ಆಳಂದ: ಅತಿವೃಷ್ಟಿ ಅನಾವೃಷ್ಟಿಯಿಂದ ಹಾಳಾದ ಬೆಳೆಗೆ ಶೀಘ್ರವೇ ಪರಿಹಾರ ಒದಗಿಸಬೇಕು ಹಾಗೂ ಪಟ್ಟಣದ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗೆ ಒತ್ತಾಯಿಸಿ ಸಂಯುಕ್ತ ರೈತ ಹೋರಾಟ ಸಮಿತಿ ಮುಖಂಡರು ಅಧಿಕಾರಿಗಳಿಗೆ ಇಂದಿಲ್ಲಿ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಪರ ಶಿರಸ್ತೆದಾರ ರಾಕೇಶ ಶೀಲವಂತ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಬೇಡಿಕೆಯ ಕುರಿತು ಪ್ರತ್ಯೇಕ ಮನವಿ ಸಲ್ಲಿಸಿದ ಮುಖಂಡರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅತಿವೃಷ್ಟಿಯಿಂದ ಕಳೆದ ಸಾಲಿನಲ್ಲೂ ಕೆರೆ ಕಟ್ಟೆಗಳು ಒಡೆದು ಹಾನಿಗೊಳಗಾದ ರೈತರಿಗೆ ಹಾಗೂ ಬೆಳೆ ಹಾನಿ ಯಾದ ರೈತರಿಗೆ ಇನ್ನೂ ಪರಿಹಾರ ದೊರೆಯದೆ ಸಾಲಬಾಧೆಯಿಂದ ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಬೆಳೆ ಹಾನಿ ಪರಿಹಾರ ತಕ್ಷಣವೇ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದನ, ಕುರಿ ಕರುಗಳಿಗೆ ಸಹ ನೀರಿನ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿ ನಷ್ಟವಾದ ಪಶು ಪಾಲಕರಿಗೂ ಪರಿಹಾರ ಒದಗಿಸಬೇಕು. ಹೆಬಳಿ ಗ್ರಾಮ ಸಂಪರ್ಕಕ್ಕೆ ಅಡ್ಡಿಯಾದ ಅಮರ್ಜಾ ನದಿ ಪ್ರವಾಹ ಬಂದಾಗೊಮ್ಮೆ ಐದಾರು ಅಡಿ ಎತ್ತರ ನೀರು ಹರಿದು ಸಂಚಾರ ಕಡಿತಗೊಳುತ್ತಿದೆ. ಸುರಕ್ಷತೆ ಕ್ರಮವಾಗಿ ಬ್ರೀಜ್ ಕಂ- ಬ್ಯಾರೇಜ್ ನಿರ್ಮಿಸಬೇಕು ಎಂದರು.
ಆಳಂದ ಪಟ್ಟಣದಲ್ಲಿ ಶೇ ೯೦ ಪ್ರತಿಷತ ಜನರು ನಲ್ಲಿಯ ನೀರಿನ ಮೇಲೆ ಅವಲಂಭಿತರಾಗಿದ್ದು, ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ಹೋದಲ್ಲಿ ಬರುವ ಅಕ್ಟೋಬರ್ ೨ರಂದು ಗಾಂಧೀಜಿ ಅವರ ಜಯಂತಿಯಂದು ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತೆಗಾಗಿ ಹಾಗೂ ಕುಡಿಯುವ ಸ್ವಚ್ಛ ನೀರಿಗಾರಿ ಒತ್ತಾಯಿಸಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸೆ. ೨೭ರಂದು ಸಂಯುಕ್ತ ರೈತ ಹೋರಾಟ ಸಮಿತಿಯಿಂದ ದೇಶವ್ಯಾಪಿ ಹೋರಾಟಕ್ಕೆ ಬೆಂಬಲಿಸಿ ಸ್ಥಳೀಯ ಬಸ್ ನಿಲ್ದಾಣ ಎದುರುಗಡೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಪಾಂಡುರಂಗ ಮಾವೀನಕರ್, ಸುಧಾಮ ಧನ್ನಿ, ರಾಜಶೇಖರ ಭಸ್ಮೆ, ಫಕ್ರೋದ್ದೀನ್ ಗೋಳಾ, ಗುಂಡು ನಾಗಣಸೂರ, ಕಲ್ಯಾಣಿ ತುಕಾಣಿ ಸೇರಿದಂತೆ ಮತ್ತಿತರ ರೈತ ಹೋರಾಟಗಾರರು ಪಾಲ್ಗೊಂಡಿದ್ದರು.