ಶಹಾಬಾದ: ವೃತ್ತಿಯಲ್ಲಿ ಬದ್ಧತೆ, ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಜೀವನದಲ್ಲಿ ಉತ್ತಮ ನಡೆನುಡಿಗಳನ್ನು ಹೊಂದಿರುವ ವ್ಯಕ್ತಿಗಳು ಎಲ್ಲೇ ಇರಲಿ ಗೌರವಿಸಲ್ಪಡುತ್ತಾರೆ ಎಂಬುದಕ್ಕೆ ವಿವೇಕಾನಂದ ಹಿರೇಮಠ ಉಪನ್ಯಾಸಕರೇ ನಮಗೆಲ್ಲಾ ಸಾಕ್ಷಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.
ಅವರು ನಗರದ ಪಾರ್ವತಿ ಸಭಾಂಗಣದಲ್ಲಿ ಭಂಕೂರ ಗ್ರಾಮದ ಕರ್ನಾಟಕ ಕಾಲೇಜಿನ ಉಪನ್ಯಾಸಕ ವಿವೇಕಾನಂದ ಹಿರೇಮಠ ಅವರ ವಯೋ ನಿವೃತ್ತಿ ಹೊಂದಿದ ನಿಮಿತ್ತ ವಿದ್ಯಾರ್ಥಿ ಬಳಗದ ವತಿಯಿಂದ ಆಯೋಜಿಸಲಾದ ಬಿಳ್ಕೋಡುಗೆ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.
ನಿವೃತ್ತಿ ಎಂಬುದು ನೌಕರನ ವೃತ್ತಿಜೀವನದ ಸಿಂಹಾವಲೋಕನದ ಸಮಯ.ವಿದ್ಯಾರ್ಥಿಗಳೇ ಸಮಾರಂಭವನ್ನು ಅಚ್ಚುಕಟ್ಟಾಗಿ ಏರ್ಪಡಿಸಿ ಗುರುವಿಗೆ ಗೌರ ಸಲ್ಲಿಸುತ್ತಿರುವುದು ನೋಡಿದರೇ ಎಂತವರಿಗೂ ಸಂತೋಷ ಉಂಟಾಗುತ್ತದೆÉ. ಒಬ್ಬ ಗುರು ಒಳ್ಳೆಯ ಮಾರ್ಗದರ್ಶಕ, ಮಕ್ಕಳ ಬಗ್ಗೆ ಕಾಳಜಿ, ವಿಷಯದಲ್ಲಿ ಪರಿಣಿತಿ ಹೊಂದಿದ್ದರೇ ಆ ಗುರುವನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ ಎಂಬುದಕ್ಕೆ ಹಿರೇಮಠ ಅವರೇ ನೈಜ ಉದಾಹರಣೆ.ಇದೇ ಗುರು-ಶಿಷ್ಯರ ಪರಂಪರೆ ಮುಂದುವರಿಯಲಿ.ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಇನ್ನೂ ಸಿಗುವಂತಾಗಲಿ ಎಂದು ಹೇಳಿದರು.
ಉದ್ದಿಮೆದಾರ ನಿರಂಜನ್ ಗೊಳೇದ್ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರ ವೃತ್ತಿಬದುಕಿನ ಪ್ರಾರಂಭದ ಊರು ಅಲ್ಲಿನ ಜನ, ಶಿಷ್ಯಬಳಗ, ಅಲ್ಲಿನ ಸೇವಾ ಅನುಭವ ಎಂದೂ ಮರೆಯದ ಅವಿಸ್ಮರಣೀಯ ಕ್ಷಣಗಳು. ಸೇವಾವಧಿಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರ ನೆಮ್ಮದಿ ತಾನೇ ಅರಸಿಕೊಂಡು ಬರುತ್ತದೆ ಎನ್ನುವುದಕ್ಕೆ ಇಲ್ಲಿನ ಸಮಾರಂಭವೇ ಸಾಕ್ಷಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ವಿವೇಕಾನಂದ ಹಿರೇಮಠ ಮಾತನಾಡಿ, ತಮ್ಮ ವೃತ್ತಿ ಜೀವನದಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಚಿರಋಣಿಯಾಗಿರುತ್ತೆನೆ.ಅಲ್ಲದೇ ನನ್ನ ಮೇಲೆ ವಿದ್ಯಾರ್ಥಿ ವೃಂದ ಇಟ್ಟ ಪ್ರೀತಿ ನಾನೆಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಉದ್ದಿಮೆದಾರರಾದ ವಿಜಯಕುಮಾರ ಮುಟ್ಟತ್ತಿ, ನಿರಂಜನ್ ಗೊಳೇದ್, ಅಣವೀರ ಇಂಗಿನಶೆಟ್ಟಿ, ಶಿವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಸ್.ಹಂಚಿನಾಳ, ಜಿಲ್ಲಾ ಉಪನ್ಯಾಸಕ ಸಂಘದ ಅಧ್ಯಕ್ಷ ಜೆ.ಮಲ್ಲಪ್ಪ, ವೈದ್ಯ ಡಾ.ವಿ.ಸಿ.ಇಂಗಿನಶೆಟ್ಟಿ, ಜೆ.ಎಸ್.ಮಾಲಿಪಾಟೀಲ, ಶಿಕ್ಷಕ ಗಿರಿಮಲ್ಲಪ್ಪ ವಳಸಂಗ, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಇತರರು ವೇದಿಕೆಯ ಮೇಲಿದ್ದರು. ಉಪನ್ಯಾಸಕ ಗಿರಿರಾಜ ಪವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಗುರುಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು,
ಉಪನ್ಯಾಸಕ ದೇವೆಂದ್ರಪ್ಪ ಅಂಗಡಿ ನಿರೂಪಿಸಿದರು, ಮರಲಿಂಗ ಯಾದಗಿರಿ, ಹಣಮಂತ ಕುಂಬಾರ ವಂದಿಸಿದರು.