ಮುಖ್ಯಮಂತ್ರಿ ಬೊಮ್ಮಾಯಿ ಆಡಳಿತ ಸುಗಮಕ್ಕೆ ಶಾಸಕರ ಸಹಕಾರ ಬಹುಮುಖ್ಯ: ಮಾಜಿ ಶಾಸಕ ಬಸವರಾಜು

0
15

ಕಲಬುರ್ಗಿ: ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸುಗಮ ಆಡಳಿತ ನಿರ್ವಹಿಸಿಕೊಂಡು ಹೋಗಲು ಎಲ್ಲ ಶಾಸಕರ ಸಹಕಾರ ಬಹುಮುಖ್ಯವಾಗಿದೆ ಎಂದು ಮಾಜಿ ಶಾಸಕರೂ ಹಾಗೂ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಎಚ್.ಡಿ. ಬಸವರಾಜು ಅವರು ಇಲ್ಲಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸಭೆಯ ನಂತರ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ಬಸವರಾಜ್ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿಯೂ ಹುಬ್ಬಳ್ಳಿಯವರೇ ಆಗಿರುವ ದಿ. ಎಸ್.ಆರ್. ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದು, ಮೂರನೇ ಮುಖ್ಯಮಂತ್ರಿಗಳಾಗಿ ಬೊಮ್ಮಾಯಿ ಅವರು ಆಯ್ಕೆಯಾಗಿದ್ದು ಸಂತೋಷ ತಂದಿದೆ ಎಂದರು.

Contact Your\'s Advertisement; 9902492681

ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡು ಮೊದಲ ಬಾರಿಗೆ ಬಸವರಾಜ್ ಬೊಮ್ಮಾಯಿ ಅವರು ಹುಬ್ಬಳ್ಳಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಯಾರೊಬ್ಬರೂ ಶಾಸಕರು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದಲಾದರೂ ಶಾಸಕರು ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಬೇಕಿತ್ತು. ಅದನ್ನು ನೋಡಿದರೆ ಶಾಸಕರ ಅಸಹಕಾರ ಎದ್ದು ಕಾಣುತ್ತಿದೆ. ಇದು ಆಗಬಾರದು. ಇದರಿಂದ ಅಭಿವೃದ್ಧಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್, ಜಾತ್ಯಾತೀತ ಜನತಾದಳ ಹಾಗೂ ಬಿಜೆಪಿ ಸರ್ಕಾರಗಳಿಂದ ಜನತೆ ಬೇಸತ್ತಿದ್ದಾರೆ. ಮೂರು ಪಕ್ಷಗಳು ಕೇವಲ ಅಧಿಕಾರಕ್ಕೆ ಮಾತ್ರ ಕಚ್ಚಾಡುತ್ತಿರುವುದು ಬಹಿರಂಗಗೊಂಡಿದೆ. ಹೀಗಾಗಿ ಪರ‍್ಯಾಯ ಶಕ್ತಿಯಾಗಿ ಆಮ್ ಆದ್ಮಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಪಕ್ಷಕ್ಕೆ ಸೇರಿದ್ದಾಗಿ ಅವರು ಹೇಳಿದರು.

ನಾನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸುಮಾರು ೩೦ ನಿಮಿಷಗಳಿಗಿಂತ ಹೆಚ್ಚು ಕಾಲ ಮಾತನಾಡಿದೆ. ಪಕ್ಷಕ್ಕೆ ಕರ್ನಾಟಕದಲ್ಲಿ ಮಾರ್ಗದರ್ಶನ ಮಾಡಲು ತಿಳಿಸಿದ್ದಾರೆ. ದೆಹಲಿ ಸರ್ಕಾರದಲ್ಲಿನ ಜನಪರ ಯೋಜನೆಗಳು ಕರ್ನಾಟಕದಲ್ಲಿ ಜಾರಿಯಾಗಬೇಕು. ಆ ದಿಸೆಯಲ್ಲಿ ನಾನೂ ಸಹ ಪಕ್ಷಕ್ಕೆ ಸೇರ್ಪಡೆಯಾಗಿ ಹುಬ್ಬಳ್ಳಿ- ಧಾರವಾಡಕ್ಕೆ ಭೇಟಿ ನೀಡಿ, ಈಗ ಇಲ್ಲಿಗೆ ಬಂದಿರುವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಧಿಕಾರ ವಿಕೇಂದ್ರೀಕರಣ ಅಗಬೇಕು. ಅದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿದೆ. ಬೆಳಗಾವಿಯಲ್ಲಿ ಸುವರ್ಣ ವಿಕಾಸ ಸೌಧ ನಿರ್ಮಿಸಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಸಹ ಉತ್ತರ ಕರ್ನಾಟಕದವರಾಗಿದ್ದು, ಕೆಲ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ವಿಕಾಸ ಸೌಧಕ್ಕೆ ವರ್ಗಾವಣೆ ಮಾಡಬೇಕು. ಆರು ತಿಂಗಳುಗಳ ಕಾಲ ಆಡಳಿತವನ್ನು ಬೆಳಗಾವಿ ಸುವರ್ಣ ಸೌಧದಿಂದಲೇ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಸಮಾನ ಮನಸ್ಕರನ್ನು ಭೇಟಿ ಮಾಡಿ ಆಮ್ ಆದ್ಮಿ ಪಕ್ಷವನ್ನು ಬಲಪಡಿಸಲು ಸಂಚಾರ ಕೈಗೊಂಡಿದ್ದಾಗಿ ತಿಳಿಸಿದ ಅವರು, ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಹಾಗೂ ಜನಪರ ಸರ್ಕಾರವನ್ನು ಆಮ್ ಆದ್ಮಿ ಪಕ್ಷದಿಂದ ತರುವ ಉದ್ದೇಶದಿಂದ ಆ ಪಕ್ಷವನ್ನು ಬಲಪಡಿಸುವ ದಿಸೆಯಲ್ಲಿ ಪ್ರವಾಸ ಆರಂಭಿಸಿರುವೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಚಾಲಕ ಜಗದೀಶ್ ಸದಂ, ಜಿಲ್ಲಾ ಸಂಚಾಲಕ ಜಗದೀಶ್ ಬಳ್ಳಾರಿ, ಮಾಧ್ಯಮ ಸಂಚಾಲಕ ಸಂಜೀವಕುಮಾರ್ ಕರಿಕಲ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here