ಸುರಪುರ: ಇಲ್ಲಿಯ ನಗರಸಭೆ ಹಾಗೂ ಶ್ರೀ ಗಂಗಾ ಪರಮೇಶ್ವರಿ ಹೊಲಿಗೆ ತರಬೇತಿ ಕೇಂದ್ರ ಸಹಯೋಗದಲ್ಲಿ 2019-20ನೇ ಸಾಲಿನ ಶೇ24 ಯೋಜನೆ ಅಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮಹಿಳೆಯರಿಗೆ ಹೊಲಿಗೆ ಹಾಗೂ ಕರಕುಶಲ ಜದೋಸಿ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ, ಈಗಾಗಲೇ ಮಹಿಳೆಯರು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ತೋರಿಸುವ ಮೂಲಕ ನಾನು ಸಹ ಎಲ್ಲರಂತೆ ಬದುಕಬಲ್ಲೆನು ಎಂಬುದನ್ನು ಸಮಾಜದಲ್ಲಿ ತೋರಿಸಿಕೊಟ್ಟಿದ್ದಾಳೆ ಎಂದು ಅವರು ಹೇಳಿದರು.
ಇಂದು ಮಹಿಳೆಯರು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಮಾಜದಲ್ಲಿ ಸ್ವಾವಲಂಬನೆ ಬದುಕಿನತ್ತ ಸಾಗುವ ಮಹಿಳೆಯರು ತೋರಿಸಿಕೊಟ್ಟಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರು ಸರಕಾರದ ವಿವಿಧ ಯೋಜನೆಗಳಲ್ಲಿ ನೀಡಲಾಗುವ ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆದುಕೊಳ್ಳುವ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ,ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಮಾತನಾಡಿದರು, ಸಮುದಾಯ ಸಂಘಟನಾ ಅಧಿಕಾರಿ ಓಂಕಾರ ಪೂಜಾರಿ ಉಪಸ್ಥಿತರಿದ್ದರು.
ತರಬೇತಿ ಸಂಸ್ಥೆಯ ಅಧ್ಯಕ್ಷೆ ಶೀಲಾದೇವಿ ಪಿಡ್ಡಪ್ಪ ಜಾಲಗಾರ ಅಧ್ಯಕ್ಷತೆ ವಹಿಸಿದ್ದರು,ತರಬೇತಿದಾರರಾದ ಅಮೃತಾ ರಫುಗಾರ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.