ಚದುರಿ ಹೋದ ರೈತ ಚಳವಳಿಗಳು

0
208

ಚಳವಳಿಗಳು ಎಂದೊಡನೆ ಅಂದಿನ ಗುಂಡೂರಾಯರ ಸರಕಾರದ ಎಂಬತ್ತರ ದಶಕ ಥಟ್ಟಂತ ನೆನಪಾಗುತ್ತದೆ. ಹೌದು ಅದು ಚಳವಳಿಗಳ ದಶಕ ಮಾತ್ರವಲ್ಲ, ಅದೊಂದು ಮಹಾಪರ್ವವೇ ಹೌದು. ರೈತ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿ, ಈ ತ್ರಿವಳಿ ಚಳವಳಿಗಳಲ್ಲದೇ ಈ ಬಗೆಯ ಅದೆಷ್ಟೋ ಪ್ರಗತಿಪರ ಹೋರಾಟ, ಪ್ರತಿಭಟನೆಗಳು ಉಕ್ಕಿ ಹರಿದ ಚಳವಳಿಗಳ ಕಾಲಘಟ್ಟ ಅದಾಗಿತ್ತು. ಅಂತಹ ಪ್ರಗತಿಪರ ಆಶಯಗಳ ಚಳವಳಿಯೇ ಬಂಡಾಯ ಸಾಹಿತ್ಯ ಚಳವಳಿ. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಟ್ಟಾಗಿ ಕಟ್ಟಿದ ಚಳವಳಿ ಅದು.   ಆದರೆ ಮೇಲೆ ಹೇಳಿದ ತ್ರಿವಳಿ ಚಳವಳಿಗಳು ಇಂದು ಒಡೆದು ಚುರು ಚೂರಾಗಿ ಅನೇಕ ಬಣಗಳಾಗಿ, ಬಣ್ಣಗಳಾಗಿ ರೂಪಾಂತರಗೊಂಡಿವೆ. ಆ ಎಲ್ಲ ಬಣ್ಣ ಮತ್ತು ಬಣಗಳ, ಚೂರುಗಳಿಂದಾಗಿ ಅವು ಚಳವಳಿಯ ರೂಪ ಮತ್ತು ಸ್ವರೂಪಗಳನ್ನು ಕಳಕೊಂಡಿವೆ.

Contact Your\'s Advertisement; 9902492681

ಬಂಡಾಯ ಸಾಹಿತ್ಯ ಸಂಘಟನೆಯೊಂದೇ ಅಂದಿನಿಂದ ಇಂದಿನವರೆಗೂ ತನ್ನ ರೂಪ – ಸ್ವ ಸ್ವರೂಪಗಳಲ್ಲಿ ಸ್ಪಷ್ಟತೆ, ಐಕ್ಯತೆ ಮತ್ತು ಗಟ್ಟಿತನ ಕಾಪಾಡಿಕೊಂಡು ಬಂದಿರುವ ಏಕೈಕ ಜನಪರ ಹಾಗೂ ಪ್ರಗತಿಪರ ಸಂಘಟನೆ. ಅದಕ್ಕಿರುವ ತಳಮಟ್ಟದ ಗಟ್ಟಿತನಕ್ಕೆ ಕಾರಣವೆಂದರೆ ಅದು ಬಹುತ್ವದ ಭೂಮಣ್ಣಿನಲ್ಲಿ ಹುಟ್ಟಿಕೊಂಡದ್ದು. ಗಾಂಧೀವಾದ, ಅಂಬೇಡ್ಕರವಾದ, ಸಮಾಜವಾದ, ಮಾರ್ಕ್ಸವಾದ, ಲೋಹಿಯಾ ವಾದ, ಇಂತಹ ಅನೇಕ ಜನಪರ ನೆಲೆಗಳಿಂದ ಜನ್ಮ ತಾಳಿತು. ಆಫ್ಕೋರ್ಸ್ ನಾಲ್ಕು ದಶಕಗಳ ಹಿಂದಿನಂತೆ ಬಂಡಾಯ ಸಾಹಿತ್ಯ ಚಳವಳಿ ” ಎರಡೂ ದಡ ಸೂಸಿ ಭೋರ್ಗರೆದು ಹರಿವ ಹೊಳೆಯಲ್ಲ ದಿರಬಹುದು. ಧುಮ್ಮಿಕ್ಕಿ ಹರಿವ ಜಲಪಾತದ ನೀರಲ್ಲದಿರಬಹುದು, ಆದರೆ ಬಂಡಾಯದ ಅಂತರ್ಜಲ ಬತ್ತಿಲ್ಲ. ಬಾಡಿಲ್ಲ ” ಎನ್ನುವುದಕ್ಕೆ ಕಳೆದೊಂದು ವರುಷದಿಂದ ಜರುಗುತ್ತಿರುವ ಚಿತ್ರದುರ್ಗ, ಬೆಂಗಳೂರು, ತುಮಕೂರು, ಬೆಳಗಾವಿ, ಇದೀಗ ಬಳ್ಳಾರಿ ಸಮಾವೇಶಗಳೇ ಸಾಕ್ಷಿ.

ಗುಂಡೂರಾಯರ ಕಾಂಗೈ ಸರಕಾರ ನರಗುಂದ ನವಲಗುಂದ ಸೌದತ್ತಿ, ರೈತರ ಮೇಲೆ ಗುಂಡು ಹಾರಿಸಿತು. ಆಗ ಸ್ಥಳೀಯ ರೈತ ಮುಖಂಡರು ಸೇರಿದಂತೆ ಕರ್ನಾಟಕ ಪ್ರಾಂತ ರೈತ ಸಂಘವು ಹೋರಾಟದ ಪಣ ತೊಟ್ಟಿತು. ಆಗ ಕಾಂಗ್ರೆಸ್ ವಿರೋಧಿ ರಾಜಕೀಯ ಬಣಗಳಾದ ಎರಡು ಕಮ್ಯುನಿಷ್ಟ್ ಪಕ್ಷಗಳು, ಅರಸು ಕಾಂಗ್ರೆಸ್, ಕ್ರಾಂತಿರಂಗ., ಆಳುವ ಸರಕಾರದ ವಿರುದ್ದ ಹೋರಾಟಕ್ಕೆ ಕರೆ ನೀಡಿದವು. ಸಹಸ್ರಾರು ರೈತರು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದರು. ಪರಿಣಾಮ ಆರೇಳು ಕಡೆ ಗೋಲಿಬಾರ್. ಹೀಗೆ ಕಾಂಗೈ ವಿರೋಧಿ ಶಕ್ತಿಗಳು ರೈತ ಚಳವಳಿಗೆ ಬೆನ್ನೆಲುಬಾದವು. ಹಾಗೆ ನೋಡಿದರೆ ಕಾಂಗೈ ವಿರೋಧಿ ರಾಜಕೀಯ ಶಕ್ತಿಗಳು ರೈತ ಚಳವಳಿಯ ರೂಪತಾಳಿದ್ದನ್ನು ಅಲ್ಲಗಳೆಯಲಾಗದು. ಆದರೆ ಆಲ್ ಇಂಡಿಯಾ ಕಿಸಾನ್ ಸಭಾದ ಕರ್ನಾಟಕ ಪ್ರಾಂತ ರೈತ ಸಂಘವು ಮಾತ್ರ ಐವತ್ತರ ದಶಕದಿಂದಲೇ ರೈತ ಗೇಣಿದಾರರ ಭೂ ಹೋರಾಟ ಸೇರಿದಂತೆ., ಕೃಷಿ ಮತ್ತು ಕೃಷಿ ಕಾರ್ಮಿಕರ ಹೋರಾಟವನ್ನು ಇಂದಿಗೂ ಸೈದ್ದಾಂತಿಕ ನೆಲೆಗಟ್ಚಿನ ಚಲನ ಶೀಲತೆಯನ್ನು ಉಳಿಸಿಕೊಂಡು ಬಂದುದು.

ರೈತ ಸಂಘಟನೆಗಳು ಇದುವರೆಗೂ ವರ್ಗ ಹಾಗೂ ವರ್ಣ ಸಂಘರ್ಷಗಳ ಬಗ್ಗೆ, ಮಹಿಳೆ ಮತ್ತು ದಲಿತ ಶೋಷಣೆ ಕುರಿತು ಮಾತಾಡಿಲ್ಲ. ಅಷ್ಟೇ ಯಾಕೆ ಕೃಷಿ ಕಾರ್ಮಿಕ, ಹೊಲದಲ್ಲಿ ಜೀತ ಇಲ್ಲವೇ ಕೂಲಿ ಕೃಷಿ – ಬೇಸಾಯ ಮಾಡುವ ರೈತನ ಕುರಿತು ಮಾತಾಡಿಲ್ಲ. ಭೂಮಾಲೀಕ ರೈತನ ಬಗ್ಗೆಯೇ ಅವರ ಹೋರಾಟದ ಆದ್ಯತೆ ಎನ್ನುವಂತಿದೆ. ಕಬ್ಬು ಮತ್ತು ಕಾಫಿ ಬೆಳೆಗಾರ ಸಂಘಟನೆಗಳನ್ನು ಗಮನಿಸಬಹುದು. ಹೀಗಾಗಿ ಅದು ಮೇಲ್ಮಧ್ಯಮ ವರ್ಗದ ಹಿತಾಸಕ್ತಿ ಕಾಪಾಡುವ ಚಳವಳಿ ಆದುದನ್ನು ಅಲ್ಲಗಳೆಯಲಾಗದು. ಆದರೆ ಪ್ರೊ. ನಂಜುಂಡಸ್ವಾಮಿಗೆ ಸಮಸ್ತ ರೈತಾಪಿ ಬದುಕಿನ ಜಾತ್ಯತೀತ ಕಳಕಳಿ ಇತ್ತು. ಅವರದು ಗ್ರಾಮ ಸ್ವರಾಜ್ಯದ ಯಶಸ್ವೀ ಗಾಂಧೀ ಮಾರ್ಗ.

ರೈತ ಚಳವಳಿಯ ಉಲ್ಲೇಖನೀಯ ಸಂಗತಿಯೆಂದರೆ ಕರ್ನಾಟಕ ಪ್ರಾಂತ ಸಂಘದ್ದು. ಮಾರುತಿ ತುಕಾರಾಮ ಮಾನಪಡೆ ಎಂಬ ದಲಿತನೊಬ್ಬ ಅದರ ಸಾರಥ್ಯ ವಹಿಸಿಕೊಂಡು ಅತ್ಯಂತ ವ್ಯವಸ್ಥಿತ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ ಯಾವುದೇ ಪ್ರಚಾರದ ಭಿಡೆಯಿಲ್ಲದೇ ಅದನ್ನು ಮುನ್ನಡೆಸುತ್ತಿದ್ದಾರೆ. ರೈತ ಸಂಘಟನೆಗಳು ಒಕ್ಕಲುತನದ ಪ್ರಯೋಗಶೀಲತೆ ಬಗ್ಗೆ ಮಾತಾಡುವುದಿಲ್ಲ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿ ಬಂಜೆಯಾಗಿದೆ. ಸಾವಯವ ಕೃಷಿ ಕೇವಲ ಆಕರ್ಷಕ ಪದಪುಂಜವಾಗಿದೆ. ಗ್ರಾಮ ಸ್ವರಾಜ್ಯದ ಬದುಕು ನಿರ್ವಿಣ್ಣವಾಗಿದೆ. ರೈತ ಚಳವಳಿಗಳು ಸಾಂಸ್ಕೃತಿಕ ಹಾಗೂ ಸಮತೆಯ ನೆಲೆಗಳಿಂದ ದೂರ ಸಾಗಿವೆ. ರೈತಾಪಿ ಬದುಕಿನ ಸಾಂಸ್ಕೃತಿಕ ಗ್ರಾಮ ಭಾರತದ ಜನಸಂಸ್ಕೃತಿಯ ಸಂವೇದನೆಯಾದ ಜಾನಪದ ಭಾರತವನ್ನು ರೈತ ಚಳವಳಿಗಳು ನೇಪಥ್ಯಕ್ಕೆ ತಳ್ಳಿವೆ. ಹಂತಿ ಮತ್ತು ಕಣದ ಸಂಸ್ಕೃತಿಯ ಮಹತ್ವದ ಪರಂಪರೆ ಕಣ್ಮರೆಯಾಗಿದೆ. ಡಾ. ರಾಜಕುಮಾರರ ನೆಚ್ಚಿನ ಜಾನಪದ ಗಾಯಕ ಸಗರ ಮೈಲಾರಪ್ಪನವರ ರೈತಗೀತೆಗಳು ಆಗ ಬಹುದೊಡ್ಡ ಜನಾಕರ್ಷಣೆ ಮಾತ್ರವಲ್ಲ., ಚಳವಳಿಯ ಯಶಸ್ಸಿಗೂ ಕಾರಣ ಆಗಿದ್ದವು.

ಕುವೆಂಪು ರೈತನನ್ನು ನೇಗಿಲುಯೋಗಿ ಎಂದು ಕರೆದು ರೈತನನ್ನು ” ಯೋಗಿ ” ಪದವಿಗೇರಿಸಿದರು. ಬೇಂದ್ರೆಯವರು ಯುದ್ದದೇವನು ಬಂದ, ಬುದ್ದದೇವನು ಬಂದ, ಅನ್ನದೇವ ಇನ್ನೂ ಬರಲಿಲ್ಲೋ ಎಂದು ರೈತನನ್ನು ಅನ್ನದೇವನೆಂದು ಕರೆದರು. ದೇಶದ ಯಾವುದೇ ರಾಜ್ಯದಲ್ಲೂ ಕರ್ನಾಟಕ ಮಾದರಿಯ ರೈತಗೀತೆ ಇರಲಾರದು. ನಿರಂಜನರು ರೈತ ವಿಮೋಚನೆಯ ಚಿರಸ್ಮರಣೆ ಕಾದಂಬರಿ ರಚಿಸಿದರು. ಮಿರ್ಜಿ ಅಣ್ಣಾರಾಯರ ನಿಸರ್ಗ ಕಾದಂಬರಿ, ರಾವ ಬಹದ್ದೂರರ ಗ್ರಾಮಾಯಣ ಕಾದಂಬರಿಗಳು ರೈತ ಬದುಕಿನ ಗ್ರಾಮಭಾರತವನ್ನೇ ಅನಾವರಣಗೊಳಿಸುತ್ತವೆ. ಹೀಗೆ ಸಾಹಿತ್ಯಿಕ ನೆಲೆಗಳಲ್ಲಿ ರೈತ ಮತ್ತು ರೈತ ಹೋರಾಟಗಳ ಅಸ್ಮಿತೆ ಅಗಾಧವೇ ಆಗಿದೆ. ನಂಜುಂಡಸ್ವಾಮಿಯವರೇ ಆಗ ಆರಂಭಿಸಿದ “ನಮ್ಮನಾಡು” ಎಂಬ ಪತ್ರಿಕೆಯನ್ನು ಚಳವಳಿಯ ಮುಖವಾಣಿಯಂತೆ ಬಳಸಿಕೊಂಡರು. ಜಾಣಗೆರೆ ವೆಂಕಟರಾಮಯ್ಯ ಅಂಥವರು ಪತ್ರಿಕೆಗೆ ಕೆಲಸ ಮಾಡಿದರು. ಪ್ರೊ. ಹಿ.ಶಿ. ರಾಮಚಂದ್ರೇಗೌಡರು ” ಹೊಂಬಾಳೆ ” ಎಂಬ ಕ್ಯಾಸೆಟ್ ಹೊರತಂದು ಚಳವಳಿಗೆ ಸಾಂಸ್ಕೃತಿಕ ವ್ಯಕ್ತಿತ್ವ ದಕ್ಕಿಸಿಕೊಟ್ಟರು. ಹಂಪಿ.ವಿ.ವಿ.ಯು ರೈತ ಚಳವಳಿ ಕುರಿತು ಸಂಶೋಧನಾ ಪ್ರಬಂಧಗಳಿಗೆ ಅವಕಾಶ ಮಾಡಿಕೊಟ್ಟಿತು. ಹೀಗೆ ಚಳವಳಿ ಆಗ ವಿ.ವಿ. ವಿದ್ವತ್ ವಲಯಗಳ ಗಮನ ಸೆಳೆಯಿತು. ಹೀಗಾಗಿ ರೈತನ ಘನತೆಯ, ಗೌರವದ ಬದುಕಿಗೆ ಮಹತ್ವ ಬಂದಿತ್ತು. ಈಗ ಹಾಗಿಲ್ಲ.

ದೇಸಿ ಚಳವಳಿ ಹೆಸರಲ್ಲಿ ಬಾಬಾ ರಾಮದೇವ ಅಂಥವರು ಮಾರುಕಟ್ಟೆಗಳ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸರಕಾರದ ಕಲ್ಪನೆಯ ಎ.ಪಿ.ಎಂ.ಸಿ.ಯ ಇ – ಮಾರುಕಟ್ಟೆಗಳು ಹೊಸ ಮೋಸಗಳಿಗೆ ಗಾಳ ತೋಡುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕೃಷಿಯ ಬಿಕ್ಕಟ್ಟುಗಳಿಗೆ ಮೊದಲು ಪರಿಹಾರ ಕಂಡುಕೊಳ್ಳುವಲ್ಲಿ ರಾಷ್ಟ್ರಮಟ್ಟದಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ. ಕಳೆದ ವರ್ಷದ ಕಡೆಯಲ್ಲಿ ನೂರಾರು ರೈತ ಸಂಘಟನೆಗಳು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿತು. ಚುನಾವಣಾ ರಾಜಕಾರಣದ ಅವರ ಎಲ್ಲ ಗೆಲುವುಗಳಿಗೆ ದಿಲ್ಲಿಯ ಓರ್ವ ವ್ಯಕ್ತಿಯತ್ತ ಅವರು ಬೆರಳು ತೋರಿಸಿದಂತೆ., ಎಲ್ಲ ಸೋಲುಗಳಿಗೆ ನಾವು ವಿಚಾರವಾದಿಗಳೆಂದು ಭಾವಿಸಿಕೊಂಡವರು ಅದೇ ವ್ಯಕ್ತಿಯತ್ತ ಬೆರಳು ತೋರಿಸುವವರಾಗಿದ್ದೇವೆ. ಇಬ್ಬರ ಗುರಿ ಅವನೊಬ್ಬನೇ ಆಗಿರುವುದು ಪ್ರಜಾಪ್ರಭುತ್ವದ ಸೋಲು. ಹೀಗೆ ಪ್ರತಿಕ್ರಿಯೆಗಳಿಗೆ, ಪ್ರತಿಕ್ರಿಯೆ ನೀಡುವ ರೋಗವು ಸಾಂಕ್ರಾಮಿಕ ವಾಗುತ್ತಿದೆ.. ಆದರೆ ಅವರು ಮಾತ್ರ ತಮ್ಮ ಕ್ರಿಯೆಯಿಂದ ಸವಾರಿ ಮಾಡುತ್ತಲೇ ನಡೆದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಎಂಬತ್ತರ ದಶಕ ಪೂರ್ವದ ” ಮಲಪ್ರಭ ರೈತ ಸಮನ್ವಯ ಸಮಿತಿ ” ಮೊದಲ ಬಾರಿಗೆ ಪ್ರಭುತ್ವದ ವಿರುದ್ದ ಹೋರಾಟ ರೂಪಿಸುತ್ತದೆ. ವಿ.ಎನ್.ಹಳಕಟ್ಟಿ, ಬಸವಂತಪ್ಪ ಸೊಪ್ಪಿನ, ಶಂಕರಪ್ಪ ಸೌದತ್ತಿ, ಚಂದ್ರಶೇಖರ ಬಾಳಿ, ಭೀಮಶಿ ಕಲಾದಗಿ, ಬಿ. ಆರ್. ಯಾವಗಲ್…. ಮುಂತಾದವರು ಉತ್ತರ ಕರ್ನಾಟಕದಲ್ಲಿ ರೈತ ಚಳವಳಿ ಗಟ್ಟಿಗೊಳ್ಳಲು ಮುಂಚೂಣಿ ನಾಯಕತ್ವ ವಹಿಸಿಕೊಂಡು ಸರಕಾರದ ವಿರುದ್ದ ಮೊದಲ ಬಾರಿಗೆ ಸಮರ ಸಾರುತ್ತಾರೆ. ಈ ಹೋರಾಟದ ನಿರಂತರತೆಗೆ ಕರ್ನಾಟಕ ರಾಜ್ಯ ರೈತ ಸಂಘದ ಉದಯದೊಂದಿಗೆ ಸತ್ಯಾಗ್ರಹದ ಬಹುದೊಡ್ಡ ಹೊಸ ಆಯಾಮ ದೊರಕಿತು. ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ, ಕಡಿದಾಳು ಶಾಮಣ್ಣ, ಎನ್.ಡಿ. ಸುಂದರೇಶ್, ಭೂ ಮಾಲೀಕ ಬಾಬಾಗೌಡ ಪಾಟೀಲ ಅಂಥವರ ಪ್ರವೇಶ ರಾಜ್ಯಾದ್ಯಂತ ರೈತ ಚಳವಳಿಗೆ ಸಾಮೂಹಿಕವಾದ ಹುರುಪು ತರುತ್ತದೆ.

ಅಷ್ಟೊತ್ತಿಗಾಗಲೇ ಗುಂಡೂರಾಯರ ಕಾಂಗೈ ಸರಕಾರ ನೆಲಕಚ್ಚಿ ಹೋಗಿತ್ತು. ಹೆಗಡೆಯ ಹೊಸ ಸರಕಾರ ಬಂದರೂ ರೈತ ಚಳವಳಿ ಸ್ವಾತಂತ್ರ್ಯ ಹೋರಾಟದ ಹೊಳಪು ಹೊಂದಿತ್ತು. ಕುತಂತ್ರಿ ಹೆಗಡೆಯ ರೈತ ವಿರೋಧಿ ನೀತಿ ವಿರೋಧಿಸಿ ಜರುಗಿದ ಜೈಲು ಭರೋ ರೈತ ಚಳವಳಿ ರಾಷ್ಟ್ರ ಮಟ್ಟದಲ್ಲಿ ಮಹತ್ವ ಪಡೆಯಿತು. ರಾಷ್ಟ್ರಮಟ್ಟದ ರೈತನಾಯಕ ಮಹೇಂದ್ರಸಿಂಗ್ ಟಿಕಾಯತ್ ಅಂಥವರ ಪ್ರೀತಿಗೆ ಪಾತ್ರವಾದ ನಂಜುಂಡಸ್ವಾಮಿ ನೇತೃತ್ವದ ರೈತ ಚಳವಳಿ ರಾಷ್ಟ್ರಮಟ್ಟದಲ್ಲೂ ದೊಡ್ಡ ಹೆಸರು ಮಾಡಿತು. ಸಮಾಜವಾದದ ದಟ್ಟ ಹಿನ್ನೆಲೆಯುಳ್ಳ ನಂಜುಂಡಸ್ವಾಮಿಯವರಿಗೆ ಕರ್ನಾಟಕ ತುಂಬೆಲ್ಲಾ ಗೆಳೆಯರ ದಂಡು. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮದಾಸ್, ಲಿಂಗಣ್ಣ ಸತ್ಯಂಪೇಟೆ, ಅನಂತಮೂರ್ತಿಯಂತಹ ಅನೇಕ ಮಂದಿ ಪ್ರಗತಿಪರ ಸಾಹಿತಿ ಮಿತ್ರರ ಬಳಗವೇ ಇತ್ತು. ಸಹಜವಾಗಿ ಆ ಎಲ್ಲ ಗೆಳೆಯರ ಸಹಾಯ, ಸಹಕಾರ, ಸಲಹೆಗಳು ರೈತ ಚಳವಳಿಗೆ ಪೂರಕಗೊಂಡವು. ಲಂಕೇಶ ಪತ್ರಿಕೆ, ಆ ಕಾಲದ ಜನಪರ ಚಳವಳಿಗಳಿಗೆ ದೊಡ್ಡ ಕ್ಯಾನವಾಸ್ ಆಯಿತು. ಹಾಗೆಂದು ಲಂಕೇಶ್ ಅವರು ಪ್ರಗತಿಪರರ ಕಾಲೆಳೆಯುತ್ತಿದುದನ್ನು ಕೂಡಾ ಅಲ್ಲಗಳೆಯಲಾಗದು.

ಪ್ರಸ್ತುತ ನನಗೊಂದು ಅಸ್ಪಷ್ಟ ಅನುಮಾನವಿದೆ. ಅದೇನೆಂದರೆ ನಾನು ಉಲ್ಲೇಖಿಸಿದ ಆ ತ್ರಿವಳಿ ಚಳವಳಿಗಳ ವರ್ತಮಾನದ ಬದಲಾವಣೆಗಳನ್ನು ಗಂಭೀರವಾಗಿ ಗಮನಿಸಿದರೇ ಪ್ರಸ್ತುತ ಅವುಗಳ ಕಾರ್ಯವೈಖರಿಗೆ ಚಳವಳಿಗಳೆಂದು ಕರೆಯಬೇಕೋ, ಪ್ರತಿಭಟನಾ ತಂಡಗಳೆಂದು ಕರೆಯಬೇಕೋ.? ಅವುಗಳಲ್ಲಿ ಈಗ ಉಳಿದಿರುವ ಚಳವಳಿಯ ಸ್ವರೂಪ ಹುಡುಕಲು ಹೋದರೆ ನಮಗೆ ಸಿಗುವುದು ಘೋರ ನಿರಾಸೆ. ಹತ್ತಾರು ಬಣಗಳಲ್ಲಿ ಹರಿದು ಹಂಚಿ ಹೋಗಿರುವ ರೈತ ಸಂಘಟನೆಗಳ ಹಿಂದೆ ಜಾತಿಯ ಅಘೋಷಿತ ಹುನ್ನಾರಗಳಿವೆ. ವಯಕ್ತಿಕ ಹಿತಾಸಕ್ತಿಗಳಿವೆ. ಅವು ಸರಳತೆಯಿಂದ ದೂರ ಸರಿದಿವೆ. ಚಳವಳಿಗಳು ಸತ್ಯಾಗ್ರಹ ಸ್ವರೂಪವನ್ನು ಕಳಕೊಂಡಿವೆ. ರೈತ ಸಂಘಟನೆಯ ಕೆಲವು ನಾಯಕರು ಮುವತ್ತು ನಲವತ್ತು ಲಕ್ಷ ರುಪಾಯಿ ಫಾರ್ಚುನರ್ ಕಾರುಗಳಲ್ಲಿ ಓಡಾಡುವಂತಾಗಿರುವುದು ಅವರು ಪ್ರತಿನಿಧಿಸುವ ಸಂಘಟನೆಗಳ ಮೇಲೂ ಪರಿಣಾಮ ಬೀರಿ ಅನುಮಾನಕ್ಕೆಡೆ ಮಾಡಿದೆ .

ಟಿ.ವಿ.ಗಳ ಮುಂದೆ ಕುಂತು ಹಸಿರು ಶಾಲು ಬೀಸಿ ಮಾತಾಡುವವರೇ ಮಹಾನ್ ರೈತ ಚಳವಳಿ ಸೇನಾನಿ ಎಂಬ ಭ್ರಮೆಗಳನ್ನು ಬಿತ್ತುವಲ್ಲಿ ರೈತ ನಾಯಕರು ಯಶಸು ಕಂಡಿದ್ದಾರೆ. ರೈತ ನಾಯಕರು ಬೆಳೆದಿದ್ದಾರೆ. ಆದರೆ ರೈತ ಸಂಘಟನೆಗಳು ಬೆಳೆಯಲಿಲ್ಲ. ಈಗಲೂ ನಂಜುಂಡಸ್ವಾಮಿ ಕಾಲದ ಎಲ್ಲ ಸಮಸ್ಯಗಳು ಬಿಕ್ಕಟ್ಟುಗಳಿವೆ. ಆದರೆ ನಂಜುಂಡಸ್ವಾಮಿಗಳಿಲ್ಲ. ಮಲ್ಟೀ ನ್ಯಾಷನಲ್ ಕಂಪನಿಯ ಅಪರವತಾರದಂತಿರುವ ಅಶೋಕ ಖೇಣಿಯನ್ನು ರೈತನೆಂದು, ರೈತ ನಾಯಕನೆಂದು ಖೇಣಿಗೆ ಹಸಿರು ಶಾಲು ಹೊದಿಸಿ, ಹೊಗಳಿದ ರೈತ ನಾಯಕರಿದ್ದಾರೆ..

ಡಾ.ರಂಗರಾಜನ್ ಆಯೋಗದ ವರದಿ ಬಗ್ಗೆ ರೈತ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯಗಳಿವೆ. ಆದರೆ ಎಂ.ಎಸ್. ಸ್ವಾಮಿನಾಥನ್ ವರದಿ ಬಂದು ದಶಕವೇ ಕಳೆದರೂ ಜಾರಿಯಾಗದಿರುವುದಕ್ಕೆ ಹೋರಾಟಗಳ ತೀವ್ರತೆಯೂ ಕಾರಣವಾಗಿದೆ. ಈ ವರದಿ ಜಾರಿಯಾದಲ್ಲಿ ರೈತನ ಕೃಷಿ ಉತ್ಪನ್ನಗಳಿಗೆ ಮಹತ್ವದ ಬೆಲೆಗಳ ಪ್ರಾಪ್ತಿಯಾಗುತ್ತದೆ. ಒಂದೆರಡು ಜಿಲ್ಲೆಯಲ್ಲಿ ಹರಿದಾಡುವ ಕಾವೇರಿ ಸಮಸ್ತ ಕನ್ನಡ ನಾಡಿನ ಜೀವನದಿಯಾಗಿ ಬಣ್ಣಿತವಾಗಿ ರೈತ ಚಳವಳಿಯ ಪ್ರಮುಖ ಶಕ್ತಿ ಕೇಂದ್ರದಂತೆ ಪ್ರಭಾವಿಸುತ್ತದೆ. ಆರೇಳು ಜಿಲ್ಲೆಗಳಲ್ಲಿ ಹರಿದಾಡುವ ಕೃಷ್ಣೆ, ತುಂಗಭದ್ರೆಗಳನ್ನು ಜೀವನದಿಗಳೆಂದು ಸಾಹಿತಿಗಳು ಕರೆಯುತ್ತಿಲ್ಲ. ಇನ್ನು ಕೃಷ್ಣ ಕೊಳ್ಳದ ರೈತ ಚಳವಳಿ ಕೂಡಾ ಮಂಡ್ಯ – ಮೈಸೂರು ಭಾಗದ ರೈತ ಚಳವಳಿಗೆ ಹೋಲಿಸಲಾಗದು. ಚಳವಳಿಗಳು ಸಂವೇದನೆಗಳನ್ನು ಕಳಕೊಂಡಿವೆ.

ಮೊನ್ನೆಯಷ್ಟೇ ಜಿಂದಾಲ್ ಕಂಪನಿಗೆ ೩೬೬೩ ಎಕರೆ ಜಮೀನು ನೀಡಲು ಸರಕಾರ ಕ್ಯಾಬಿನೆಟ್ ನಿರ್ಧಾರ ಮಾಡಿತು. ಜಮೀನು ಇರುವ ಗ್ರಾಮ ಸ್ವರಾಜ್ಯದಂತಹ ಗ್ರಾಮ ಸಭೆ , ಗ್ರಾಮ ಪಂಚಾಯಿತಿ ನಿರ್ಣಯಗಳನ್ನೆಲ್ಲ ತಿರುಚುವಲ್ಲಿ ಸರಕಾರ ವ್ಯವಸ್ಥಿತ ಹುನ್ನಾರಗಳನ್ನು ಮೆರೆಯಿತು. ಕೃಷ್ಣೆಯಿಂದ ಮೂರು ಟಿ.ಎಂ.ಸಿ. ನೀರು ೧೮೪ ಕಿ.ಮೀ. ದೂರದಿಂದ ಜಿಂದಾಲ್ ಕಂಪನಿಯ ಸ್ಟೋರೇಜ್ ಟ್ಯಾಂಕ್ ತುಂಬಿಸುತ್ತದೆ. ಆದರೆ, ಕೃಷ್ಣಾ ಕಣಿವೆ ಭಾಗದ ಜನರಿಗೆ ಕುಡಿಯಲಿಕ್ಕೆ ನೀರು ಇರುವುದಿಲ್ಲ. ಇದೆಲ್ಲ ಈ ನಾಡಿನ ಬುದ್ದಿಜೀವಿಗಳು, ಸಾಹಿತಿ, ಸಂಶೋಧಕರು ನೆಲೆಸಿರುವ ಕನ್ನಡ ವಿ.ವಿ. ಅಕ್ಕ ಪಕ್ಕದಲ್ಲೇ ನಡೆಯುತ್ತಿರುವುದು.  ರೈತರ ಆತ್ಮಹತ್ಯೆಯ ಸಂದರ್ಭಗಳಲ್ಲಿ ರೈತ ಸಂಘಟನೆಯ ಪಾತ್ರ ಪ್ರಮುಖವಾದುದು. ರೈತನನ್ನು ಬದುಕಿಸಿಕೊಳ್ಳುವ ಆಪ್ತ ಸಮಾಲೋಚನೆಯ ಕಾರ್ಯಕ್ರಮಗಳು ರೈತ ಚಳವಳಿಗಿಲ್ಲವಾಗಿದೆ. ರೈತನ ಹೆಣವಿಟ್ಟುಕೊಂಡು ಟಿ.ವಿ. ಕ್ಯಾಮೆರಾಗಳೆದುರಿನ ಆಕ್ರೋಶಗಳಿಗಿಂತ ಮುಂಜಾಗ್ರತೆಯ ಕೌನ್ಸೆಲಿಂಗ್ ಗೆ ಅವಕಾಶವೇ ಇಲ್ಲದಂತಾಗಿದೆ.

ಬೆಳೆಗಳಿಗೆ ಮಾಡಿಸುತ್ತಿರುವ ರೈತವಿಮೆಗಳದ್ದೇ ಕರ್ಮಕಾಂಡ. ಇದರಿಂದ ಖಾಸಗಿ ವಿಮಾ ಕಂಪನಿಗಳು ಮಧ್ಯವರ್ತಿ ಏಜೆಂಟರುಗಳು ಉದ್ದಾರವಾಗಿದ್ದಾರೆ. ಎಲ್.ಐ.ಸಿ. ಮಾದರಿಯಲ್ಲಿ ಸರ್ಕಾರವೇ ವಯಕ್ತಿಕವಾಗಿ ವಿಮಾ ಪಾಲಸಿಗಳನ್ನು ಜಾರಿಗೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಎಂಬತ್ತರ ದಶಕದ ಚಳವಳಿಗಳು ಕೆಲ ಕಾಲ ರಾಜಕಿಯೇತರವಾಗಿ ಬೆಳೆಯುತ್ತಿದ್ದಂತೆ ಚಳವಳಿ ನಾಯಕರಿಗೆ ವಿಧಾನಸೌಧದ ಮೂರನೇ ಮಹಡಿಯ ಕನಸುಗಳು ಬೀಳ ತೊಡಗಿದವು. ಆಳುವ ಸರಕಾರಗಳನ್ನು ಚಳವಳಿಗಳ ಮೂಲಕ ಹದ್ದುಬಸ್ತಿನಲ್ಲಿಡಬೇಕು. ಆದರೆ ರೈತರ ಕೈಗೆ ಪೂರ್ಣ ಪ್ರಭುತ್ವ ದೊರಕುವಷ್ಟು ಚಳವಳಿಗಳು ಬೆಳೆಯದಿರುವಾಗಲೇ ನಾಯಕರು ಅವಸರವಸರವಾಗಿ ಕನಸುಗಳ ಬೆನ್ನು ಬೀಳುವುದು ಕೂಡಾ ಚಳವಳಿಯ ಹಿನ್ನಡೆಗೆ ಕಾರಣವಾಗಿರಬಹುದು. ನಂಜುಂಡಸ್ವಾಮಿ, ಬಾಬಾಗೌಡರ ಸಂದರ್ಭಗಳೇ ನಿದರ್ಶನಗಳಾಗಬಲ್ಲವು.

ಸಮಸ್ತ ರೈತರ ವಿಮೋಚನೆಗಾಗಿ ಎಲ್ಲ ರೈತ ಸಂಘಟನೆಯ ಬಣಗಳು ಒಗ್ಗಟ್ಟಾಗಿ ಐಕ್ಯತೆಯ ಚಳವಳಿ ರೂಪಿಸಬೇಕಿದೆ. ಹಸಿರು ಹಾಗೂ ಕೆಂಪು ಶಾಲುಗಳು ಸೇರಿ ಒಂದೇ ಬಾವುಟವಾಗಬೇಕಿದೆ. ಆ ಮೂಲಕ ವರ್ತಮಾನದ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಎಂಬತ್ತರ ದಶಕದ ದಿನಗಳನ್ನು ಎದುರು ನೋಡೋಣ.ನೆಲಧರ್ಮದ ಆಪ್ತ ಸಂಬಂಧಗಳ ರೈತ ನೆಲೆಯ ಅಸ್ಮಿತೆಯನ್ನು ಮತ್ತೆ ಬೆಸೆಯೋಣ ಬನ್ನಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here