ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿಗೆ ಮತಹಾಕಬೇಡಿ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನುಂಗಲಾರದ ತುತಾಗಿ ಪರಿಣಮಿಸಲಾರಂಭಿಸಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ಮತ ಸೆಳೆಯಲು
ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಆರೋಪ- ಪ್ರತ್ಯಾರೋಪ
ಸುರಿಮಳೆಯಾಗುತ್ತಿದೆ. ಇದರ ನಡುವೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರೇ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೆ ಕಮಲ ಪಾಳೆಯಕ್ಕೆ ತಕ್ಕಪಾಠ ಕಲಿಸುವಂತೆ ಕರೆ ನೀಡಿರುವುದು ವಿಡಿಯೋಂದು ಸಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಯುವ ಘಟಕದ ಉಪಾಧ್ಯಕ್ಷರಾದ ಡಾ. ರಾಘವೇಂದ್ರ ಎಸ್ ಚಿಂಚನಸೂರ ಸ್ವತ ತಮ್ಮ ಪಕ್ಷಕ್ಕೆ ಮತ ನೀಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿರುವ ವಿಡಿಯೋ ಈಗ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯ ಅಖಾಡದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಸತತವಾಗಿ ಕಲಬುರಗಿಗೆ ಬಿಜೆಪಿ ವರಿಷ್ಠರಿಂದ ಆಗುತ್ತಿರುವ ಅನ್ಯಾಯ ಹಾಗೂ ವರಿಷ್ಠರಲ್ಲಿ ಅಧಿಕಾರದ ಮದ ಏರಿದ ಬಗೆ ವಿವರಿಸುತ್ತಾ ಜೊತೆಗೆ ಕಲಬುರಗಿಯವರನ್ನು ಹುಚ್ಚರೆಂದು ತಿಳಿದುಕೊಂಡಿದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕದೇ ನೊಟಾ ಚಲಾಯಿಸಿ ಎಂದು ಮನವಿ ಮಾಡಿರುವುದು ಎಲ್ಲೇಡೆ ಸದ್ದು ಮಾಡುತ್ತಿದೆ.
- ಬಿಜೆಪಿಗೆ ಕೇಳಿರುವ ಪ್ರಶ್ನೆಗಳು
- ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಯಾಕೆ ನೀಡಿಲ್ಲ?
- ಶೇ.20ರ ಜನವಸತಿ ಪ್ರದೇಶಕ್ಕೆ ನೀವು ನೀಡುತ್ತಿರುವ ಅನುದಾನ ಎಷ್ಟು.?
- ಪಕ್ಷದ ಧ್ವಜ ಕಟ್ಟಲು, ಪ್ರಚಾರ ಮಾಡಲು, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ನಾವು ಬೇಕು. ಆದರೆ, ಅಧಿಕಾರದ ವಿಷಯ ಬಂದಾಗ ನಾವು ಬೇಡ.
ಏಕೆ ಈ ತಾರತಮ್ಯ.? - ಈ ಭಾಗದ ದೊಡ್ಡ ದೊಡ್ಡ ಅಭಿವೃದ್ಧಿ ಕಾರ್ಯ ಹಾಗೂ ಇತರ ಸಂಸ್ಥೆಗಳನ್ನು
ದಕ್ಷಿಣ ಕರ್ನಾಟಕಕ್ಕೆ ವರ್ಗಾಯಿಸಲಾಗುತ್ತಿದೆ.? - ಕಲಬುರಗಿ ಭಾಗದ ಕಾರ್ಯಕರ್ತರು ಬೆಂಗಳೂರಿಗೆ ಹೋದಾಗ ಕೋವಿಡ್ ನೆಪ ಹೇಳಿ ಪಕ್ಷದ ಕಚೇರಿಯಲ್ಲೂ ಒಳಗೆ ಬಿಡಲಿಲ್ಲ.?
- ಬಜೆಟ್ ಗಾತ್ರಕ್ಕೆ ಲೆಕ್ಕ ಹಾಕಿದರೆ ನಮ್ಮ ಭಾಗಕ್ಕೆ ದೊರೆಯುತ್ತಿರುವುದು ಕವಡೆ ಕಾಸಿನ ಮೊತ್ತದ ಸ್ವಲ್ಪ ಪ್ರಮಾಣ ಮಾತ್ರವೇ ಆಗಿದೆ.?
ಹೀಗಾಗಿ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿಬೇಡಿ ಎಂದು ಮನವಿ ಮಾಡಿದ್ದಾರೆ.
ಪಕ್ಷದ ಒಳಗಿದ್ದುಕೊಂಡೆ ಪಕ್ಷದ ವರ್ತನೆಗೆ ತೀರುಗೇಟು ನೀಡಿರುವ ಪಕ್ಷದ ಉಪಾಧ್ಯಕ್ಷ ಡಾ. ರಾಘವೇಂದ್ರ ಚಿಂಚನಸೂರ ಅವರ ನಡೆಗೆ ಸ್ವಪಕ್ಷ ಬಿಜೆಪಿ ಸೇರಿದಂತೆ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಭೇಷ್ ಎನ್ನುತ್ತಿದ್ದಾರೆ.
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ಎತ್ತಿರುವ ಎಲ್ಲ ಪ್ರಶ್ನೆಗಳು ಮತ್ತು ಅಂಕಿ ಸಂಖ್ಯೆಗಳು ಸಮರ್ಪಕವಾಗಿವೆ ಎಂದು ಮುಕ್ತ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ರಾಘವೇಂದ್ರ ಅವರು ನಿರಾಸೆ ಆಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.