ಭಾಲ್ಕಿ: “ವಚನ ದರ್ಶನ” ಪ್ರವಚನ

0
13

ಭಕ್ತಂಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ.

ಪ್ರಸ್ತುತ ವಚನ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿಯವರಾದ ಆಯ್ದಕ್ಕಿ ಲಕ್ಕಮ್ಮನದು. ಪತಿ ತಪ್ಪಿದಾಗ ಎಚ್ಚರಿಸುವ ಜಾಗ್ರತಿ ಮಾಡುವ ಲಕ್ಕಮ್ಮ ಶ್ರದ್ಧೆ ನಿಷ್ಠೆಯುಳ್ಳವಳು. ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತದೆ. ಅನುಭವ ಮಂಟಪ ಶರಣ-ಶರಣೆಯರಿಂದ ತುಂಬಿದೆ. ಅಲ್ಲಮಪ್ರಭುಗಳು, ಚನ್ನಬಸವಣ,್ಣ ಬಸವಣ್ಣ, ಸಿದ್ಧರಾಮ ಅಸಂಖ್ಯಾತ ಶರಣ-ಶರಣೆಯರು ತುಂಬಿದ್ದಾರೆ.

Contact Your\'s Advertisement; 9902492681

ಚರ್ಚೆ ಹಾಗೆ ಮುಂದುವರಿಯುತ್ತದೆ. ಲಕ್ಕಮ್ಮ ಎದ್ದು ಕಾಯಕ ನಿಂದಿತ್ತು ಎನ್ನಾಳ್ದನೆ ಎಂದು ಕಾಯಕಕ್ಕೆ ಕರೆದುಕೊಂಡು ಹೋಗುತ್ತಾಳೆ. ತುಂಬಿದ ಸಭೆಯಲ್ಲಿ ತನ್ನ ಗಂಡನನ್ನು ಎಬ್ಬಿಸಿ ಕಾಯಕಕ್ಕೆ ಹಚ್ಚಬೇಕಾದರೆ ಎಂಥ ನಿಷ್ಠೆ ಎಂಥ ಧೈರ್ಯ. ತಾಯಿ ಲಕ್ಕಮ್ಮ ತತ್ವನಿಷ್ಠೆ, ಕಾಯಕ ನಿಷ್ಠೆಯುಳ್ಳವಳು.

ಸತ್ಯಶುದ್ಧ ಕಾಯಕ ಮಾಡುವ ಭಕ್ತರು ಎಂದೂ ಬಡವರಲ್ಲ. ಭಕ್ತಂಗೆ ಬಡತನವುಂಟೆ? ಭಕ್ತರಿಗೆ ಬಡತನವಿರುವುದಿಲ್ಲ. ಹೃದಯ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಹೃದಯದಲ್ಲಿ ಶಿವನಿರುವುದರಿಂದ ಅವರಿಗೆ ಎಂದೂ ಬಡತನ ಬರುವುದಿಲ್ಲ. ‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತ ಶುದ್ಧದಲ್ಲಿ ಕಾಯಕ ಮಾಡುವವಂಗೆ ಬಡತನವುಂಟೆ?’ ಲಕ್ಕಮ್ಮನವರು ಪ್ರಶ್ನೆ ಮಾಡುತ್ತಾರೆ. ಭಕ್ತರು ಎಂದು ಬಡವರಲ್ಲ.

ಏಕೆಂದರೆ ಅಮರೇಶ್ವರಲಿಂಗ ಸತ್ತಂದಿಗಲ್ಲದೆ ಬಡತನವಿಲ್ಲ ಅಂದರೆ ದೇವರಿಗೆ ಸಾವು ಇಲ್ಲ. ದೇವರು ಸತ್ತರೆ ನಮಗೆ ಬಡತನ. ದೇವರು ಎಂದೂ ಸಾಯುವುದಿಲ್ಲ. ನಿತ್ಯ ಸತ್ಯವಾಗಿರುತ್ತಾರೆ. ಸತ್ ಚಿತ್ತ ಆನಂದ ನಿತ್ಯ ಪರಿಪೂರ್ಣವಾಗಿರುವ ಬಳಿಕ ನಮಗೆ ಭಯವೇಕೆ? ಭಯವಿಲ್ಲ ಬಡತನವೂ ಇಲ್ಲ. ಸಾವಿಲ್ಲದ ಕೇಡಿಲ್ಲದ ನಿತ್ಯ ಪರಿಪೂರ್ಣ ಅಮರೇಶ್ವರ ಲಿಂಗ ಇರುವತನಕ ನಾವು ಶ್ರೀಮಂತರು. ನಮ್ಮ ಜೊತೆ ಪರಶಿವನಾದ ಅಮರೇಶ್ವರಲಿಂಗವಿದ್ದ ಬಳಿಕ ಭಕ್ತರು ಬಡವರಾಗಿರುವುದಿಲ್ಲ. ತನ್ನ ಗಂಡ ಮಾರಯ್ಯನವರಿಗೆ ತಿಳಿಸುತ್ತಾಳೆ.

ಮಾರಯ್ಯನವರು ಹೇಳುತ್ತಾರೆ. ಲಕ್ಕಮ್ಮ ನೀನು ನನ್ನ ಸತಿಯಲ್ಲ ಅರಿವಿನ ಸ್ವರೂಪವಾದ ಗುರು. ನನ್ನ ಅಂತರಂಗದ ಅರಿವಿನ ಕಣ್ಣು ತೆರೆಯಿಸಿದೆ. ನಾನು ಮರೆವಿನಲ್ಲಿ ಇದ್ದೆ. ನೀನು ನನಗೆ ಅರಿವಿನ ಬೆಳಕು ನೀಡಿರುವೆ ಎಂದು ಆನಂದದಿಂದ ಹೇಳುತ್ತಾನೆ. ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ಶರಣವಾಣಿಯಂತೆ ಸತಿಪತಿ ದೇಹ ಎರಡು ಇದ್ದರೂ ಭಾವ ಉದ್ದೇಶ ಗುರಿ ಒಂದೇಯಾಗಿರಬೇಕು.

ಅಹಂ ನಾ ನಾ ನನ್ನದು ಎನ್ನುವ ಭಾವ ಇಬ್ಬರಲ್ಲಿಯೂ ಕರಗಿ ಹೋಗಿದೆ. ನಾ ಎನ್ನುವುದು ನಾಶವಾದ ಬಳಿಕ ಅಮರೇಶ್ವರ ಲಿಂಗಕ್ಕೆ ಪೂರ್ಣ ಅರ್ಪಿತರಾಗಿರುತ್ತಾರೆ. ಅಂಗ-ಲಿಂಗ ಭೇದವೇ ಇಲ್ಲ. ಅಂಗ-ಲಿಂಗ ಒಂದಾಗಿ ಲಿಂಗತನು ಲಿಂಗಮನ ಲಿಂಗಭಾವವಾದ ಬಳಿಕ ಅಮರೇಶ್ವರಲಿಂಗವೇ ತಾವಾದ ಬಳಿಕ ಬಡತನವೆಲ್ಲಿಯದು?

ಬಸವಣ್ಣನವರು ಅನುಭವ ಮಂಟಪದಲ್ಲಿ ಇಂಥ ನೂರಾರು ಶರಣೆಯರು ಆತ್ಮಜ್ಞಾನಿಗಳು ಅನುಭಾವಿಗಳನ್ನು ಒಗ್ಗೂಡಿಸಿದರು. ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ನೂರಾರು ಶರಣರು ಇರಬೇಕಾದರೆ ಬಸವಗುರುವಿನ ಕರ್ತತ್ವ ಶಕ್ತಿ ವಿಶ್ವವಿಶಾಲಹೃದಯ ನಾವು ಅರ್ಥಮಾಡಿಕೊಳ್ಳಬೇಕು. ತಮ್ಮ ಎತ್ತರಕ್ಕೆ ಎಲ್ಲರನ್ನು ಏರಿಸಿದರು. ತಾವೊಬ್ಬರೆ ವಚನ ಬರೆಯಲಿಲ್ಲ. ವಚನಕಾರರ ತಂಡವೇ ನಿರ್ಮಾಣ ಮಾಡಿದರು.

ನಾವು ಹೇಳಿದಂತೆ ನೀವೆಲ್ಲ ಕೇಳಿರಿ ಎನ್ನಲಿಲ್ಲ. ಭಕ್ತಿ ಇಲ್ಲದ ಬಡವ ನಾನಯ್ಯ ಕಕ್ಕಯ್ಯನ ಮನೆಯಲ್ಲಿ ಬೇಡಿದೆ ಚನ್ನಯ್ಯನಲ್ಲಿ ಬೇಡಿದೆ ಎನ್ನುತ್ತ ಎನಗಿಂತ ಕಿರಿಯರಿಲ್ಲ ಎಂದು ಹೇಳುತ್ತಲೆ ಎಲ್ಲರನ್ನು ತಮ್ಮ ಎತ್ತರಕ್ಕೆ ಬೆಳೆಸಿದರು. ಒಂದೇ ಕಾಲಕ್ಕೆ ಒಂದೇ ಸ್ಥಳದಲ್ಲಿ ಏಳು ನೂರಾ ಎಪ್ಪತ್ತು ಅನುಭಾವಿಗಳು (ಆತ್ಮಜ್ಞಾನಿಗಳು) ಸೇರಿದ್ದು ಇದೊಂದು ವಿಶ್ವದಾಖಲೆ.

ಗುಡಿಸಲು ಚಿಕ್ಕದ್ದು. ಮನೆಯಲ್ಲಿ ಸಂಪತ್ತಿಲ್ಲ. ಏನೂ ಇಲ್ಲ. ಹೃದಯ ಸಂಪತ್ತು ವಿಶ್ವವಿಶಾಲವಾಗಿದ್ದು. ಭಾವ ಸಂಪತ್ತೇ ನಿಜವಾದ ಸಂಪತ್ತು. ಲೌಕಿಕ ಸಂಪತ್ತು ಕರಗುತ್ತದೆ ಕಣ್ಮರೆಯಾಗುತ್ತದೆ. ಭಾವ ಸಂಪತ್ತು ಹೃದಯ ಸಂಪತ್ತು ಎಂದೂ ಕರಗುವುದಿಲ್ಲ. ನಮ್ಮ ಹೃದಯ ಸಂಪತ್ತು ಹೆಚ್ಚಿಸಿಕೊಳ್ಳೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here