ಕಲಬುರಗಿ: ರಾಜ್ಯದಲ್ಲಿನ ಹೊಸ ತಾಲ್ಲೂಕುಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಗುರುವಾರ ಜುಲೈ 4 ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಇಲ್ಲಿ ಹೇಳಿದರು.
ಬುಧವಾರ ಅಫಜಲಪುರ ತಾಲ್ಲೂಕಿನ ಗೊಬ್ಬೂರ್(ಬಿ) ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊಸ ತಾಲ್ಲೂಕುಗಳಿಗೆ ಕಂದಾಯ ಕಚೇರಿ ಹೊರತುಪಡಿಸಿ ಇನ್ನುಳಿದ ಸೌಲಭ್ಯಗಳಿಲ್ಲ. ಆ ಸೌಲಭ್ಯಗಳನ್ನು ಕಲ್ಪಿಸಲು ಸಭೆ ಕರೆದಿದ್ದಾಗಿ ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸುವರು. ಹೊಸ ತಾಲ್ಲೂಕುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾಗಿ ಅವರು ಹೇಳಿದರು.
ರಾಜ್ಯ ಸರ್ಕಾರ ಉಳಿಸಿಕೊಳ್ಳಲು ದೇವಲ್ ಗಾಣಗಾಪೂರ್ ದತ್ತಾತ್ರೇಯ ದೇವರಿಗೆ ಪ್ರಾರ್ಥನೆ ಮಾಡಿದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರ ಸುಭದ್ರವಾಗಿದೆ.ಆಡಳಿತ ಪೂರ್ಣಗೊಳಿಸಲಿದೆ. ರಾಜ್ಯದಲ್ಲಿ ಮಳೆ. ಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸಿರುವೆ ಎಂದರು.
ಕಾಂಗ್ರೆಸ್ಸಿನ ಆನಂದಸಿಂಗ್ ಹಾಗೂ ರಮೇಶ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದು, ಇನ್ನೂ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವ ವಿಷಯಗಳ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಅಭಿವೃದ್ಧಿ ಕಾರ್ಯಗಳತ್ತ ಮಾತ್ರ ಗಮನಹರಿಸಿರುವೆ. ಪಕ್ಷದ ಕುರಿತು ಪಕ್ಚದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುವರು ಎಂದು ಅವರು ಹೇಳಿದರು.