ಪೃಥ್ವಿಗೆ ತವರ್ಮನೆಯೆನಿಪ್ಪ ಕಲ್ಯಾಣಪುರ
ದುತ್ತಮ ಪರುಷೆ ಪಟ್ಟಣಂಬೊಕ್ಕು ಬಸವ ನೆಗ
ಳ್ದತ್ಯಚ್ಚರಿಯನು ಬಲದೇವದಂಡಾಧಿಪನ ಮನೆ
ಯೋಲಗದೋಲುಸುರ್ದರು
(ಸಿಂಗಿರಾಜನ ಪುರಾಣ, ೬-೨೩)
ಸಿಂಗಿರಾಜನ ಈ ಪುರಾಣ ಕಥೆಯು ವಚನ ಚಳವಳಿಯ ನೇತಾರ ಬಸವಣ್ಣ ಹಾಗೂ ಬಸವಕಲ್ಯಾಣದ ಬಗ್ಗೆ ಇನ್ನೂ ಹೆಚ್ಚಿನ ಹೊಸ ಸಂಗತಿಯನ್ನು ತಿಳಿಸಿಕೊಡುವಂತಿದೆ. ಬಸವಕಲ್ಯಾಣದ ಪರುಷ ಪಟ್ಟಣ ಭಾಗವು ಬಲದೇವ ಮಂತ್ರಿ ಹಾಗೂ ಅಧಿಕಾರಿಗಳಿರುವ ಸ್ಥಳವಾಗಿತ್ತು. ಈಗಿನ ಪರುಷ ಕಟ್ಟೆಯು ಬಸವಣ್ಣನವರು ನಡೆಸುವ ಜನತಾ ದರ್ಶನ ನಡೆಸುವ ಸ್ಥಳವಾಗಿತ್ತು. ಬಸವ ಮಠವು ಬಸವಣ್ಣನವರ ಮಹಾಮನೆಯಾಗಿತ್ತು. ಇದರ ಹಿಂದೆಯೇ ಇರುವ ಪೀರ್‌ಪಾಶಾ ಬಂಗ್ಲಾ ಅನುಭವ ಮಂಟಪ ಆಗಿತ್ತು ಎಂಬ ಪಾರಂಪರಿಕ ಮಾತುಗಳಿಗೆ ಹೆಚ್ಚಿನ ಮಹತ್ವ ಸಿಗುತ್ತದೆ.
ಕೂಡಲಸಂಗಮದಿಂದ ಆಗಮಿಸಿದ ಬಸವಣ್ಣ, ಕಂದಗಲ್‌ನಿಂದ ಆಗಮಿಸಿದ ಶಂಕರ ದಾಸಿಮಯ್ಯ, ಮುದನೂರಿನಿಂದ ಆಗಮಿಸಿದ ಜೇಡರ ದಾಸಿಮಯ್ಯ, ಉರಿಲಿಂಗಪೆದ್ದಿ ಮುಂತಾದ ಶರಣರ ಸ್ಮಾರಕಗಳು ಹಾಗೂ ಚಾಲೂಕ್ಯರ ಕಾಲದ ಕೋಟೆ, ಗೋಸಾಯಿಗಲ್ಲಿ ಇತ್ಯಾದಿಗಳು ಸ್ಥಳ ಹಾಗೂ ಪಳಿಯುಳಿಕೆಗಳು ಬಸವಕಲ್ಯಾಣದಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವುದನ್ನು ನಾವು ಕಾಣಬಹುದು.
ಮಹಾರಾಷ್ಟ್ರದ ಸೊಲ್ಲಾಪುರದಿಂದ ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ೧೯೪೭ರಲ್ಲಿ ಬಂದ ವಾರದ ಮಲ್ಲಪ್ಪನವರ ಮಗ ಬಾಬಾ ಸಾಹೇಬ ವಾರದ ಅವರು ಬಸವಾದಿ ಶರಣರು ನಡೆದಾಡಿದ ಕಾಯಕಭೂಮಿ ಕಲ್ಯಾಣದ ಅಭಿವೃದ್ಧಿಗೆ ಅಂದೇ ನೀಲನಕ್ಷೆ ಸಿದ್ಧಪಡಿಸಿದ್ದರು. ಮಾಜಿ ಉಪ ರಾಷ್ಟ್ರಪತಿ ಬಿ.ಡಿ. ಜತ್ತಿ ಮತ್ತಿತರರ ಅವಿರತ ಪರಿಶ್ರಮದಿಂದಾಗಿಯೇ ಕಿಲ್ಲೆಕಲ್ಯಾಣ ಬಸವಕಲ್ಯಾಣ ಆಗಿ ಪರಿಣಮಿಸಿರುವುದನ್ನು ನಾವು ಗಮನಿಸಬಹುದು.