ಆಳಂದ: ಮಾಜಿ ಶಾಸಕ ಬಿ ಆರ್ ಪಾಟೀಲ ಒಬ್ಬ ರೈತ ವಿರೋಧಿಯಾಗಿದ್ದಾರೆ ತಾಲೂಕಿನಲ್ಲಿ ನಡೆಯುತ್ತಿರುವ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಗಳಲ್ಲಿ ಸುಮ್ಮನೆ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಆಳಂದ ಮಂಡಲ ಬಿಜೆಪಿ ರೈತ ಮೋರ್ಚಾ ಸುರೇಶ ನಂದೇಣಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಹೊಲಗಳಿಗೆ ರಸ್ತೆ ನಿರ್ಮಿಸಿದರೆ ತಮಗೇನು ಕಷ್ಟ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ತಾವು ಮಾಡಿರುವ ಧರಣಿ, ಪ್ರತಿಭಟನೆ ರೈತ ವಿರೋಧಿಯಾಗಿದೆ. ರೈತರ ಹೆಸರು ಹೇಳಿಕೊಂಡು, ಸಮಾಜವಾದಿ ಎಂದು ತಮ್ಮನ್ನು ಗುರುತಿಸಿಕೊಳ್ಳುವ ನೀವು ರೈತರ ಹೊಲಗಳಿಗೆ ರಸ್ತೆ ಮಾಡುವಾಗ ವಿರೋಧಿಸುವುದು ತಮಗೆ ಶೋಭೆ ತರುತ್ತದೆಯೇ ಎಂದು ಕೇಳಿದ್ದಾರೆ.
ನಿಮ್ಮ ಪ್ರತಿಭಟನೆ, ಧರಣಿಗಳು ಕೇವಲ ರಾಜಕೀಯ ಪ್ರೇರಿತವಾಗಿವೆ. ರೈತರ ಹೊಲದ ರಸ್ತೆಗಳು ಅಭಿವೃದ್ಧಿಯಾದರೇ ಎಲ್ಲಿ ನಿಮಗೆ ಚುನಾವಣಾ ವಿಷಯಗಳು ಸಿಗುವುದಿಲ್ಲವೋ ಎಂಬ ಭಯದಿಂದ ರೈತರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಆಪಾದಿಸಿದ್ದಾರೆ.
ಮಲ್ಟಿ ಅರ್ಚ ಚೆಕ್ ಡ್ಯಾಂಗಳು ಸರಕಾರದಿಂದ ನೇರವಾಗಿ ಅನುಮೋದನೆ ಪಡೆದಿರುತ್ತವೆ ಎಂಬ ವಿಷಯ ನಿಮಗೆ ತಿಳಿಯದೇ?. ರೈತರಿಗಾಗಿ ನಮ್ಮ ಹೊಲ- ನಮ್ಮ ರಸ್ತೆ, ಬದು ನಿರ್ಮಾಣ, ಕೃಷಿ ಹೊಂಡ, ಅರಣ್ಯ ಕೃಷಿ, ತೋಟಗಾರಿಕೆ ಮುಂತಾದ ಕೆಲಸಗಳನ್ನು ಉದ್ಯೋಗ ಖಾತರಿಯಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ರಸ್ತೆಗಳು ಆಗಲಿ ಎಂದು ತಾವು ಸಲಹೆ ಕೊಡಬಹುದಿತ್ತು ಅದು ಬಿಟ್ಟು ನಿಮ್ಮ ರಾಜಕೀಯ ಕಾರಣಕ್ಕಾಗಿ ರೈತರ ಹೊಲಗಳಿಗೆ ರಸ್ತೆ ಮಾಡುವುದರಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುವುದು ಒಳ್ಳೆಯದಲ್ಲ. ತಾಲೂಕಿನ ಜನತೆ ಬಿ ಆರ್ ಪಾಟೀಲ ಮಾತಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.