ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ ೨೬೯ನೇ ಶರಣ ಸಂಗಮ ಹಾಗೂ ವಚನ ಪರಿಮಳ ಗ್ರಂಥ ಲೋಕಾರ್ಪಣೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿರುವ ಪರಮಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಆಶೀರ್ವಚನದಲ್ಲಿ ಅನುಭಾವದ ಕುರಿತು ವಿವರವಾಗಿ ಮಾತನಾಡಿದರು.
ಶರಣರು ಅನುಭವಮಂಟಪದಲ್ಲಿ ದಿನನಿತ್ಯ ಅನುಭಾವವನ್ನು ನಡೆಸುತ್ತಿದ್ದರು. ಅನುಭಾವ ನಮಗೆ ಮಾನಸಿಕ ನೆಮ್ಮದಿ, ಸುಖ-ಶಾಂತಿ ನೀಡುತ್ತದೆ. ನಮ್ಮ ಹೊಟ್ಟೆಗೆ ಅನ್ನ ಹೇಗೆ ಮುಖ್ಯವೋ ಹಾಗೆ ತಲೆಗೆ ಅನುಭಾವ ಮುಖ್ಯವಾಗಿರುತ್ತದೆ. ನಮ್ಮ ಹೊಟ್ಟೆ ತುಂಬಬೇಕಾದರೆ ಬೇರೆ ಬೇರೆ ರೀತಿಯ ಅಡುಗೆಯನ್ನು ಮಾಡುತ್ತೇವೆ. ಆ ಅಡುಗೆಯನ್ನು ಎಲ್ಲರೂ ಕುಳಿತು ಊಟ ಮಾಡಿದಾಗ ನಮಗೆ ಸಂತೃಪ್ತಿ ಆಗುತ್ತದೆ. ಅದೇ ರೀತಿ ಶರಣರು ನಮಗೆ ಅನುಭಾವದ ಅಡುಗೆಯನ್ನು ಕಲಿಸುತ್ತಾರೆ.
ಶರಣರ ವಚನಗಳು ಅಧ್ಯಯನ ಮಾಡುತ್ತ ಹೋದಂತೆ ವಚನಗಳ ಚಿಂತನೆಯನ್ನು ಮಾಡುತ್ತ ಇದ್ದಂತೆ ನಮಗೆ ಅನುಭಾವದ ಅಡುಗೆಯನ್ನು ಮಾಡಲಿಕ್ಕೆ ಬರುತ್ತದೆ. ಅನುಭಾವದ ಅಡುಗೆಯಲ್ಲಿ ಭಕ್ತಿಯೆಂಬ ಸಾಮಗ್ರಿಯಿಂದ ಜ್ಞಾನವೆಂಬ ಪ್ರಸಾದ ತಯಾರಾಗುತ್ತದೆ. ಆ ಪ್ರಸಾದವನ್ನು ಕ್ರಿಯೆಯ ಮೂಲಕ ಸ್ವೀಕರಿಸಿದರೆ ನಮ್ಮ ಜೀವನ ಪಾವನವಾಗುತ್ತದೆ. ಅಂತಹ ಒಂದು ಅನುಭಾವದ ಅಡುಗೆಯನ್ನು ಮಾಡಲು ನಾವೆಲ್ಲರೂ ಕಲಿಯಬೇಕೆಂದು ಪೂಜ್ಯರು ನುಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬರೆದಿರುವ ವಚನ ಪರಿಮಳ ಗ್ರಂಥದ ಲೋಕಾರ್ಪಣೆಯನ್ನು ಶರಣ ಜೀವಿಗಳಾದ ಮಹೇಶ ಘಾಳೆ ಅವರಿಂದ ಮಾಡಲಾಯಿತು. ಸಮಾರಂಭದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿಗಳ ಹಿರಿಯ ಆಪ್ತ ಕಾರ್ಯದರ್ಶಿಗಳಾದ ಶ್ರೀ ನಾಗಭೂಷಣ ಹುಗ್ಗೆ ಅವರಿಗೂ ಹಾಗೂ ಅರ್ಬನ್ ಬ್ಯಾಂಕ್, ಭಾಲ್ಕಿ ಅಧ್ಯಕ್ಷರಾದ ವಿಲಾಸ ಬಕ್ಕಾ ಅವರಿಗೂ ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿರುವ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಶರಣೆ ಮಲ್ಲಮ್ಮ ಆರ್.ಪಾಟೀಲ ಅವರು ಗ್ರಂಥ ದಾಸೋಹ ಮಾಡಿದ್ದಕ್ಕಾಗಿ ಅವರಿಗೆ ಪರಮಪೂಜ್ಯರಿಂದ ಆಶೀರ್ವದಿಸಲಾಯಿತು.
ಸಮಾರಂಭದ ನಿರೂಪಣೆಯನ್ನು ಶರಣರಾದ ದೀಪಕ ಥಮಕೆ ನಡೆಸಿಕೊಟ್ಟರು. ಶರಣ ವೀರಣ್ಣ ಕುಂಬಾರ ಶರಣು ಸಮರ್ಪಣೆ ಮಾಡಿದರು. ಶರಣ ನೀಲಕಂಠಯ್ಯ ಸ್ವಾಮಿ ಅವರಿಂದ ವಚನ ಗಾಯನ ನಡೆಯಿತು. ಲಿಂಗೈಕ್ಯ ಸಂಜುಕುಮಾರ ಘೂಳೆ ಅವರ ಪ್ರಥಮ ಪುಣ್ಯ ಸ್ಮರಣೆಯ ನಿಮಿತ್ಯ ಘೂಳೆ ಪರಿವಾರದ ವತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಯಿತು.