ಸುರಪುರ:ಕೋವಿಡ್‌ನಿಂದಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿನ ಎಲ್ಲಾ ಸಮುದಾಯಗಳ ಬಡ ಕುಟುಂಬದಲ್ಲಿನ ವಿದ್ಯಾರ್ಥಿಗಳು ಆರ್ಥಿಕ ತೊಂದರೆಗೊಳಗಾಗಿದ್ದು,ಗ್ರಾಮ ಪಂಚಾಯತಿಯಿಂದ ಸಹಾಧನ ನೀಡಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಪಂಚಾಯತಿ ಇಒ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಪರಿಷತ್‌ನ ಕಲಬುರಗಿ ವಿಭಾಗ ಸಹ ಪ್ರಮುಖರಾದ ಡಾ: ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಎಲ್ಲರ ಬದುಕನ್ನು ತಲ್ಲಣಗೊಳಿಸಿದೆ.ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಬಡ ಹಾಗು ಮದ್ಯಮ ವರ್ಗಗಳ ಕಟುಂಬ ನಿರ್ವಹಣೆ ತುಂಬಾ ತೊಂದರೆ ಅನುಭವಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಈಗ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಶುಲ್ಕ ತುಂಬಲು ತೀವ್ರ ಸಮಸ್ಯೆ ಹೆದರಿಸುವಂತಾಗಿದೆ.ಆದ್ದರಿಂದ ಮಾನ್ಯರಾದ ತಾವುಗಳು ಗ್ರಾಮೀಣ ಪ್ರದೇಶದಲ್ಲಿನ ಎಲ್ಲಾ ಸಮುದಾಯದ ಬಡ ಕುಟುಂಬದ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ಶುಲ್ಕಕ್ಕಾಗಿ ಸಹಾಯಧನವನ್ನು ನೀಡುವುದು ಅಗತ್ಯವಾಗಿದೆ.ಆದ್ದರಿಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡುವಂತೆ ಪಿಡಿಒಗಳಿಗೆ ಸೂಚನೆಯನ್ನು ನೀಡಿದಲ್ಲಿ ತುಂಬಾ ಅನುಕೂಲವಾಗಲಿದೆ.
ಕೇವಲ ಎಸ್.ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುತ್ತಿರುವುದಾಗಿ ಮಾಹಿತಿ ಇದೆ,ಆದರೆ ಈಗಿನ ಪರಸ್ಥಿತಿಯಲ್ಲಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ತೀವ್ರ ತೊಂದರೆಯಲ್ಲಿರುವುದರಿಂದ ಯಾವುದೇ ಸಮುದಾದ ತಾರತಮ್ಯವಿಲ್ಲದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಧನ ಸಹಾಯ ದೊರೆಯಲು ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ವಿನಂತಿಸುತ್ತದೆ.ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮೂಡಲದಿನ್ನಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪರಿಷತ್‌ನ ನಗರ ಕಾರ್ಯದರ್ಶಿ ಹನುಮಂತ ಸಿಂಘೆ,ಕಾರ್ಯದರ್ಶಿ ಹುಲಗಪ್ಪ, ಕ್ಯಾತಪ್ಪ ಮೇದಾ ಸೇರಿದಂತೆ ಇತರರಿದ್ದರು.