ಆಳಂದ: ತಾಲೂಕಿಗೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ೩೮೩ ಮನೆಗಳು ಮಂಜೂರಾಗಿವೆ ಎಂದು ಶಾಸಕ ಸುಭಾಷ್ ಗುತ್ತೇದಾರ ಅವರು ತಿಳಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡ ಶಾಸಕರು, ದೇವರಾಜ ಅರಸು ವಸತಿ ಯೋಜನೆಯಡಿಯಲ್ಲಿ ೩೨ ಮನೆಗಳು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೩೫೨ ಮನೆಗಳು ಮಂಜೂರಾಗಿದ್ದು ಅದರಲ್ಲಿ ೧೦ ಮನೆಗಳು ಪೂರ್ಣಗೊಂಡಿದ್ದು, ೧೮೧ ಮನೆಗಳು ಪ್ರಗತಿಯಲ್ಲಿವೆ, ೧೯೨ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಿದೆ ಅಲ್ಲದೇ ಭೌತಿಕ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ತಾಲೂಕಿಗೆ ಹೆಚ್ಚಿನ ಮನೆಗಳನ್ನು ಮಂಜೂರಿ ಮಾಡಿಕೊಂಡು ಬರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ ೬೯೫೩ ಏಕರೆ ೧೫ ಗುಂಟೆ ಸರ್ಕಾರಿ ಜಮೀನು ಲಭ್ಯವಿದೆ ಅದರಲ್ಲಿ ಜನಗಳಿಗೆ ಅನೂಕೂಲವಾಗುವ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು ೬೯೬೩ ಏಕರೆ ೧೫ ಗುಂಟೆ ಸರ್ಕಾರಿ ಜಮೀನು ಲಭ್ಯವಿದೆ ಅಲ್ಲದೇ ಈ ಹಿಂದೆ ತಾಲೂಕಿನಲ್ಲಿ ಶಾಲಾ, ಕಾಲೇಜು, ವಸತಿ ನಿಲಯ, ಆಸ್ಪತ್ರೆ, ಇತರೆ ಇಲಾಖೆಗಳಿಗೆ, ಸಂಸ್ಥೆಗಳಿಗೆ ವಿವಿಧ ಕಾರ್ಯಗಳಿಗೆ ಜಮೀನು ಮಂಜೂರಿ ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಪ್ರತಿಕ್ರಿಯಿಸಿದ ಶಾಸಕರು ಆಳಂದ ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಯತ್ನಿಸಲಾಗುತ್ತಿದೆ ಈಗ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ವಿವಿಧ ಜನಕಲ್ಯಾಣ ಯೋಜನೆಗಳನ್ನು ಅಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಿವೇಶನ ರಹಿತರಿಗೆ ನಿವೇಶನ: ಆಳಂದ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ ಮುಂದಿನ ದಿನಗಳಲ್ಲಿ ನಿವೇಶನ ಖರೀದಿ ಕೈಗೊಂಡು ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳಲು ಸರ್ಕಾರ ತಿಳಿಸಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡ ಶಾಸಕರು, ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆಯಡಿ ಈಗಾಗಲೇ ವಿವಿಧ ಸರ್ವೇ ನಂ.ಗಳಲ್ಲಿ ೩೭.೨೭ ಏ.ಗುಂ. ಜಾಗದಲ್ಲಿ ಖಾಸಗಿ ಜಮೀನು ಖರೀದಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರದ ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಖರೀದಿ ಪ್ರಕ್ರಿಯೆ ಮುಂದುವರೆಸಲಾಗುವುದು ಎಂದು ಸರ್ಕಾರ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.