ಆಳಂದ: ಗಡಿನಾಡಿನಲ್ಲಿರುವ ಹೋದಲೂರು ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಅಭಿವೃದ್ಧಿ ಕಾರ್ಯಕ್ಕೆ ಮುಜರಾಯಿ ಇಲಾಖೆಯಿಂದ ೧ ಕೋಟಿ ರೂಪಾಯಿ ಅನುದಾನದ ಕುರಿತು ಈ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ಅವರು ಭರವಸೆ ನೀಡಡಿದ್ದಾರೆ.
ಈ ಕುರಿತು ಶ್ರೀಮಠದ ಋಷಬೇಂದ್ರ ಮಹಾಸ್ವಾಮಿಗಳು ಹಿಂದುಳಿದ ಗಡಿ ಪ್ರದೇಶದ ಮಠಕ್ಕೆ ಅನುದಾನ ನೀಡುವ ಮೂಲಕ ಜನ ಕಲ್ಯಾಣ ಕಾರ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಮನವಿಗೆ ಸ್ಪಂದಿಸಿದ ಸಚಿವೆ ಜೊಲ್ಲೆ ಅವರು, ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ಹೋದಲೂರ ಮಠಕ್ಕೆ ೫೦ಲಕ್ಷ ರೂಪಾಯಿ ಅನುದಾನ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ, ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಅವರು ೧ ಕೋಟಿ ಹಾಗೂ ಮುಜರಾಯಿ ಇಲಾಖೆಯಿಂದ ೧ ಕೋಟಿ ಹಾಗೂ ಯಡಿಯೂರಪ್ಪನವರ ಅವಧಿಯಲ್ಲಿನ ಮಂಜೂರಾದ ೫೦ ಲಕ್ಷ ರೂಪಾಯಿಗಳಲ್ಲಿ ಪೂರ್ವ ನಿಯೋಜಿತ ಕಾಮಗಾರಿ ನಡೆದು ಗಡಿ ಭಾಗದ ಜನರಿಗೆ ಅನುಕೂಲ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಶ್ರೀಗಳು ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಅವರ ಬಳಿ ಭೇಟಿ ವೇಳೆ ಶ್ರೀಗಳೊಂದಿಗೆ ಶಾಸಕ ಸುಭಾಷ ಗುತ್ತೇದಾರ ಮತ್ತಿತರು ಉಪಸ್ಥಿತರಿದ್ದರು.