ಕಲಬುರಗಿ: ನಕಲಿ ಹೆಸರು ಬೀಜ ಮಾರಾಟ ಮಾಡಿ ಅನ್ನದಾತರಿಗೆ ಮೋಸ ಮಾಡಿದ ಮಾರಾಟಗಾರರಿಗೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಲಬುರ್ಗಿ ಯುವ ಕಾಂಗ್ರೆಸ್ ಗ್ರಾಮೀಣ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ಅವರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಶ್ರೀನಿವಾಸ ಸರಡಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹೆಸರು ಪೈರಿನ ಜಮೀನುಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿತ್ತನೆ ಸಮಯದಲ್ಲಿ ಹೆಚ್ಚು ಇಳುವರಿ ಬರುತ್ತದೆಂದು ಸುಳ್ಳು ಹೇಳಿ ನಕಲಿ ಬೀಜ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿದ ಮಾರಾಟಗಾರರು ಎಷ್ಟೇ ಪ್ರಭಾವಿ ಆದರು ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.
ಇದೇ ರೀತಿ ಮೋಸ ಮಾಡುವ ಅನಧಿಕೃತ ಮಾರಾಟಗಾರರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು, ಅನ್ನ ನೀಡುವ ಅನ್ನದಾತರಿಗೆ ಈ ತರಹ ಮೋಸ ಮಾಡಿದರೆ ರಾಜ್ಯ ಮತ್ತು ದೇಶದ ಗತಿ ಏನು? ಸರಕಾರ ತಕ್ಷಣ ಗಮನ ಹರಿಸಬೇಕು, ಅನ್ನದಾತರು ಬೀದಿಗಿಳಿಯುವ ಮುನ್ನವೇ ಎಚ್ಚೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರ್ಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಸಹಸ್ರಾರು ಎಕರೆ ಜಮೀನುಗಳಲ್ಲಿ ಎದೆ ಮಟ್ಟದ ಹೆಸರು ಪೈರು ಬೆಳೆದು ನಿಂತಿದೆ. 60 ದಿನಗಳಾದರು ಹೂವು ಇಲ್ಲ ಕಾಯಿ ಇಲ್ಲ ಅಪಾರ ಖರ್ಚು ಮಾಡಿ ಕಂಗಾಲಾಗಿದ್ದಾರೆ.
ಮೊದಲೇ ಕರೋನಾ ಸಂಕಷ್ಟವನ್ನು ಎದುರಿಸುತ್ತಿರುವ ರೈತರಿಗೆ ಮತ್ತೊಂದು ಶಾಕ್ ನೀಡಿದಂತಾಗಿದೆ ಇದರ ಸಮಗ್ರ ತನಿಖೆ ಯಾಗಬೇಕು ತಕ್ಷಣ ನಕಲಿ ಹೆಸರು ಬಿತ್ತನೆಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.