ಶಹಾಬಾದ: ತಾಲೂಕಿನ ತರನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬,೭,೮ನೇ ತರಗತಿಗಳ ಭೌತಿ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.
ತೊನಸನಹಳ್ಳಿ(ಎಸ್) ಗ್ರಾಪಂ ಸದಸ್ಯ ಅವಿನಾಶ.ಹೆಚ್.ಕೊಂಡಯ್ಯ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸರಕಾರಿ ಶಾಲೆಗಳಿಗೆ ಹೆಚ್ಚಿನ ಮಹ್ತವ ಹಾಗೂ ದಾಖಲಾತಿ ಹೆಚ್ಚಿದೆ. ಶಿಕ್ಷಣ ವ್ಯವಸ್ಥೆಗೆ ಸರಕಾರ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದೆ.ಅಗತ್ಯ ಸೌಲಭ್ಯಗಳನ್ನು ನೀಡುತ್ತಿದೆ.ಆದ್ದರಿಂದ ಶಿಕ್ಷಕರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸರಿಯಾದ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು. ಪ್ರಾರಂಭದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ,ಶಾಲೆ ಪ್ರಾರಂಭವಾಗಿದ್ದು ಮಾತ್ರ ಪೋಷಕರಲ್ಲಿ ಸಂತೋಷ ಉಂಟು ಮಾಡಿದೆ. ಮಕ್ಕಳು ಕಡ್ಡಾಯವಾಗಿ ಸ್ಯಾನಿಟೈಜರ್ ಹಾಗೂ ಮಾಸ್ಕ್ ಧರಿಸಿಕೊಂಡು ಬರಬೇಕು. ಎಂದು ಹೇಳಿದರು.
ಮುಖ್ಯಗುರುಮಾತೆ ಸಫಿಯಾಬೇಗಂ ಮಾತನಾಡಿ, ಮಕ್ಕಳು ಶಾಲಾ ಪ್ರವೇಶಿಸಿದ ಕೂಡಲೇ ಸಾಮಾಜಿಕ ಅಂತರ ಕಾಪಾಡಲೇಬೇಕು. ನೀರಿನ ಬಾಟಲ್ ಮನೆಯಿಂದಲೇ ತರಬೇಕು. ಅದನ್ನು ಯಾರ ಜತೆಗೂ ಹಂಚಿಕೊಳ್ಳಬಾರದು. ಶಾಲೆಗೆ ಬರುವ ಮುಂಚೆ ಶಿಕ್ಷಕರು ಕೊಟ್ಟ ಪಾಲಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಕೋವಿಡ್ ನಿಯಮಾವಳಿಯನ್ನು ಮಕ್ಕಳಿಗೆ ತಿಳಿಸಿದರು.
ಇದೇ ಈ ಸಂದರ್ಭದಲ್ಲಿ ಸರ್ಕಾರದಿಂದ ಉಚಿತವಾಗಿ ನೀಡಲಾದ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷ ಜಗದೀಶ ಪಾಟೀಲ, ಶರಣು ಪೂಜಾರಿ,ಶಿಕ್ಷಕರು ಇದ್ದರು.