ಪ್ರಾದೇಶಿಕ‌ ಆಯುಕ್ತರ ಕಚೇರಿಯಲ್ಲಿ ಇ‌ ಆಫೀಸ್ ಗೆ ಕಂದಾಯ ಸಚಿವರಿಂದ ಚಾಲನೆ

0
70

ಕಲಬುರಗಿ: ಕಂದಾಯ ಸಚಿವರಾದ ಶ್ರೀ ಆರ್.ವಿ.ದೇಶಪಾಂಡೆ ಅವರು ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ‌ ಕಡತಗಳನ್ನು ತ್ವರಿತ ವಿಲೇವಾರಿಗೆ ಜಾರಿಗೊಳಿಸಿರುವ ಇ.ಆಫೀಸ್ ಯೋಜನೆಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ‌ ಜಿಲ್ಲೆ ಇ ತಂತ್ರಾಂಶ ಅಳವಡಿಸಿಕೊಂಡ ಮೊದಲ‌ ಜಿಲ್ಲೆಯಾಗಿದೆ. ಅದೇ ಮಾದರಿಯಲ್ಲಿ ಕಲಬುರಗಿಯಲ್ಲಿಯೂ ಕೂಡಾ ಇ ತಂತ್ರಾಂಶ ಅಳವಡಿಸಿಕೊಂಡು ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡಿ ಅಗತ್ಯ ಕ್ರಮಗಳೊಂದಿಗೆ ವಿಲೇವಾರಿ ಮಾಡಲಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಸುಭೋದ ಯಾದವ್ ಅವರು ಸಚಿವರಿಗೆ ವಿವರಿಸಿದರು.

Contact Your\'s Advertisement; 9902492681

ತಾಲೂಕು ಮಟ್ಟದಲ್ಲಿ ತಹಸೀಲ್ದಾರ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳು ಹೇಗೆ ವಿಲೇವಾರಿಯಾಗುತ್ತಿವೆ ಎನ್ನುವುದು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೇಲುಸ್ತುವಾರಿ ನಡೆಯುವಂತೆ ನೋಡಿಕೊಳ್ಳಿ ಅಂದಾಗ ಮಾತ್ರ ತಹಸೀಲ್ದಾರರು ಸರಿಯಾಗಿ ಕೆಲಸ ಮಾಡುತ್ತಾರೆ ಎಂದು ದೇಶಪಾಂಡೆ ಅವರು ಯಾದವ್ ಅವರಿಗೆ ಸೂಚಿಸಿದರು.

ಕಚೇರಿಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ದೇಶಪಾಂಡೆ ಅವರು ಇಲಾಖೆಯ ಎಲ್ಲ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಕಚೇರಿ ಕೆಲಸ ಕೇವಲ ಗಡಿಯಾರ‌ ನೋಡಿಕೊಂಡು ಮಾಡುವಂತಿರಬಾರದು. ಮನಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿ ಜನರ ಕೆಲಸ ಮಾಡಿದರೆ ಜನರು ನಿಮ್ಮ ಕೆಲಸದ ಬಗ್ಗೆ ಸಂತೃಪ್ತಿ ವ್ಯಕ್ತಪಡುತ್ತಾರೆ. ಯಾಕೆಂದರೆ‌ ಜನರಿಗೆ ವ್ಯವಸ್ಥೆಯ ಕುರಿತು ಅಸಮಧಾನವಿದೆ. ಭ್ರಷ್ಟಚಾರ ವ್ಯಾಪಕವಾಗಿ ಹರಡಿರುವ ಕುರಿತು ಕೋಪವಿದೆ. ಇದನ್ನು ಮನಗಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಒಳ್ಳೆಯ ಹೆಸರು ಗಳಿಸಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜಕಲ್ಯಾಣ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಯಾವುದೇ ಒಂದು ಅರ್ಜಿ ಅಥವಾ ಕಡತ ಕಚೇರಿಗೆ ಬಂದರೆ ಆ ಅರ್ಜಿ‌ ಅಥವಾ ಕಡತ ಯಾವ ಯಾವ ಹಂತದಲ್ಲಿದೆ ಎನ್ನುವ ಕುರಿತು ದಾಖಲು ಮಾಡಿಕೊಂಡು ಹಾಗೂ ಅದಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ದೊರಕುವಂತೆ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ, ಅಪರ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಂ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ‌ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here