“ವಚನ ದರ್ಶನ” ಪ್ರವಚನ ಭಾಗ-4

0
17

ಮನದೊಡೆಯ ಮಹಾದೇವ ಮನವ ನೋಡಿಹೆನೆಂದು
ಮನುಜರ ಕೈಯಿಂದ ಒಂದೊಂದ ನುಡಿಸುವನು.
ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ.
ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.
ಬಸವಣ್ಣಪ್ರಿಯ ಚನ್ನಸಂಗಯ್ಯನು ಬೆಟ್ಟದನಿತಪರಾಧವನು
ಒಂದು ಬೊಟ್ಟಿನಲ್ಲಿ ತೊಡೆವನು.

ವಚನಗಳು ನಮ್ಮ ಮನದ ಮೈಲಿಗೆಯನ್ನು ತೊಳೆಯುತ್ತವೆ. ನಮ್ಮ ಮನಸ್ಸಿನಲ್ಲಿರುವ ಸಂಶಯಗಳನ್ನು ನಿರಸನ ಮಾಡುತ್ತವೆ. ನಮ್ಮ ಎಲ್ಲ ಕ್ರಿಯೆಗಳಲ್ಲಿ ಮನಸ್ಸಿನ ಪಾತ್ರ ಬಹುದೊಡ್ಡದಾಗಿರುತ್ತದೆ. ಸಕಲ ಇಂದ್ರಿಯೆಗಳಲ್ಲಿ ಮನಸ್ಸೆ ಪ್ರಧಾನವಾಗಿರುತ್ತದೆ. ಮನಸ್ಸು ಹೇಳಿದ ಹಾಗೆ ಇಂದ್ರಿಯೆಗಳು ನಡೆದುಕೊಳ್ಳುತ್ತವೆ. ಅದಕ್ಕಾಗಿ ಶರಣರು ಮತ್ತೆ ಮತ್ತೆ ಮನಸ್ಸಿಗೆ ಉಪದೇಶ ಮಾಡುತ್ತಾರೆ. ಶರಣೆ ಅಕ್ಕನಾಗಮ್ಮ ತಾಯಿಯವರು ಈ ವಚನದಲ್ಲಿ ಮನಸ್ಸಿಗೆ ನಿಜವ ಅರಿಯಲು ಹೇಳುತ್ತಾರೆ. ಮನದ ಒಡೆಯನಾಗಿರುವ ಮಹಾದೇವನು ನಮಗೆ ಪರೀಕ್ಷಿಸಲು ಮನುಜರ ಕೈಯಿಂದ ಅನೇಕ ಕಷ್ಟಗಳು, ನೋವುಗಳು ಕೊಡುತ್ತಾನೆ.

Contact Your\'s Advertisement; 9902492681

ಆ ಸಂದರ್ಭದಲ್ಲಿ ನಾವು ಧೈರ್ಯಗೇಡದೆ ನಿಜವನರಿತು ನಿಶ್ಚಿಂತವಾಗಿ ಶರಣ ಮಾರ್ಗದಲ್ಲಿ ಮುನ್ನಡೆದರೆ ಶಿವನೊಲುಮೆ ಆಗುತ್ತದೆ. ನಾವು ಸತ್ಯದ ದರ್ಶನಕ್ಕೆ ಹಂಬಲಿಸಿದರೆ ಆ ಪರಮಾತ್ಮನು ಬೆಟ್ಟದಷ್ಟು ಅಪರಾಧಗಳು ಇದ್ದರೂ ಪರಿಹರಿಸುತ್ತಾನೆ. ನಮಗೆ ಭಕ್ತಿ, ಶೃದ್ಧೆ, ನಿಷ್ಠೆ ಮತ್ತು ಹಂಬಲ ಇರಬೇಕು. ನಮ್ಮ ಮನಸ್ಸಿನಲ್ಲಿ ನಿರಂತರ ಹಂಬಲ ಇದ್ದರೆ ನಾವು ನಿಜವನರಿಯಲು ಸಾಧ್ಯವಿದೆ. ನಿಜವ ಅರಿತ ಮೇಲೆ ನಮ್ಮ ಬದುಕು ನಿಶ್ಚಿಂತವಾಗುತ್ತದೆ ಎಂದು ಅಕ್ಕನಾಗಮ್ಮತಾಯಿಯವರು ಹೇಳುತ್ತಾರೆ.

ಇಂದು ಅಕ್ಕನಾಗಮ್ಮತಾಯಿಯವರ ಜಯಂತಿ. ಶರಣಸಾಹಿತ್ಯ ರಕ್ಷಣೆಯಲ್ಲಿ ಅಕ್ಕನಾಗಮ್ಮನವರ ಅಪಾರ ಕೊಡುಗೆ ಇದೆ. ವಿಶ್ವಗುರು ಬಸವಣ್ಣನವರ ಹೃದಯದಲ್ಲಿ ಕ್ರಾಂತಿಯ ಬೀಜ ಬಿತ್ತಿದ ಮಹಾತಾಯಿಯೇ ಅಕ್ಕನಾಗಮ್ಮ. ಜೀವನದುದ್ದಕ್ಕೂ ಬಸವಣ್ಣನವರ ಜೊತೆಯಾಗಿಯೇ ಇದ್ದು, ಅವರ ಪ್ರತಿಯೊಂದು ಕಾರ್ಯದಲ್ಲಿ ಸಮರ್ಪಣೆ ಭಾವದಿಂದ ಕಾರ್ಯ ಮಾಡಿದ್ದಾರೆ.

ವಿಶೇಷವಾಗಿ ಮಹಾಮನೆಯ ಎಲ್ಲಾ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾಯಿಸಿದ್ದಾರೆ. ಮಹಾಮನೆಯ ದಾಸೋಹ ಸೇವೆ, ಮಹಿಳೆಯರಿಗಾಗಿ ಶಿಕ್ಷಣ ಹಾಗೂ ವಚನ ಸಾಹಿತ್ಯ ರಕ್ಷಣೆ ಮಹತ್ವಪೂರ್ಣವಾದದ್ದು. ಇವರ ಹದಿನಾಲ್ಕು ವಚನಗಳು ನಮಗೆ ದೊರೆತಿವೆ. “ಬಸವಪ್ರಿಯ ಚನ್ನಸಂಗಯ್ಯ” ಎಂಬ ಅಂಕಿತದಲ್ಲಿ ಬರೆದಿರುವ ವಚನಗಳಲ್ಲಿ ಬಸವಭಕ್ತಿ ತುಂಬಿ ತುಳುಕುತ್ತಿದೆ. ಎಲ್ಲಾ ವಚನದಲ್ಲಿ ಬಸವಣ್ಣನವರ ಭವ್ಯ ವ್ಯಕ್ತಿತ್ವದ ದಿವ್ಯದರ್ಶನ ಮಾಡಿಸುತ್ತಾರೆ. ಬಸವಣ್ಣನವರ ಲಿಂಗೈಕ್ಯವಾದ ನಂತರ ಅವರು ಮಾಡಿರುವ ಪ್ರಲಾಪ ವಚನಗಳಲ್ಲಿ ಹೃದಯಸ್ಪರ್ಶವಾಗಿ ಮೂಡಿಬಂದಿವೆ.

“…..ನೀವು ಲಿಂಗೈಕ್ಯವಾದೊಡೆ ನಿಮ್ಮನೊಡನೆ ಭಕ್ತಿ ಹೋಯಿತಯ್ಯ, ನಿಮ್ಮನೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ, ಮೃತ್ಯಲೋಕದ ಮಹಾಮನೆ ಶೂನ್ಯವಾಯಿತ್ತಯ್ಯ ಬಸವಣ್ಣ ಎನ್ನನೊಯ್ಯದೆ ಹೋದೆಲ್ಲಾ ಪಂಚಪರುಷ ಮೂರುತಿ ಬಸವಣ್ಣ” ಇಂತಹ ವಚನಗಳನ್ನು ಓದುವಾಗ ತನ್ನ ತಾನೆ ಕಣ್ಣು ತುಂಬಿ ಬರುತ್ತವೆ.

ಕಲ್ಯಾಣದ ಹತ್ಯಾಕಾಂಡದ ನಂತರ ಅಕ್ಕನಾಗಮ್ಮತಾಯಿಯವರು ಖಡ್ಗವನ್ನು ನೀಡಿದು ವಚನ ಸಾಹಿತ್ಯದ ರಕ್ಷಣೆ ಮಾಡದಿದ್ದರೆ ಇಂದು ನಮಗೆ ವಚನ ಸಾಹಿತ್ಯದ ನಿಧಿ ಸಿಗುತ್ತಿರಲಿಲ್ಲ. ಇಂದು ನಾವು ವಚನಗಳ ಪಠಣ, ಚಿಂತನ, ಮಂಥನ, ಅನುಭಾವ ಮಾಡುತ್ತಿದ್ದೇವೆಂದರೆ, ಅದರ ಹಿಂದೆ ಅಕ್ಕನಾಗಮ್ಮನವರ ತ್ಯಾಗ, ಬಲಿದಾನ ಇದೆ ಎಂದು ನಾವು ಎಂದೂ ಮರೆಯಬಾರದು. ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮತಾಯಿಯವರ ತ್ಯಾಗ ಬಲಿದಾನ ನಮಗೆ ಪ್ರೇರಣಾದಾಯಕವಾಗಲಿ ನಾವು ದಿನನಿತ್ಯ ವಚನ ಪಾರಾಯಣ, ವಚನ ಚಿಂತನ ಮಾಡುವ ಮೂಲಕ ಅಕ್ಕನಾಗಮ್ಮತಾಯಿಯವರಿಗೆ ಗೌರವ ಸಲ್ಲಿಸೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here