ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿಡಗುಂದಾ ಗ್ರಾಮದ ವಿವೇಕಾನಂದ ವಿದ್ಯ ಮಂದಿರದ ಶಾಲೆಗೆ ಡಿಜಿಟಲ್ ಬೋರ್ಡ್ ಒದಗಿಸಲಾಗಿದ್ದು, ಅದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಅರವಿಂದ ರೆಡ್ಡಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶುಕ್ರವಾರ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ ವಿವೇಕಾನಂದ ವಿದ್ಯ ಮಂದಿರದಲ್ಲಿ 74ನೇ ಕಲ್ಯಾಣ ಕರ್ನಾಟಕ ಉತ್ಸಾಹದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಕೊರೋನಾ ವೈರಸ್ ಕಾರಣದಿಂದ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನಕ್ಕೆ ಮರು ಹೋಗಬೇಕಿದೆ. ಶಿಕ್ಷಕರು ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಪಾಠ ಮಾಡುವುದರಿಂದ ಕೊರೋನಾ ವೈರಸ್ ಸಂದರ್ಭದಲ್ಲಿ ಪಾಠಗಳನ್ನು ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಂಡು ಆಲಿಸಬಹುದಾಗಿದೆ ಎಂದು ಅವರು ವಿವರಿಸಿದರು. ಈ ರೀತಿಯ ತಂತ್ರಜ್ಞಾನ ಇಂದಿನ ಸಂದರ್ಭಕ್ಕೆ ಅವಶ್ಯಕವಾಗಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ತಂತ್ರಜ್ಞಾನ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.
ವಿವೇಕಾನಂದ ವಿದ್ಯ ಮಂದಿರ ಶಾಲೆಯ ಮುಖ್ಯ ಗುರುಗಳಾದ ದಂಡಪ್ಪ ಅವರು ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ನಂತರ ಕಲ್ಯಾಣ ಕರ್ನಾಟಕ ಭಾಗ 7 ಜಿಲ್ಲೆಗಳಿಗೆ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಗುವುದರ ಮೂಲಕ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿಸಿದರು. ಭಾರತದ ಉಕ್ಕಿನ ಮನುಷ್ಯ, ಉಪಪ್ರಧಾನಿ,ಮೊದಲ ಗೃಹ ಮಂತ್ರಯಾಗಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಶ್ರಮದಿಂದ ಆಪರೇಷನ್ ಪೋಲೋ ಕಾರ್ಯಾಚರಣೆ ಮೂಲಕ ಸ್ವಾತಂತ್ರ್ಯ ಪಡೆದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಮೇಶ್ವರ ಭಾರತೀಯ ಶಿಕ್ಷಣ ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ್ ನಿಷ್ಠಿ, ಶಂಕರ ಜಡಲ್, ಗೌರಿಶಂಕರ್ ಬೇಡ್ಕಪಳ್ಳಿ,ಶ್ರೀನಿವಾಸ ಸೇರಿಗಾರ, ಶಿವಾನಂದ ಸಿಂಪಿ, ರಾಘವೇಂದ್ರ, ಶರಣಯ್ಯ ಗುತ್ತೇದಾರ, ನಾರಾಯಣ ರೆಡ್ಡಿ ನಾಮಲ್, ಕಾಂತ ತಳವಾರ, ಅಬ್ಬಾಸ್ ಅಲಿ, ಶರಣಮ್ಮ ಕುಂಬಾರ, ಅರ್ಚನಾ ನಾಮಲ್, ರಾಜಾಶ್ರೀ ಗುತ್ತೆದಾರ ಸೇರಿದಂತೆ ಇನ್ನಿತರರು ಉಪಸ್ಥಿತಿದ್ದರು. ವಿವೇಕಾನಂದ ವಿದ್ಯಮಂದಿರದ ಸಹ ಶಿಕ್ಷಕ ಶ್ರೀ ಕಾಂತ ಅವರು ನಿರೂಪಣೆ ಹಾಗೂ ಸಹ ಶಿಕ್ಷಕಿ ಅನುಸೂಯ ಅವರು ವಂದನಾರ್ಪಣೆ ಮಾಡಿದರು.
ಡಿಜಿಟಲ್ ಬೋಡ್೯ ಮೂಲಕ ಸಿಎಂ ಭಾಷಣ ವೀಕ್ಷಣೆ:- ಇದೇ ಸಂದರ್ಭದಲ್ಲಿ 74ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ ಹಾಗೂ ಪರೇಡ್ ಮೈದಾನದ ಕಾರ್ಯಕ್ರಮದ ಭಾಷಣವನ್ನು ನೇರ ಪ್ರಸಾರ ವೀಕ್ಷಣೆ ಮಾಡಲಾಯಿತು.