ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ ೪ ಕ್ಕೆ ಮಂಗಳವಾರ ಭಂಕೂರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪಿಡಿಓ ಬೇಟಿ ನೀಡಿ ಪರಿಶೀಲಿಸಿದಾಗ ಆಹಾರ ದಾಸ್ತಾನಿನಲ್ಲಿ ಕೊರತೆ ಕಂಡು ಬಂದಿದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಲು ಶಿಶು ಅಭಿವೃದ್ಧಿ ಅಧಿಕಾರಿ ಅವರಿಗೆ ದೂರು ನೀಡಿದರು.
ಭಂಕೂರ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ ೪ ಕ್ಕೆ ಸಬಂಧಪಟ್ಟಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಿಕಾಂತ ಕಂದಗೂಳ, ಈರಣ್ಣ ಕಾರ್ಗಿಲ್,ಶಿವಯೋಗಿ ಬಣ್ಣಾಕಾರ, ಪಿಡಿಓ ರೇವಣಸಿದ್ದಪ್ಪ ಕಲಶೆಟ್ಟಿ , ಗಂಗಾರಾಮ ರಾಠೋಡ, ಕುಮಾರ ಚವ್ಹಾಣ ಹಾಗೂ ಚಿತ್ರಶೇಖರ ದೇವರಮನಿ ಬೇಟಿ ನೀಡಿ ಪರಿಶೀಲಿಸಿದಾಗ ೧೦೦ ಕೆಜಿ ಪೌಷ್ಠಿಕ ಆಹಾರದಲ್ಲಿ ೫೦ ಕೆಜಿ, ೪೦ ಕೆಜಿ ನುಚ್ಚಿನಲ್ಲಿ ೨೬ ಕೆಜಿ, ೧ ಕೆಜಿ ಸಾಸಿವೆ ಇರಲಿಲ್ಲ.
೬ಕೆಜಿ ಕಡ್ಲಿಬೇಳೆಯಲ್ಲಿ ೪ ಕೆಜಿ, ೧೦ ಕೆಜಿ ಹೆಸರಿನಲ್ಲಿ ೪ ಕೆಜಿ, ೧೫೫ ಕೆಜಿ ಅಕ್ಕಿಯಲ್ಲಿ ೭೫ ಕೆಜಿ,೨೨ ಕೆಜಿ ಶೇಂಗಾದಲ್ಲಿ ೧೦ ಕೆಜಿ, ೯ ಕೆಜಿ ತೊಗರಿಬೇಳೆಯಲ್ಲಿ ೩ಕೆಜಿ, ೩ ಕೆಜಿ ಮಸಾಲೆ ಪುಡಿಯಲ್ಲಿ ೬೦೦ ಗ್ರಾಂ, ೩೮ ಕೆಜಿ ಬೆಲ್ಲದಲ್ಲಿ ೩೦ ಕೆಜಿ, ೨೦ ಕೆಜಿ ಹಾಲಿನ ಪುಡಿಯಲ್ಲಿ ೧೫ ಕೆಜಿ, ೯ ಕೆಜಿ ಪಾಮ ಎಣ್ಣೆಯಲ್ಲಿ ೪ ಕೆಜಿ, ೮೩೮ ತತ್ತಿಯಲ್ಲಿ ೪೭೬ ಮಾತ್ರ ಕಂಡು ಬಂದಿದೆ. ಸರ್ಕಾರದಿಂದ ಬಂದ ದಾಸ್ತಾನಿನಲ್ಲಿ ಯಾರಿಗೂ ಹಂಚದೇ ಇದ್ದರೂ ದಾಸ್ತಾನಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊರತೆ ಕಂಟುಬಂದಿದೆ. ಅಲ್ಲದೇ ಸಮಪರ್ಕವಾದ ದಾಖಲೆಗಳನ್ನು ನೀಡಲು ಒತ್ತಾಯಿಸಿದರೂ ನಿರಾಕರಿಸಿದರು.
ನಂತರ ಅಂಗನವಾಡಿ ಪಾಲಕರು ಹಾಗೂ ಗರ್ಭೀಣಿಯರು ಬಂದು ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿಲ್ಲ. ಬಾಲಸಮಿತಿ ರಚನೆಯೂ ಮಾಡಿಲ್ಲ.ಮನಸ್ಸಿಗೆ ಬಂದಂತೆ ಮಾಡುತ್ತಾರೆ ಎಂದು ದೂರಿದರು.ನಂತರ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ.