ಶಹಾಬಾದ: ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ಎ.ಐ.ಯು.ಟಿ.ಯು.ಸಿ) ವತಿಯಿಂದ ಆಹಾರ ಕಿಟ್ ಹಾಗೂ ನೈರ್ಮಲೀಕರಣ ಸುರಕ್ಷಾ ಸಾಮಾಗ್ರಿಗಳ ಕಿಟ್‌ಗಳನ್ನು ನಗರದ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಯಿತು.
ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ.ಎಸ್.ಇಬ್ರಾಹಿಂಪೂರ, ನಿಜವಾದ ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕ ಮಂಡಳಿಯಿಂದ ಸಿಗುವ ಹಲವಾರು ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಅದರ ಸದುಪಯೋಗ ಮಾಡಿಕೊಳ್ಳಬೇಕು. ಸರಕಾರವು ಪ್ರತಿ ಕಟ್ಟಡ ಕಾರ್ಮಿಕರಿಗೆ ರೂ. ೫೦೦೦/- ಕೊರೊನಾ ಪರಿಹಾರವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಿದೆ. ಒಂದು ವೇಳೆ ಕಾರ್ಮಿಕರಿಗೆ ಜಮಾ ಆಗದೆ ಇದ್ದ ಪಕ್ಷದಲ್ಲಿ ಕಾರ್ಮಿಕ ಇಲಾಖೆಗೆ ತಮ್ಮ ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ ಕಾರ್ಡ ಝಿರಾಕ್ಷ ಸಲ್ಲಿಸಬೇಕು ಎಂದು ತಿಳಿಸಿದರು.
ಆಕಸ್ಮಿಕ ಮರಣ ಹೊಂದಿದ ಪಕ್ಷದಲ್ಲಿ ಕಾರ್ಮಿಕರ ಕುಟುಂಬಕ್ಕೆ ೫ ಲಕ್ಷ ರೂಪಾಯಿ ಪರಹಾರ ಸಿಗಲಿದೆ. ಕಾರ್ಮಿಕರ ಮಕ್ಕಳಿಗೆ ಕಾಲರ್ಶಿಪ್ ವ್ಯವಸ್ಥೆ ಇದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಎ.ಐ.ಎಂ.ಎಸ್.ಎಸ್. ಕಲಬರುಗಿ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಮಾತನಾಡಿ, ದುಡಿಯುವ ಕಾರ್ಮಿಕರಿಗೆ ಸರಕಾರದ ಎಲ್ಲಾ ಸೌಲಭ್ಯಗಳು ಸಿಗಬೇಕಾಗಿದೆ. ಕಾರ್ಮಿಕ ಸಂಘಟನೆಯು ಬಡ ಕಾರ್ಮಿಕರ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟಗಳನ್ನು ಕಟ್ಟುತ್ತಿದೆ. ಕಾರ್ಮಿಕರು ಪ್ರಜ್ಞಾವಂತರಾಗಿ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ದುಡಿಯುವ ಕಾರ್ಮಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ. ಬಿಸಿಲು, ಮಳೆ, ಚಳಿ ಎನ್ನದೆ ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಎಲ್ಲಾ ವಿಷಯಗಳನ್ನು ತಿಳಿದುಕೊಂಡು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ಕಟ್ಟಡ ಕಾರ್ಮಿಕ ಸಂಘದ ಸ್ಥಳೀಯ ಮುಖಂಡರಾದ ರಾಘವೆಂದ್ರ.ಎಂ.ಜಿ. ವಹಿಸಿಕೊಂಡಿದ್ದರು. ಕಟ್ಟಡ ಕಾರ್ಮಿಕ ಸಂಘದ ಸದಸ್ಯರಾದ ನಾಗರಾಜ ಟಿ. ಕುಸಾಳೆ ನಡೆಸಿಕೊಟ್ಟರು. ಸಾಂಕೇತಿಕವಾಗಿ ಸುಮಾರು ೧೦೦ ಕಟ್ಟಡ ಕಾರ್ಮಿಕರಿಗೆ ಸುರಕ್ಷ ಕಿಟ್‌ನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಿಮ್ಮಯ್ಯ ಬಿ. ಮಾನೆ. ರಾಮು ಮಡ್ಡಿ, ಸುರೇಶ ಮಾನೆ, ಲಕ್ಷ್ಮಣ ದೇವಕರ್ ಅಂಬಣ್ಣ ತರನಳ್ಳಿ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.