ಕಲಬುರಗಿ: ಕರೋನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಘೋಷಣೆ ಆದೇಶ ವಾಪಸ್ ಪಡೆದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗ್ರಾಮೀಣ ಯುವ ಕಾಂಗ್ರೆಸ್ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ಸರಡಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೋನಾದಿಂದ ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಹೊರಡಿಸಿದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್ ಆದೇಶ ಹೊರಡಿಸಿದ್ದು, ಕರೋನಾ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಿಪಿಎಲ್ ಕುಟುಂಬಗಳಿಗೆ ಆಸರೆ ನೀಡುವ ನಿಟ್ಟಿನಲ್ಲಿ ಒಂದು ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರದಿಂದ ಅರ್ಹ ಸಂತ್ರಸ್ತರ ಕುಟುಂಬದ ವಾರಸುದಾರರಿಗೆ ನೀಡಲು ರಾಜ್ಯ ಸರ್ಕಾರ ಆದೇಶಿಸಿತು, ಆದರೆ ಈಗ ದಿಢೀರನೆ ಆದೇಶ ಹಿಂಪಡೆದು ಮೃತರ ಕುಟುಂಬಕ್ಕೆ ಮೋಸವೆಸಗಿದ್ದಾರೆ.
ಒಂದೆಡೆ ಕೊರೋನಾದಿಂದ ಮೃತಪಟ್ಟವರಿಗೆ ಈಗಾಗಲೇ 1 ಲಕ್ಷ ಪರಿಹಾರ ನೀಡಲಾಗಿದೆ ಎಂದು ಹೇಳುವ ಸಚಿವರು ಮತ್ತೊಂದೆಡೆ ಪರಿಹಾರ ಇನ್ನೂ ಕೊಟ್ಟಿಲ್ಲ, ಕೊಟ್ಟೇ ತೀರುತ್ತೇವೆ ಎನ್ನುವ ಮಾಜಿ ಮುಖ್ಯಮಂತ್ರಿಗಳು. ಇದೆಲ್ಲದರ ನಡುವೆ ಪರಿಹಾರ ಘೋಷಣೆಯ ಆದೇಶವನ್ನೇ ವಾಪಸ್ ಪಡೆದ ರಾಜ್ಯ ಸರ್ಕಾರ. ಸಾವಿನಲ್ಲೂ ಸುಳ್ಳು ಹೇಳಿಕೊಂಡು ತಿರುಗುವ ಬಿಜೆಪಿಯ ನಾಯಕರುಗಳಿಗೆ ನಾಚಿಕೆಯಾಗಬೇಕೆಂದು ಕಿಡಿ ಕಾರಿದರು.