ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯ ಖಾಲಿ ಇರುವ ಕರ ವಸೂಲಿಗಾರ ಹುದ್ದೆಗೆ ಪದೋನ್ನತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಗ್ರಾಪಂ ಎದುರುಗಡೆ ಅರ್ನಿದಿಷ್ಟ ಧರಣಿ ಸತ್ಯಾಗ್ರಹ ನಡೆಸಿದರು.
ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಕರ ವಸೂಲಿಗಾರ ಹುದ್ದೆಯೂ ಸುಮಾರು ಒಂದು ವರ್ಷದಿಂದ ಖಾಲಿ ಇದೆ.ಈ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಹುದ್ದೆಯ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಹಲವಾರು ಬಾರಿ ಮನವಿ ಪತ್ರ ನೀಡಲಾದರೂ ಕ್ಯಾರೇ ಎನ್ನುತ್ತಿಲ್ಲ.ಆದ್ದರಿಂದ ಕರ ವಸೂಲಿಗಾರ ಹುದ್ದೆಗೆ ಸರ್ಕಾರದ ಮಾರ್ಗಸೂಚಿಯಂತೆ ಪಂಪ್ ಆಪರೇಟರ್ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಪೈಕಿ ಜೇಷ್ಠತೆ ಹೊಂದಿದವರನ್ನು ನೇಮಕಾತಿ ಮಾಡಿ ಆದೇಶಿಸಬೇಕು.ಇಲ್ಲದಿದ್ದರೆ ಅರ್ನಿದಿಷ್ಟ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದೆಂದು ಹೇಳಿದರು.
ತಕ್ಷಣವೇ ತೊನಸನಹಳ್ಳಿ(ಎಸ್) ಗ್ರಾಪಂ ಪಿಡಿಓ ಶ್ರವಣಕುಮಾರ ಸ್ಪಂದಿಸಿ, ಈ ಬಗ್ಗೆ ಮುಂಬರುವ ಸಾಮನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ನೇಮಕಾತಿ ಕೈಗೊಳ್ಳುವತ್ತ ಎಲ್ಲಾ ಕ್ರಮಕೈಗೊಳ್ಳುತ್ತೆವೆ ಎಂದು ಲಿಖಿತವಾಗಿ ಭರವಸೆ ನೀಡಿದ ಬಳಿಕ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಯಿತು.
ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ.ಸಿ.ಹೊನಗುಂಟಾ, ಖಜಾಂಚಿ ಚಿತ್ರಶೇಖರ ದೇವರಮನಿ, ಸೇರಿದಂತೆ ಗ್ರಾಪಂ ಸಿಬ್ಬಂದಿಗಳ ಹಾಜರಿದ್ದರು.