ಶಹಾಬಾದ: ಕಲಬುರಗಿ ಜನರು ಸೋಮಾರಿಗಳು ಎಂದು ಹೇಳುವ ಮೂಲಕ ಸಚಿವ ನಿರಾಣಿ ಕಲಬುರಗಿ ಜನರಿಗೆ ಹಾಗೂ ರೈತರಿಗೆ ಅವಮಾನ ಮಾಡಿದ್ದಾರೆ.ಕೂಡಲೇ ಕಲಬುರಗಿ ಜನರಿಗೆ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಪೀರಪಾಶಾ ಒತ್ತಾಯಿಸಿದ್ದಾರೆ.
ಕಲಬುರಗಿ ಉಸ್ತುವಾರಿ ಸಚಿವರಾಗಿ ಈ ರೀತಿಯ ಹೇಳಿಕೆ ನೀಡಿರುವುದು ಅಸಮಂಜಸವಾಗಿದೆ. ಸಚಿವರಾಗಿ ಮಾಡುವ ಕೆಲಸವನ್ನು ಬಿಟ್ಟು ಜನರ ಮೇಲೆ ಹಾಗೂ ರೈತರ ಮೇಲೆ ಗೂಬೆ ಕೂಡಿಸುವಂತ ಕೆಲಸ ಮಾಡುತ್ತಿದ್ದಾರೆ. ಶರಣರು, ಸಂತರು, ಸೂಫಿಗಳು ಬದುಕಿದ ನಾಡು ನಮ್ಮದು.ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯ ನೀಡಿದ ನಾಡಿನ ಜನರು ಸೋಮಾರಿಗಳಾ ? ಕಲಬುರಗಿ ಜನ ಸೋಮಾರಿಗಳಾದರೆ ನಮ್ಮ ಉಸ್ತುವಾರಿ ಸಚಿವರೂ ಸೋಮಾರಿಗಳಾ ಎಂಬ ಪ್ರಶ್ನೆ ಮೂಡುತ್ತದೆ. ಸಚಿವರೇ ನಿಮ್ಮ ಸರ್ಕಾರವಿದೆ.
ನೀವು ಸಚಿವರಾಗಿದ್ದೀರಿ ನೀರಾವರಿ ವ್ಯವಸ್ಥೆ ಮಾಡಿ ಕೊಡಿ, ಇಲ್ಲಿ ಬಂಗಾರವನ್ನೆ ಬೆಳೆಯುತ್ತೆವೆ. ಶಹಾಬಾದ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಸುಮಾರು ಕೋಟಿಗಟ್ಟಲೇ ಹಣ ಸುರಿದರೂ ರಸ್ತೆ ಕಳಪೆ ಮಟ್ಟದಿಂದ ಕೂಡಿದೆ. ಇನ್ನೂ ಪೂರ್ಣಗೊಂಡಿಲ್ಲ. ಸಂಪೂರ್ಣ ಹಾಳಾಗಿ ಹೋಗಿದೆ. ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದರೂ ಶಾಸಕರು ಕ್ಯಾರೆ ಎನ್ನುತ್ತಿಲ್ಲ . ಸಚಿವ ನಿರಾಣಿ ಅವರೇ ಕೇವಲ ಇಎಸ್‌ಐ ಆಸ್ಪತ್ರೆ ನವೀಕರಣ ಮಾಡಿದ್ದೆ ದೊಡ್ಡ ಸಾಧನೆಯಲ್ಲ. ಒಮ್ಮೆ ನಗರೋತ್ಥಾನದಲ್ಲಿ ಕೈಗೊಂಡ ಹದಗೆಟ್ಟ ರಸ್ತೆ ನೋಡಿ, ನಗರದ ಮಧ್ಯಭಾಗದಲ್ಲಿರುವ ಸೇತುವೆ ನೋಡಿ. ನಿಮ್ಮ ಸರ್ಕಾರವಿದೆ.
ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮೀಲಾಗಿ ಹಣ ಕೊಳ್ಳೆ ಹೊಡೆಯುತ್ತಿದ್ದರೂ ತಾವು ಏನು ಮಾಡುತ್ತಿಲ್ಲ.ಇದೇನಾ ನಿಮ್ಮ ಅಭಿವೃದ್ಧಿ. ಇಲ್ಲಿನ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ತೋರಿಸಿ, ನಂತರ ಜನರ ಬಗ್ಗೆ ಮಾತನಾಡಿ ಎಂದರು. ಅಲ್ಲದೇ ಮಂಗಳವಾರದಂದು ವಾಡಿ ಪಟ್ಟಣಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪೂರೆ ಅವರು ಶಾಸಕ ಪ್ರಿಯಾಂಕ್ ಖರ್ಗೆ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಇಲ್ಲಿನ ಜನರಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಒಮ್ಮೆ ಕ್ಷೇತ್ರದಲ್ಲಿ ಅಡ್ಡಾಡಿ ನೋಡಲೇ ಜನರೇ ಉತ್ತರ ನೀಡುತ್ತಾರೆ. ಅಭಿವೃದ್ಧಿ ಎಂದರೆ ಏನು ಎಂಬುದನ್ನು ಶಾಸಕ ಪ್ರಿಯಾಂಕ್ ಅವರು ಮಾಡಿ ತೋರಿಸಿದ್ದಾರೆ.ಅಲ್ಲದೇ ಎಲ್ಲರೂ ಚಿತ್ತಾಪೂರ ಕ್ಷೇತ್ರದ ಮಾಡಿ ಅಭಿವೃದ್ಧಿ ಕಾಮಗಾರಿಗಳು ಬೆಂಗಳುರಿನಲ್ಲಿ ಹೇಳುತ್ತಿವೆ.ತಾವು ಶಾಸಕರಾಗಿದ್ದಾಗ ಎಷ್ಟೊಂದು ಅಭಿವೃದ್ಧಿ ಮಾಡಿದ್ದೀರಿ ಎಂದು ಎಲ್ಲರಿಗೂ ಗೊತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ದಕ್ಕಿಸಿಕೊಳ್ಳಲು ವಲ್ಯಾಪೂರೆ ಹಾಗೂ ಅರವಿಂದ ಚವ್ಹಾಣ ಇಲ್ಲಸಲ್ಲದ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.
ಇಷ್ಟು ದಿವಸ ಜನರನ್ನು ಯಾಮಾರಿಸಿದ್ದು ಆಯ್ತು, ಈಗ ಜನರೇ ಸುಳ್ಳು ಹೇಳುವವರನ್ನು ಕ್ಷೇತ್ರದಿಂದ ಆಚೆ ಹಾಕುತ್ತಾರೆ ಎಂದರು.