ಅತಿವೃಷ್ಟಿ ಬೆಳೆ ಹಾನಿ: ದೆಹಲಿ ಆಪ್ ಸರ್ಕಾರದ ಮಾದರಿಯಲ್ಲಿ 50 ಸಾವಿರ ಪರಿಹಾರಕ್ಕೆ ಬಳ್ಳಾರಿ ಆಗ್ರಹ

0
11

ಕಲಬುರ್ಗಿ: ಅತಿವೃಷ್ಟಿ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರದಂತೆ ರೈತರ ಪ್ರತಿ ಹೆಕ್ಟೆರ್‌ಗೆ ೫೦,೦೦೦ರೂ.ಗಳ ಪರಿಹಾರವನ್ನು ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ರೈತರಿಗೆ ಕೊಡಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ಜಗದೀಶ್ ಬಳ್ಳಾರಿ ಅವರು ಒತ್ತಾಯಿಸಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅತಿವೃಷ್ಟಿ ಹಾನಿ ಪರಿಹಾರವನ್ನು ಕೇವಲ ೨೦೦೦ರೂ.ಗಳಿಂದ ೩೦೦೦ರೂ.ಗಳವರೆಗೆ ಮಾತ್ರ ಘೋಷಿಸಿದ್ದಾರೆ. ಈ ಪರಿಹಾರದಿಂದ ಯಾವುದೇ ರೀತಿಯಲ್ಲಿ ಪ್ರಯೋಜನ ಆಗದು. ಅದೂ ಅಲ್ಪ ಪರಿಹಾರಕ್ಕಾಗಿ ರೈತರು ತಮ್ಮ ಚಪ್ಪಲಿಗಳನ್ನು ಹರಿದುಕೊಂಡು ಕಚೇರಿಗೆ ಅಲೆದಾಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ಪರಿಹಾರದ ಕುರಿತು ಪುನರ್ ವಿಮರ್ಶೆ ಮಾಡಿಕೊಳ್ಳಬೇಕು. ಈಗಾಗಲೇ ಮಹಾಮಾರಿ ಕೋವಿಡ್ ಮೊದಲನೇ ಹಾಗೂ ಎರಡನೇ ಸೋಂಕಿನ ಲಾಕ್‌ಡೌನ್‌ನಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕು. ದೆಹಲಿ ಸರ್ಕಾರದ ಮಾದರಿಯಲ್ಲಿ ಅತಿವೃಷ್ಟಿಪೀಡಿತ ರೈತರಿಗೆ ಪ್ರತಿ ಹೆಕ್ಟೇರ್‌ಗೆ ೫೦,೦೦೦.ಗಳ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಇದರಿಂದ ರೈತರ ಆತ್ಮಹತ್ಯೆಯನ್ನು ತಡೆಯಬಹುದಾಗಿದೆ. ರೈತ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರವು ಬಂಡವಾಳಶಾಹಿ ಹಾಗೂ ಉಳ್ಳವರ ಪರವಾಗಿದೆ ಹೊರತು ರೈತ, ಕೃಷಿ ಕಾರ್ಮಿಕರು ಹಾಗೂ ಬಡವರ ಪರ ಇಲ್ಲ. ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷವು ಬಡವರಿಗೆ ಉಚಿತ ವಿದ್ಯುತ್ ಕೊಡುತ್ತಿದೆ. ಅಂತಹ ಕ್ರಮವನ್ನು ರಾಜ್ಯದಲ್ಲಿಯೂ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷಕ್ಕೆ ಸದಸ್ಯತ್ವದ ಸಮಸ್ಯೆ ಇಲ್ಲ. ಪಕ್ಷದ ಕಾರ್ಯಕರ್ತರು ಹೋದಲ್ಲೆಲ್ಲ ಸ್ವಯಂ ಪ್ರೇರಿತರಾಗಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗುತ್ತಾರೆ. ಮುಂಬರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ೫೫ ವಾರ್ಡ್‌ಗಳಲ್ಲಿ ಆಮ್ ಆದ್ಮಿ ಪಕ್ಷವು ಸ್ಪರ್ಧಿಸಲಿದೆ. ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿಯೂ ಸಹ ಸ್ಪರ್ಧೆ ಮಾಡುತ್ತೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಜಿಲ್ಲೆಯಲ್ಲಿಯೂ ಸಹ ಅದು ಮುಂದುವರೆದಿದೆ. ಭ್ರಷ್ಟಾಚಾರದ ವಿರುದ್ಧ ದಾಖಲೆಗಳ ಸಮೇತ ಹೋರಾಟವನ್ನು ಸಹ ಪಕ್ಷವು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here