ವಾಡಿ: ಸಾಂಕ್ರಾಮಿಕ ರೋಗ ಕೊರೊನಾ ಮತ್ತೊಮ್ಮೆ ತನ್ನ ಅಟ್ಟಹಾಸ ಮೆರೆಯುವ ಲಕ್ಷಣಗಳು ಕಾಣಿಸುತ್ತಿದ್ದು, ಕೋವಿಡ್ ಹೊಸ ಮಾರ್ಗಸೂಚಿಗಳನ್ವಯ ಇದೇ ಆ.22 ರಂದು ನಡೆಯಬೇಕಿದ್ದ ಈ ಭಾಗದ ಸುಪ್ರಸಿದ್ಧ ಸಜ್ಜಾದಾ ನಸೀನ್ ಆಸ್ತಾನ್-ಇ-ಖದೀರಿ ಹಳಕರ್ಟಿ ದರ್ಗಾ ಶರೀಫ್‍ರ 44ನೇ ಉರೂಸ್ ಈ ವರ್ಷವೂ ಕೂಡ ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ದರ್ಗಾದ ಪೀಠಾಧಿಪತಿ ಅಬುತುರಾಬ ಶಹಾ ಖ್ವಾದ್ರಿ ಪ್ರಕಟಿಸಿದ್ದಾರೆ.
ಜಾತ್ರಾಮಹೋತ್ಸವ ನಿಮಿತ್ತ ದರ್ಗಾ ಸಭಾಂಗಣದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳೆ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಸಾಹೇಬ ಅವರು ಮಾತನಾಡಿದರು. ದೇಶದ ಹತ್ತಾರು ರಾಜ್ಯಗಳಿಂದ ಉರೂಸ್‍ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅಸಂಖ್ಯಾತ ಭಕ್ತರಿಗೆ ಈಗಾಗಲೇ ಉರೂಸ್ ರದ್ದಾಗಿರುವ ಸಂದೇಶ ರವಾನಿಸಿದ್ದೇವೆ.
ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಸೀಮಿತ ಜನರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕ ಧಾರ್ಮಿಕ ಆಚರಣಗಳನ್ನು ಪೂರ್ಣಗೊಳಿಸಿದ್ದೇವು. ಈ ವರ್ಷವೂ ಕೂಡ ಪೊಲೀಸ್ ಇಲಾಖೆಯಿಂದ ಉರೂಸ್ ಆಚರಿಸದಂತೆ ಆದೇಶವಿದ್ದು, ಅದನ್ನು ನಾವು ಗೌರವಿಸುತ್ತೇವೆ. ಪ್ರತಿವರ್ಷ ಹೈದರಾಬಾದ ನಗರದಿಂದ ಹಳಕರ್ಟಿ ಉರೂಸ್‍ಗಾಗಿ ಆಗಮಿಸುತ್ತಿದ್ದ ಸಂಧಲ್ ವಿಶೇಷ ರೈಲು ಮಂಜೂರಾತಿಗೆ ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ.
ಇಲಾಖೆಯಿಂದ ಯಾವೂದೇ ಉತ್ತರ ಬಂದಿಲ್ಲ. ಒಂದು ವೇಳೆ ವಿಶೇಷ ರೈಲು ಸೌಲಭ್ಯ ಸಿಕ್ಕರೆ ಮೆರವಣಿಗೆಯಿಲ್ಲದೆ ‘ಸಂಧಲ್’ ಹಳಕರ್ಟಿ ದರ್ಗಾ ತಲುಪಲಿದೆ. ರೋಗದ ಭೀಕರತೆಯನ್ನು ಅರಿತುಕೊಂಡು ಭಕ್ತರು ಮನೆಯಿಂದಲೇ ಹರಕೆ ತೀರಿಸುವ ಮೂಲಕ ದರ್ಗಾ ಶರೀಫ್ ಅವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ ಉಮಾಕಾಂತ ಹಳ್ಳೆ ಹಾಗೂ ಪಿಎಸ್‍ಐ ವಿಜಯಕುಮಾರ ಭಾವಗಿ, ಉರೂಸ್ ಸಂಪೂರ್ಣ ರದ್ದುಪಡಿಸಲಾಗಿದೆ. ಹೊರಗಿನ ಭಕ್ತರು ದರ್ಗಾ ಪ್ರವೇಶ ಮಾಡುವಂತಿಲ್ಲ. ವಿಶೇಷವಾಗಿ ಸೊಂಕಿತರ ನಾಡು ಕೇರಳ ಮತ್ತು ಮಹಾರಾಷ್ಟ್ರದ ಭಕ್ತರ ಮೇಲೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆ.22 ರಿಂದ 24 ವರೆಗೆ ದರ್ಗಾ ಪ್ರವೇಶ ನಿಷೇಧಿಸಲಾಗಿದೆ. ಉರೂಸ್‍ನ ಸಾಂಪ್ರಾದಾಯಿಕ ಆಚರಣೆಗಳನ್ನು ಕೆಲವೇ ಜನರ ಸಹಭಾಗಿತ್ವದಲ್ಲಿ ಸರಳವಾಗಿ ನಡೆಸಬೇಕು. ಸಂಧಲ್ ಮೆರವಣಿಗೆಗೆ ಅವಕಾಶವಿಲ್ಲ.
ನಿಗದಿತ ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರೆ ಹಿಂದೆಮುಂದೆ ನೋಡದೆ ಊರೂಸ್ ಸಮಿತಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾನೂನಿನ ನಿಯಮಗಳಡಿ ಆಚರಣೆಗಳನ್ನು ಪೂರೈಸಿದರೆ ಎಲ್ಲರಿಗೂ ಅನುಕೂಲ ಎಂದು ಕಿವಿಮಾತು ಹೇಳಿದರು.
ನಾಲವಾರ ನಾಡಕಚೇರಿಯ ಉಪ ತಹಶೀಲ್ದಾರ ಲಕ್ಷ್ಮೀನಾರಾಯಣ, ಕ್ರೈಂ ಪಿಎಸ್‍ಐ ತಿರುಮಲೇಶ, ಕಂದಾಯ ನಿರೀಕ್ಷಕ ಪ್ರಶಾಂತ ರಾಠೋಡ ಇದ್ದರು.