಆಯಿಲ್ ತಾಳೆಗೆರೆಗೆ ಲೇಪನ ಮಾಡುವ ಮೂಲಕ ಸ್ವಚ್ಚಗೊಳಿಸಿ ಡಿಜಲೀಕರಣವನ್ನು ಸಹ ಕುಲಸಚಿವರ ಮುಂದೆ ಪ್ರದರ್ಶಿಸಿದರು.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಲ್ಲಿ ಶತಮಾನಗಳ ಇತಿಹಾಸ ಇರುವ ಎರಡು ಕುಟುಂಬಗಳ ಮನೆಯಲ್ಲಿದ್ದ ಒಟ್ಟು ೧೧,೮೭೦ ತಾಳೆಯೋಲೆ ಹಸ್ತಪ್ರತಿ ಗರಿಗಳು ಹಾಗೂ ಕಾಗದ ಹಸ್ತಪ್ರತಿಗಳನ್ನು ಡಿಜಲೀಕರಣ ಮಾಡಲಾಗಿದೆ. ಬಹುತೇಕ ಶರಣ ಸಾಹಿತ್ಯ ಹಾಗೂ ಹಲವು ಅಪ್ರಕಟಿತ ಹಾಗೂ ಹೊಸ ಹೆಸರಿನ ಶರಣರ ವಚನಗಳು ಇವೆ. ಇದೇ ತಿಂಗಳಲ್ಲಿ ಇಲ್ಲಿಯವರೆಗೂ ೨೦,೦೦೦ ಹಸ್ತಪ್ರತಿಗಳ ಡಿಜಲೀಕರಣ ಮಾಡಿಕೊಂಡಿದ್ದಾಗಿ ದೊಮ್ಮಲೂರು ಅವರು ಹೇಳಿದರು.

ಸೊಲ್ಲಾಪುರದ ಸಿದ್ದೇಶ್ವರ್ ದೇವಾಲಯ ಹಾಗೂ ಮಲ್ಲಿಕಾರ್ಜುನ್ (ಮಲ್ಲಯ್ಯ) ಮುಖ್ಯಸ್ಥರೊಂದಿಗೆ ಚರ್ಚಿಸಿರುವೆ. ಮಲ್ಲಯ್ಯ ದೇವಾಲಯದ ಮುಖ್ಯಸ್ಥರು ಹೇಳುವಂತೆ ಸಿದ್ಧರಾಮೇಶ್ವರರ ಸಂಪೂರ್ಣ ದಾಖಲೆ ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿದೆ. ಅವರುಗಳು ಹೇಳುವ ದಾಖಲೆಗಳನ್ನು ಸಂಗ್ರಹ ಮಾಡಲು ಸ್ವತ: ಲಂಡನ್‌ನಲ್ಲಿರುವ ಗೆಳೆಯರೊಂದಿಗೆ ಸಮಪರ್ಖ ಮಾಡಿದ್ದು, ಅವರು ಹೇಳಿರುವ ದಾಖಲೆಗಳನ್ನು ಅವರ ಕೈಗೆ ಕೊಟ್ಟು ಅವರುಗಳೇ ಅಧಿಕೃತ ದಾಖಲೆಗಳೇ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ಎಂದು ಅವರು ಕುಲಸಚಿವರಿಗೆ ವಿವರಿಸಿದರು.

ಸದ್ಯದ ದಾಖಲೆಗಳ ಪ್ರಕಾರ ಸೊಲ್ಲಾಪುರದಲ್ಲಿನ ಸಿದ್ದೇಶ್ವರ ದೇವಾಲಯ ಸಿದ್ಧರಾಮೇಶ್ವರರ ದೇವಾಲಯ ಅಲ್ಲ. ಆ ದೇವಾಲಯ ಪಕ್ಕದಲ್ಲಿರುವ ಸಿದ್ಧರಾಮೇಶ್ವರರ ಗದ್ದುಗೆ ಸಿದ್ಧರಾಮೇಶ್ವರರ ಐಕ್ಯಸ್ಥಳ. ಸಿದ್ಧರಾಮೇಶ್ವರರು ಐಕ್ಯರಾಗುವ ಮುನ್ನವೇ ಅಲ್ಲಿ ಸಿದ್ದೇಶ್ವರರ ದೇವಾಲಯ ಇತ್ತು ಎಂದು ಹೇಳಿದ ಅವರು, ಕೂಡಲಸಂಗಮದಲ್ಲಿರುವ ಸಂಗಮದೇವ ದೇವಾಲಯ ಬಸವಣ್ಣನವರು ಐಕ್ಯರಾಗುವ ಮೊದಲೇ ಇತ್ತು. ಹೀಗಾಗಿ ಸಂಗಮದೇವ ದೇವಾಲಯ ಬಸವಣ್ಣನವರದು ಅಲ್ಲ. ಹಾಗೆಯೇ ಸಿದ್ದೇಶ್ವರರ ದೇವಾಲಯವೂ ಕೂಡ ಎಂದು ನಿದರ್ಶನವೊಂದನ್ನು ನೀಡಿದರು.

ಸಂಗಮದೇವ ಹಾಗೂ ಸಿದ್ದೇಶ್ವರರು ಬಸವಣ್ಣ ಹಾಗೂ ಸಿದ್ಧರಾಮೇಶ್ವರರ ಆರಾಧ್ಯ ದೈವ. ಈ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ ಎಂದು ತಿಳಿಸಿದ ಅವರು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲ್ಲೂಕಿನ ತಂಗಡಿಯಲ್ಲಿ ಶರಣೆ ನೀಲಾಂಬಿಕೆ, ಶರಣ ಹಡಪದ್ ಅಪ್ಪಣ್ಣ, ಶರಣ ಮಡಿವಾಳ್ ಮಾಚಿದೇವ್ ಅವರ ಐಕ್ಯಸ್ಥಳವೆಂದು ಪುರಾಣ ಆಧಾರದಲ್ಲಿ ಹೇಳಲಾಗುತ್ತಿದೆ. ತಂಗಡಗಿ ಹಡಪದ್ ಅಪ್ಪಣ್ಣ ಪೀಠದ ಪೀಠಾಧೀಶರು ಹಾಗೂ ಮುದ್ದೇಬಿಹಾಳದ ಸಾಹಿತಿ ರುದ್ರೇಶ್ ಕೆಲ್ಲೂರ್ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.

ಹಾಸನ್ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳಳಿಯ ಕೋಡಿಮಠದಲ್ಲಿ ಇದ್ದ ೭೦೦೦ಕ್ಕೂ ಹೆಚ್ಚು ತಾಳೆಯೋಲೆಯ ಹಸ್ತಪ್ರತಿಗಳ ಗರಿಗಳನ್ನು ಡಿಜಲೀಕರಣ ಮಾಡಿದ್ದನ್ನು ಪ್ರದರ್ಶಿಸಿದ ಅವರು, ಕೋಡಿಮಠದ ಪೂಜ್ಯರು ಮಠದಲ್ಲಿ ಹೊಸ ಗ್ರಂಥಾಲಯ ಪ್ರಾರಂಭಿಸುತ್ತಿದ್ದು, ತಾಳೆಯೋಲೆಯ ಹಸ್ತಪ್ರತಿಗಳ ಗರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕೋಡಿ ಮಠದ ಕಿರಿಯ ಸ್ವಾಮೀಜಿ ಚೇತನ್ ದೇವರು ಹೊಸ ಗ್ರಂಥಾಲಯದ ಕುರಿತು ವಿವರ ನೀಡಿದರು ಎಂದು ಅವರು ಶ್ಲಾಘಿಸಿದರು.

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರು ಬಳಿಯ ಕೊಡಮಗ್ಗಿಯಲ್ಲಿನ ಶರಣರ ಹೆಸರುಗಳು ಇರುವ ಸ್ಥಳಗಳಿಗೆ ಭೇಟಿ ನೀಡಿದೆ. ಕಲ್ಯಾಣೇಶ್ವರ ಹಾಗೂ ಸಿದ್ಧರಾಮೇಶ್ವರರ ಎರಡು ದೇವಾಲಯಗಳು ಸುಮಾರು ೨೦೦-೩೦೦ ಮೀಟರ್ ಅಂತರದಲ್ಲಿವೆ. ದೇವಾಲಯಗಳು ನೋಡುವುದಕ್ಕೆ ಗುಡ್ಡದಂತೆ ಕಾಣುತ್ತವೆ. ಗುಡ್ಡದಂತೆ ಮುಚ್ಚಿಟ್ಟಿದ್ದ ಸಿದ್ಧರಾಮೇಶ್ವರರ ದೇವಾಲಯವನ್ನು ಈಗಾಗಲೇ ಸವಚ್ಛ ಮಾಡಿ ನವೀಕರಿಸಲಾಗಿದೆ. ಅಲ್ಲಿ ಮೂರು ಶಿಲಾಶಾಸನಗಳು ಇವೆ. ಆ ಕ್ಷೇತ್ರದ ಸುತ್ತಮುತ್ತಲೂ ಬಸವೇಶ್ವರರ ಬಹಳಷ್ಟು ದೇವಾಲಯಗಳು ಇವೆ. ಸರ್ವಜ್ಞನ ವಚನಗಳಲ್ಲಿ ಉಲ್ಲೇಖವಾಗಿರುವ ಸ್ಥಳಗಳಿಗೂ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿರುವೆ. ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ತಾಳೆಯೋಲೆಯ ಗರಿಗಳ ಡಿಜಲೀಕರಣ ಆಗಿದ್ದು, ಭಾಗ-೨ ಗ್ರಂಥಸೂಚಿಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ಗುಮ್ಮಳಾಪುರದ ಸಂಶೋಧನೆಗೆ ಸಂಬಂಧಿಸಿದಂತೆ ಒಂದು ತಮಿಳು ಶಾಸನ ಸೇರಿದಂತೆ ೨೭ ಶಾಸನಗಳಿರುವ ಮಾಹಿತಿಯನ್ನು ನಿವೃತ್ತ ಪ್ರೊ. ಎಸ್.ಕೆ. ಮಧುಸೂಧನ್ ಅವರು ವಿವರಗಳನ್ನು ನೀಡಿದ್ದು, ಸ್ವಾಮೀಜಿಯವರಿಗೆ ಮನವರಿಕೆ ಮಾಡಿ ತಾಳೆಯೋಲೆಯ ಗರಿಗಳನ್ನು ಸ್ವಚ್ಛಮಾಡಿ ಡಿಜಟಲೀಕರಣ ಮಾಡುವುದಾಗಿ ಅವರು ತಿಳಿಸಿದರು.

ಗುಮ್ಮಳಾಪುರದ ಸಿದ್ದಲಿಂಗ ಯತಿಯ ಶೂನ್ಯ ಸಂಪಾದನೆ, ಗೂಳೂರು ಸಿದ್ದವೀರಣ್ಣೊಡೆಯರು ಶೂನ್ಯ ಸಂಪಾದನಕಾರರು ವಚನಗಳನ್ನು ಒಂದು ಕ್ರಮವಿಡಿದು ಸಂಪಾದಿಸಿಕೊಟ್ಟಿದ್ದಾರೆ. ಗುಮ್ಮಳಾಪುರದ ಒಂದು ಶಾಸನ ಬೆಂಗಳೂರಿನ ವಸ್ತುಸಂಗ್ರಹಾಲಯದಲ್ಲಿದೆ. ಶಿಲಾಶಾಸನಗಳ ಆಧಾರ ಅಧಿಕೃತವಾಗಿದೆ. ಕಾಲ್ಪನಿಕ ಕಥನದ ಪುರಾಣಗಳಮಾಯ, ಮಂತ್ರ, ಪವಾಡಗಳೊಂದಿಗೆ ಬಸವಾದಿ ಶರಣರನ್ನು ಮುಳುಗಿಸಲಾಗಿದೆ. ಪುರಾಣಗಳನ್ನು ಹೊರತುಪಡಿಸಿ ಸಂಶೋಧನೆ ಹಾಗೂ ಚರ್ಚೆ ಆಗಬೇಕು ಎಂದು ಅವರು ಹೇಳಿದರು.

ಇಂತಹ ಕಾರ್ಯ ಮಾಡಲಿಕ್ಕೆ ಮೊದಲು ದಿ. ಎಂ.ಎಂ. ಕಲಬುರ್ಗಿಯವರು ಮಾರ್ಗದರ್ಶಕರು. ನಂತರ ಗೊ.ರು. ಚನ್ನಬಸಪ್ಪ, ವೀರಣ್ಣ ರಾಜೂರು, ರಂಜಾನ್ ದರ್ಗಾ, ಬಸವರಾಜ್ ಕಲ್ಗುಡಿ ಸೇರಿದಂತೆ ಅನೇಕರ ಮಾರ್ಗದರ್ಶನದಲ್ಲಿ ನನ್ನ ಚಟುವಟಿಕೆ ಮುಂದುವರೆಸಿದ್ದಾಗಿ ಅವರು ತಿಳಿಸಿದರು.

ಕಲಬುರ್ಗಿಯಲ್ಲಿ ವಾಸಿಸುತ್ತಿರುವ ಯಾದಗಿರಿಯ ನಿವೃತ್ತ ಪ್ರಿನ್ಸಿಪಾಲ್ ಯುಮನಪ್ಪ ಹುಜರಾತಿ ಅವರ ಮನವೊಲಿಸಿ ಹಸ್ತಪ್ರತಿಗಳನ್ನು ಸಂಗ್ರಹಿಸಿರುವೆ. ಕಲಬುರ್ಗಿ ಬಳಿ ಇರುವ ಮಾದರಸಹನಳ್ಳಿ, ಯಾದಗಿರಿ ಜಿಲ್ಲೆಯ ಗುರುಮಿಠಕಲ್, ತಮಿಳ್ನಾಡಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವುದಾಗಿಯೂ ಅವರು ಹೇಳಿದರು.

ಎಲ್ಲವನ್ನೂ ಅತ್ಯಂತ ತಾಳ್ಮೆ ಹಾಗೂ ಆಸಕ್ತಿಯಿಂದ ವೀಕ್ಷಿಸಿದ ಕುಲಸಚಿವ ಪ್ರೊ. ಬಸವರಾಜ್ ಪಿ. ಡೋಣೂರ್ ಅವರು, ನೀವು ಅತ್ಯಂತ ದೊಡ್ಡ ಕೆಲಸವನ್ನು ಮಾಡಿದ್ದೀರಿ. ಫ.ಗು. ಹಳಕಟ್ಟಿಯವರ ರೀತಿಯಲ್ಲಿ ನಿಮ್ಮ ವಚನಗಳ ಸಂಗ್ರಹಣೆ ಅಸಾಮಾನ್ಯ. ಈ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಹಾಗೂ ಬಸವ ಪೀಠದಡಿ ಸಂಶೋಧನೆ ಕೈಗೊಳ್ಳಲಾಗುತ್ತದೆ. ನೀವು ಸಹ ಈ ಕುರಿತು ವಿಶ್ವವಿದ್ಯಾಲಯಕ್ಕೆ ಬಂದು ಉಪನ್ಯಾಸ ಕೊಡಬೇಕು ಎಂದು ದೊಮ್ಮಲೂರು ಅವರಿಗೆ ಹೇಳಿದರು.

ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಬಿ. ರಾಂಪೂರೆ ಅವರಿಗೆ ನಿರ್ದೇಶನ ನೀಡಿ, ಈ ಹಸ್ತಪ್ರತಿಗಳ ಸಂಶೋಧನೆಗಾಗಿ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ೮೦೦೦ರೂ.ಗಳ ಶಿಷ್ಯವೇತನದೊಂದಿಗೆ ಪಿಎಚ್‌ಡಿ ಪ್ರವೇಶ ನೀಡಿ. ಈ ಹಸ್ತಪ್ರತಿಗಳ ಸಂಶೋಧನೆಯ ಮೇಲೆಯೇ ಹತ್ತು ಪಿಎಚ್‌ಡಿಗಳನ್ನು ಮಾಡಬಹುದು. ಪ್ರಾಥಮಿಕ ಹಂತವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರವೇಶ ನೀಡಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಪ್ರಭುಲಿಂಗ್ ಎಸ್. ಮಹಾಗಾಂವಕರ್, ಆರ್.ಜಿ. ಶೆಟಗಾರ್, ಗಿರೀಶ್ ಅಗಡಿ, ವಿಶ್ವನಾಥ್ ಮಂಗಲಗಿ, ಶಿವಶರಣಪ್ಪ ಚಿಗೋಣಿ, ಧನರಾಜ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರ ಮಹಾಗಾಂವಕರ್, ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here