ಶಹಾಬಾದ: ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಲ ಸೋಲ ಮಾಡಿ ಉತ್ತಮ ಬೆಳೆಬೆಳೆದು ಅಭಿವೃದ್ಧಿ ಹೊಂದಬೇಕೆಂಬ ನಂಬಿಕೆಯಿಂದ ಮುಂಗಾರು ಬಿತ್ತನೆ ಮಾಡಿದ್ದ. ಆದರೆ ಅತಿಯಾದ ಮಳೆಯಿಂದ ಬೆಳೆ ಹಾಳಾಗಿ ರೈತರಲ್ಲಿ ನಿರಾಶೆ ಮೂಡಿದೆ.ಬೆಳೆದಂತ ಬೆಳೆ ಕಣ್ಣಮುಂದೆ ಹಾಳಾಗಿ ಹೋಗಿದನ್ನು ನೋಡಿ ರೈತರು ಕಂಗಾಲಾಗಿದ್ದಾರೆ.
ಜೂನ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮೊದಲ ಮಳೆಯಿಂದ ಹರುಷಗೊಂಡ ರೈತರು ಹೊಲವನ್ನು ಹದ ಮಾಡಿ, ಬಿತ್ತನೆ ಮಾಡಿದ್ದರು.ಬಿತ್ತನೆ ಮಾಡಿದ ನಂತರ ಹೆಸರು ಹಾಗೂ ಉದ್ದು ಉತ್ತಮವಾಗಿ ಬೆಳೆದು ನಿಂತಿದ್ದವು. ಸುಮಾರು ಐದಾರು ದಿನಗಳ ಮಳೆ ಬಂದು ಹೊಲದಲ್ಲಿ ನೀರು ಜಾಲಾವೃತಗೊಂಡ ಕಾರಣ ಬೆಳೆ ಕೊಳೆತು ಹೋಗಿದೆ.ಅಲ್ಲದೇ ಅತಿಯಾದ ತೇವಾಂಶದಿಂದ ಬಾಡಿ ಹೋಗಿದೆ. ಇದರಿಂದ ರೈತರು ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ.
ಕೆಲವೊಂದು ಗ್ರಾಮದಲ್ಲಿ ಹೆಸರು, ಉದ್ದಿನ ಬೆಳೆ ಸಮೃದ್ಧವಾಗಿದೆ.ಆದರೆ ಹೂವು ಮತ್ತು ಕಾಯಿ ಬಾರದೇ ಕಂಗಾಲಾಗಿದ್ದಾನೆ.ಆದ್ದರಿಂದ ಸಂಪೂರ್ಣ ಹೊಲವನ್ನೇ ಹರಗಿದ್ದಾನೆ. ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಅಲ್ಲದೇ ಹೆಚ್ಚಿನ ಮಳೆಯಾಗಿದ್ದರಿಂದ ತಗ್ಗು ಪ್ರದೇಶದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿತ್ತು.
ಈ ಬಾರಿ ಜುಲೈ ತಿಂಗಳಲ್ಲಿ ಮಾತ್ರ ಮಳೆ ಬಂದಿದ್ದು, ತದನಂತರ ಮಳೆ ಬಾರದಿರುವುದರಿಂದ ಬಾಡುವ ಹಂತ ತಲುಪಿವೆ.ಆಗೋಮ್ಮೆ ಈಗೊಮ್ಮ ಎನ್ನುವಂತೆ ಐದಾರು ನಿಮಿಷ ಮಳೆ ಹನಿಗಳು ಉದುರಿ ನಿಲ್ಲುತ್ತಿವೆ. ಮೋಡ ಕಟ್ಟುತ್ತಿದೆ.ಆದರೆ ಮಳೆಬಾರದೇ ಹೋಗುತ್ತಿದೆ. ಕಣ್ಣ ಮುಂದೆಯೇ ಬೆಳೆದ ಬೆಳೆ ತೇವಾಂಶದ ಕೊರತೆಯಿಂದ ಬಾಡುವ ಹಂತಕ್ಕೆ ತಲುಪುತ್ತಿರುವುದು ಕಂದು ರೈತರು ನಿರಾಶೆಯಾಗಿದ್ದಾರೆ.
ಸಾಲ ಮಾಡಿ ಬೀಜ, ಗೊಬ್ಬರ ಖರೀದಿ ಮಾಡಿದ ರೈತ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದಾನೆ.
ಹವಾಮಾನ ಇಲಾಖೆಯ ವರದಿಯಂತೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ಆಶಾಭಾವನೆಯಿಂದ ರೈತರು ಬಿತ್ತನೆ ಮಾಡಿದ್ದರು. ಆದರೆ ಆಗೊಮ್ಮ ಈಗೊಮ್ಮೆ ಸುರಿದ ಮಳೆಯಿಂದ ಹೇಗೋ ಚತರಿಸಿಕೊಂಡಿವೆ.ಈಗ ಮಳೆಯಾದರೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ರೈತರು ಮುಂದೆ ಒಳ್ಳೆಯ ಮಳೆ ಬರುವ ಆಶಾಭಾವನೆಯಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪ್ರಾರಂಭದಲ್ಲಿಯೇ ಮುಂಗಾರು ಮಳೆ ಸುರಿದು ಒಳ್ಳೆಯ ಸಂದೇಶ ನೀಡಿದ್ದರಿಂದ ರೈತರು ಹೊಲಗಳಲ್ಲಿ ಉತ್ಸುಕತೆಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಈ ವರ್ಷ ಸರಿಯಾದ ಸಮಯಕ್ಕೆ ಮಳೆಯೂ ಇಲ್ಲದೇ ರೈತವರ್ಗದವರು ಕಷ್ಟದಲ್ಲಿದ್ದಾರೆ.
ಇಷ್ಟೆಲ್ಲಾ ಕಷ್ಟಗಳು ಪ್ರತಿವರ್ಷ ರೈತರು ಉಂಡರೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿವೆ ಎಂಬುದು ರೈತರು ಅಳಲು.ಮುಂದೆ ಒಳ್ಳೆಯ ಮಳೆ ಬರುವ ಆಶಾಭಾವನೆಯಿಂದ ಮಳೆರಾಯನ್ನನ್ನು ಎದುರು ನೋಡುತ್ತಿದ್ದಾರೆ.
ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಉದ್ದು ಹಾಗೂ ಹೆಸರು ಬೆಳೆ ಅತಿಯಾದ ತೇವಾಂಶದಿಂದ ಹಾಳಾಗಿ ಹೋಗಿತ್ತು. ಸದ್ಯ ತೊಗರಿ, ಹತ್ತಿ ಬೆಳೆಗೆ ಮಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಸದ್ಯ ಮಳೆ ಅವಶ್ಯಕತೆಯಿದೆ. ವಾರದಲ್ಲಿ ಮಳೆ ಬಾರದೇ ಹೋದರೆ ತೇವಾಂಶದ ಕೊರತೆಯಿಂದ ಬೆಳೆ ಒಣಗಿ ಹೋಗುವ ಲಕ್ಷಣಗಳಿವೆ.ಆದರೂ ಹಿಂಗಾರಿನಲ್ಲಾದರೂ ಮಳೆಯಾಗುವ ಆಶಾಭಾವನೆಯಿಂದ ರೈತರು ಮಳೆರಾಯನಿಗಾಗಿ ಕಾದು ಕುಳಿತ್ತಿದ್ದಾರೆ. – ರವಿ ನರೋಣಿ ಅಧ್ಯಕ್ಷರು, ಕೃಷಿ ಪತ್ತಿನ ಸಹಕಾರ ಸಂಘ ಮರತೂರ.
ಸತತ ಮಳೆಯಿಂದ ಮತ್ತು ಮಳೆಯಿಲ್ಲದೇ ಬೆಳೆ ಹಾಳಾಗಿ ಹೋಗುತ್ತಿರುವುದನ್ನು ಕಣ್ಣಾರೆ ಕಂಡು ರೈತರು ಮರಗುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಂದರೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಪಡೆಯಬಹುದು. ಆದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಒಳಗಾಗಿ ರೈತರು ಸಾಲ ಮಾಡಿ ಸಂಕಷ್ಟದಲ್ಲಿದಲ್ಲಿದ್ದಾರೆ.ಅವರ ನೆರವಿಗೆ ಸರ್ಕಾರ ಮುಂದೆ ಬರಬೇಕಾಗಿದೆ – ನಾಗಣ್ಣ ರಾಂಪೂರೆ ಕಾಂಗ್ರೆಸ್ ಮುಖಂಡ.