ಆಳಂದ(ಗ್ರಾ): ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟ ಸಮಯದಲ್ಲಿ ನೂರಾರು ಸಮಸ್ಯೆ ಎದುರಿಸಿದ ವಲಸೆ ಹಾಗೂ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಸರಕಾರದ ಆರ್ಥಿಕ ನೆರವು ಅಗತ್ಯವಾಗಿದೆ ಎಮದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ ಹೇಳಿದರು.
ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಡ ಕಟ್ಟಡ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದರು.
ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಧನ ಪ್ಯಾಕೆಜ್ ಘೋಷಿಸಿದೆ. ಆಯಾ ಫಲಾನುಭವಿಗಳಿಗೆ ನೇರ ಹಣ ಸಂದಾಯ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಮಕ್ಕಳಿಗೆ ಬಾಲ ಕಾರ್ಮಿಕರನ್ನಾಗಿ ಮಾಡದೇ ಅವರನ್ನು ಸರಿಯಾದ ಶಿಕ್ಷಣ ನೀಡಬೇಕು. ನಿಮ್ಮೊಂದಿಗೆ ಸರಕಾರ ಇರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಯಳಸಂಗಿ, ಹಿತ್ತಲಶಿರೂರ ಗ್ರಾಮಗಳಲ್ಲಿ ಸುಮಾರು ೩೦೦ ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಮುಖಂಡರಾದ ಮೈಲಾರಿ ದೊಡ್ಡಮನಿ, ಸಿದ್ದಾರ್ಥ ದಿಕ್ಸಂಗಿ, ವಿಜಯಕುಮಾರ ಜಿಡಗಿ, ವಿಠ್ಠಲ ಚಿಕನ, ಅಂಬಾರಾಯ ಕಾಮನಕರ್, ಸಿದ್ದರಾಮ ಸಾವಳಗಿ, ಪಾಂಡುರಂಗ ಕಾಮನಕರ, ವಿಜಯಕುಮಾರ ಯಳಸಂಗಿ, ಭೀಮಶ್ಯಾ, ರಾಜು ಉಪಸ್ಥಿತರಿದ್ದರು.