ಆಳಂದ: ಕೋವಿಡ್-19 ನಿಯಮಾವಳಿ ಉಲ್ಲಂಘಿಸಿ ಸಮುದಾಯದ ಮುಖಂಡರು ಗಣೇಶ ಚತುರ್ಥಿ ಹಾಗೂ ಮೊಹರಂ ಆಚರಿಸಿದರೆ ಮೂಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್‍ಪಿ ಮಲ್ಲಿಕಾರ್ಜುನ ಸಾಲಿ ಅವರು ಇಂದಿಲ್ಲಿ ಎಚ್ಚರಿಸಿದರು.
ಪಟ್ಟಣದಲ್ಲಿನ ಸಿಪಿಐ ಕಚೇರಿ ಆವರಣದಲ್ಲಿ ಮೊಹರಂ ಹಾಗೂ ಗಣೇಶಚತುರ್ಥಿ ಅಂಗವಾಗಿ ಶನಿವಾರ ಕರೆದ ನಾಗರಿಕ ಶಾಂತಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಹರಡದಂತೆ ಮುಂಜಾಗೃತ ಕ್ರಮವಹಿಸಲು ಸಾರ್ವಜನಿಕ ಸ್ಥಳಗಳಲ್ಲಿ ಮೊಹರಂ ಹಬ್ಬದ ಪಂಜಾ ಸ್ಥಾಪನೆ ಹಾಗೂ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ತಮ್ಮ ಮನೆಗಳಲ್ಲೇ ಸ್ಥಾಪಿಸಿ ಐದಕ್ಕಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಹೆಚ್ಚಿಗೆ ಜನ ಸೇರಿದರೆ ಪೊಲೀಸರು ಮಧ್ಯ ಪ್ರವೇಶಿಸಬೇಕಾಗುತ್ತದೆ. ಇಂಥ ಪರಿಸ್ಥಿತಿ ಎದುರಾದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮನೆ, ಅಥವಾ ದೇವಸ್ಥಾನಗಳಲ್ಲಿ ಸ್ಥಾಪಿಸಿದ ಗಣೇಶ ವಿಸರ್ಜನೆ ವೇಳೆ ಐದಕ್ಕಿಂತ ಹೆಚ್ಚು ಜನ ಸೇರದಂತೆ ವಿಷರ್ಜನೆ ಕೈಗೊಳ್ಳಬೇಕು. ನಿಯಮ ಮಿರಿ, ರಸ್ತೆಯಲ್ಲಿ ಅಸಭ್ಯ ವರ್ತನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆದರೆ ಮೂಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಎರಡೂ ಹಬ್ಬಗಳನ್ನು ಸೌಹಾರ್ದಯುತ್ತವಾಗಿ ಸಾಮಾಜಿಕ ಅಂತರದೊಂದಿಗೆ ಶಾಂತಿಯುತ ಆಚರಿಸಿ ಸ್ವಾಸ್ಥ್ಯ ವಾತಾವರಣ ನಿರ್ಮಾಣಕ್ಕೆ ಜೋಡಿಸಬೇಕು ಎಂದರು.
ಸಿಪಿಐ ಮಂಜುನಾಥ ಅವರು ಮಾತನಾಡಿ, ಮೂರ್ತಿಗಳ ಸ್ಥಾನೆಗೆ ಸಂಬಂಧಿತ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದಕ್ಕಾಗಿ ಒಂದೇ ಸ್ಥಳದಲ್ಲಿ ಎಲ್ಲಾ ಇಲಾಖೆಯ ಅನುಮತಿ ನೀಡಲು ಅವಕಾಶ ಕಲ್ಪಿಸಲಾಗುವುದು ಸಾರ್ವಜನಿಕರು ಸಹಕರಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹಾವೀರ ಠಕಾಳೆ, ಜೆಸ್ಕಾಂ ಇಂಜಿನಿಯರ್ ಪರಮೇಶ್ವರ, ಮುಖಂಡ ಸೂರ್ಯಕಾಂತ ತಟ್ಟಿ, ಶಿವಾಜಿ ರಾಠೋಡ ಪುರಸಭೆ ಸದಸ್ಯ ಫಿರದೋಸ್ ಅನ್ಸಾರಿ ಮತ್ತಿತರು ಮಾತನಾಡಿದರು.
ಪಿಎಸ್‍ಐ ಮಹಾಂತೇಶ ಪಾಟೀಲ ಪ್ರಾಸ್ತಾವಿಕ ಮಾತನಾಡಿ ನಿಯಮಾವಳಿ ಹೇಳಿದರು.
ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಎಎಸ್‍ಐ ರಾಮಣ್ಣಾ ಜೆವರ್ಗಿ, ಅಗ್ನಿಶಾಮಕ ದಳ ಅಧಿಕಾರಿ ಸೈಯದ್ ಗನಿ, ಆಸೀಫ್ ಅನ್ಸಾರಿ, ಪಂಡಿತ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಶ್ರೀಶೈಲ ಖಜೂರಿ, ಜಾಕೀರ ಅನ್ಸಾರಿ, ಸುಲೆಮಾನ್ ಮುಕುಟ್, ಗುಲಾಮಹುಸೇನ ಅಪ್ಪೇವಾಲೆ, ದಯಾನಂದ ಶೇರಿಕಾರ, ಆನಂದ ದೇಶಮುಖ, ಅಬ್ದುಲ ಸತಾರ ಮುರುಮಕರ್, ಪ್ರಭಾಕರ ಘನಾತೆ, ಪೊಲೀಸ್ ಪೇದೆ ಶೇಖರ ಕಾರಬಾರಿ, ಸಿದ್ಧರಾಮ ಬಿರಾದಾರ, ಸೇರಿದಂತೆ ಎರಡೂ ಸಮುದಾಯಗಳ ಮುಖಂಡರು ಪಾಳ್ಗೊಂಡಿದ್ದರು.
ಮಹಾಂತೇಶ ದೇಸಾಯಿ ನಿರೂಪಿಸಿದರು. ಮಹಿಬೂಬ ಶೇಖ ವಂದಿಸಿದರು.