ಕಲಬುರಗಿ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜನರ ಬವಣೆ ಕಣ್ಣಿಗೆ ಕಾಣುತ್ತಿಲ್ಲ. ಮನ್ ಕೀ ಬಾತ್ ಆಡುವ ಪ್ರಧಾನಿ ಮೋದಿಯವರಿಗೆ, ಜನ್ ಕೀ ಬಾತ್ ಕೇಳುತ್ತಿಲ್ಲ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹೆಚ್ಚಳದ ಪರಿಣಾಮವಾಗಿ ದಿನಬಳಕೆ ವಸ್ತುಗಳ ದರ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರ ಜೀವನವೇ ದುಸ್ತರವಾಗಿದೆ.
ಇಲ್ಲಿನ ರಾಜ್ಯ ಸರ್ಕಾರವೂ ಕೇಂದ್ರದ ಜನವಿರೋಧಿ ಧೋರಣೆಗೆ ಕೈ ಜೋಡಿಸಿದ್ದು, ರಾಜ್ಯದ ಜನರ ಹಿತಕಾಯುವಲ್ಲಿ ವಿಫಲವಾಗಿದೆ. ಬದಲಾಗಿ, ಕೇಂದ್ರದೊಂದಿಗೆ ಪೈಪೋಟಿಗೆ ಬಿದ್ದಂತೆ ರಾಜ್ಯದ ಜನರಿಂದ ಬೊಮ್ಮಾಯಿಯವರ ಸರ್ಕಾರವು ವಸೂಲಿಗಿಳಿದಿದೆ. ರಾಜ್ಯದ ಜನರು ಈ ಡಬಲ್ ಇಂಜಿನ್ ಸರ್ಕಾರಗಳ ನಡುವೆ ಅಡಕತ್ತರಿಯಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಡಿನ ಆರೂವರೆ ಕೋಟಿ ಜನರ ಧ್ವನಿಯಾಗಿ, ಸತ್ತಂತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಬಡಿದೆಚ್ಚರಿಸಲು, ಕಾಂಗ್ರೆಸ್ ಪಕ್ಷದ ವತಿಯಿಂದ ಸೈಕಲ್ ಜಾಥಾ ನಡೆಸಲಾಗಿದೆ ಎಂದರು.
ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯಲ್ಲಿ ಈ ಕೂಡಲೇ ಇಂಧನದ ಮೇಲಿನ ಸೆಸ್ ಕಡಿಮೆ ಮಾಡಿ, ರಾಜ್ಯದ ಜನರಿಗೆ ತಕ್ಕಮಟ್ಟಿಗಾದರೂ ಉಸಿರಾಡಲು ಅನುವು ಮಾಡಿಕೊಡಬೇಕೆಂಬುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ. ಈ ಕುರಿತು ಇಂದಿನ ಅಧಿವೇಶನದಲ್ಲೂ ಧ್ವನಿ ಎತ್ತಲಾಗುವುದು ಎಂದು ಖರ್ಗೆ ಅವರು ಹೇಳಿದ್ದಾರೆ.