ಬಸವಣ್ಣನಿಂದ ಬದುಕಿತೀ ಲೋಕವೆಂದ ಬಹುರೂಪಿ ಚೌಡಯ್ಯ

0
167

ನಾಗಲೋಕ, ದೇವಲೋಕ ಅಷ್ಟೇ ಏಕೆ ಬಸವಣ್ಣನಿಂದಲೇ ಬದುಕಿತ್ತು ಈ ಲೋಕ ಎಂದು ವಿಶ್ವಗುರು ಬಸವಣ್ಣನವರನ್ನು ಶರಣರು ಹಾಡಿ ಹೊಗಳಿದ್ದಾರೆ. ಚೈತನ್ಯಶೀಲ, ಚಲನಶೀಲ ಸಮಾಜ ನಿರ್ಮಿಸುವ ಮೂಲಕ ಸರ್ವ ಜನಾಂಗದ ಶಾಂತಿಯ ಹೂದೋಟ ನಿರ್ಮಿಸಿದ ಅವರು, ಸರ್ವರಿಗೂ ಪ್ರಾಥಸ್ಮರಣೀಯರು.

Contact Your\'s Advertisement; 9902492681

೧೨ನೇ ಶತಮಾನದ ಶರಣರು ಕಟ್ಟಿದ ಅನುಭವ ಮಂಟಪದಲ್ಲಿ ವಿವಿಧ ಕಾಯಕ ಮಾಡುವ ಶರಣರು ಇದ್ದರು. ಉಗ್ಘಡಿಸುವ ಮೀರಾದೇವಿ, ಎಚ್ಚರಿಕೆಯ ನೇಮಿನಾಥ, ದೂಪದ ಗೊಗ್ಗವ್ವೆ ಮತ್ತಿತರರಿದ್ದರು. ಅವರಲ್ಲಿ ಬಹುರೂಪಿ ಚೌಡಯ್ಯ ಎಂಬ ನಟ, ನಗೆಗಾರ, ಜನಪದ ಕಲಾವಿದ ಕೂಡ ಒಬ್ಬರು. ಶರಣರು ದೇಶಿಕಲೆಗಳಿಗೆ ಪುನರುಜ್ಜೀವನ ಕೊಟ್ಟವರು. ನಾಡಿನ ಜನಪದ ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ ಸಂವರ್ಧನೆ ಮಾಡುವ ಕೆಲಸ ಕೂಡ ಮಾಡಿದರು. ಕಲೆ, ಸಾಹಿತ್ಯ, ಸಂಗೀತ ಕೇವಲ ಉಪಜೀವನಕ್ಕೆ ಅಲ್ಲ. ಅವುಗಳು ಉಪಯೋಗಕ್ಕೆ ಕೂಡ ಇವೆ ಎಂಬುದನ್ನು ತೋರಿಸಿಕೊಟ್ಟರು. ಅಂತೆಯೇ ಡೊಂಬರು, ಮುಖವಾಡದ ಅಯ್ಯಗಳು, ಗರ್ದಿಗಮ್ಮತ್ತು ಮುಂತಾದ ದೇಶಿಕಲೆಗಳು ಮತ್ತೆ ತಲೆ ಎತ್ತುವಂತಾದವು. ಹೀಗೆ ಬಸವಣ್ಣನವರ ಕರುಣೆಯಿಂದ ಎಲ್ಲ ಸಣ್ಣ ವಿಧದ ಕಲೆಗಳು ಸಹ ಕಣ್ತೆರೆದವು.

ಬಹುರೂಪಿ ಚೌಡಯ್ಯನವರು ಬೀದರ್ ಜಿಲ್ಲೆಯ ರೇಕಳಕಿ ಗ್ರಾಮದವರು. ಪೌರಾಣಿಕ ಕಥೆಗಳಲ್ಲಿ ಬರುವ ವಿವಿಧ ವೇಷ ಹಾಕಿ ಊರೂರು ಸುತ್ತುವ ಕಾಯಕ ಮಾಡುತ್ತಿದ್ದರು. ಇವರ ಕಾಯಕವೂ ಜನೋಪಯೋಗಿ ಅನಿಸಬೇಕು ಎಂಬುದನ್ನು ಅರಿತದ್ದ ಬಸವಣ್ಣನವರು, ಬಹುರೂಪಿ ಚೌಡಯ್ಯನವರಿಗೆ ಶರಣರ ವೇಷ ಹಾಕಲು ತಿಳಿಸುತ್ತಾರೆ. ಹೀಗಾಗಿ ಬಹುರೂಪಿ ಚೌಡಯ್ಯನವರು ಅಲ್ಲಮ, ಅಜಗಣ್ಣ ಸೇರಿದಂತೆ ೨೫ ಶರಣರ ವೇಷ ಹಾಕಿ ಹಳ್ಳಿ ಹಳ್ಳಿಗೆ ತೆರಳಿ ಶಿವನ ಲೀಲಾ ವಿಲಾಸ, ವಿರಾಟ್ ಸ್ವರೂಪವನ್ನು ತಮ್ಮ ಬಹುರೂಪದ ಮೂಲಕ ಪ್ರದರ್ಶಿಸುತ್ತಿದ್ದರು. ಇವರು “ರೇಕಣ್ಣ ಪ್ರಿಯ ನಾಗಿನಾಥ” ಎಂಬ ಅಂಕಿತ ನಾಮದಲ್ಲಿ ವಚನಗಳನ್ನು ಸಹ ರಚಿಸಿದ್ದಾರೆ. ಇವರ ೬೬ ವಚನಗಳು ದೊರೆತಿವೆ. ಅವು ಹೆಚ್ಚಾಗಿ ವೃತ್ತಿಪರಿಭಾಷೆಯಲ್ಲಿ ತತ್ವಬೋಧೆ ಮಾಡುವಂತಿವೆ.

ಬಸವಣ್ಣನಿಂದ ಶುದ್ಧ ಪ್ರಸಾದಿಯಾದೆ
ಚನ್ನಬಸವಣ್ಣನಿಂದ ಸಿದ್ಧ ಪ್ರಸಾದಿಯಾದೆ
ಪ್ರಭುದೇವರಿಂದ ಪ್ರಸಿದ್ಧ ಪ್ರಸಾದಿಯಾದೆ
ಇವರೆಲ್ಲರ ಪ್ರಸಾದಿಯಾಗಿ
ರೇಕಣ್ಣಪ್ರಿಯ ನಾಗಿನಾಥನಲ್ಲಿ ಸೊಬಗ ಮೆರೆದೆ

ಬಸವಾದಿ ಶರಣರಿಂದ “ನಾ” ಕೆಟ್ಟು ಬದುಕಿದೆ ಎಂದು ಹೇಳಿದ ಅವರು, ಶರಣರ ಸಂಪರ್ಕ, ಸಂಸರ್ಗದಿಂದ ನಾನು ಯಾರು? ಎಂಬುದನ್ನು ಅರಿತೆ ಎಂದು ಅಭಿಮಾನದಿಂದ ಹೇಳುತ್ತಾರೆ. ಮೇಲಾಗಿ ನೀವೂ ಸಹ ಶರಣರ ಬದುಕನ್ನು ಪಾಲಿಸಬೇಕು ಎಂದು ಜನರಿಗೆ ತಿಳಿ ಹೇಳಿದರು. ನಾಲ್ಕು ದಿನದ ಬದುಕಿಗಾಗಿ ಏನೆಲ್ಲ ಮುಖ, ಮುಖವಾಡ ಧರಿಸುವ ನಾವುಗಳು ನಿಜದ ಮುಖದರ್ಶನದತ್ತ ಸಾಗಬೇಕು. ಅಂತಹ ಬದುಕಿನ ವೇಷ ನಾ ತೊಡುವ ಬಹುರೂಪದಲ್ಲಿದೆ ಎಂದು ಸಾರ್ವಜನಿಕರಿಗೆ ತಿಳಿಸಿ ಹೇಳುವ ಕೆಲಸವನ್ನು ಇವರು ಮಾಡುತ್ತಿದ್ದರು.

ಷಡುಚಕ್ರವಳಯದೊಳಗೆ ನಾನಾಡುವೆ ಬಹುರೂಪ
ಭ್ರೂಮಧ್ಯಮಂಡಲ ಹೃದಯಕಮಲ ಮಧ್ಯದ
ಅಬ್ಜಸ್ವರದ ಮಣುಪೂರಕದ ಮೇಲೆ ನಾನಾಡುವೆ
ಬಹುರೂಪ
ಬಯಲ ಬೆರೆಸಿದ ಮರೀಚಿಯಂತೆ ನಾನಾಡುವೆ
ಬಹುರೂಪ
ರೇಕಣ್ಣಪ್ರಿಯ ನಾಗಿನಾಥ ಬಸವಣ್ಣನಿಂದ ಬದುಕಿದೆನು

ಬದುಕಿನ ಸಫಲತೆ ಇರುವುದು ಶರಣರು ನಡೆದು ನುಡಿದ ವಚನಗಳಲ್ಲಿವೆ. ಅವರ ಬದಕಿನ ರೀತಿಯೇ ನಮಗೆ ನೀತಿಯಾಗಬೇಕು. ಬಸವಣ್ಣನಿಂದಲೇ ನಾನು ಸಹ ಬದುಕಿನಲ್ಲಿ ಬದಲಾವಣೆ ತಂದುಕೊಂಡೆನು ಎಂದು ಹೇಳುತ್ತಾರೆ.

ಅನುದಿನಗಳೆಂಬವು ಪ್ರಣತೆಯಾಗಿ
ವರುಷವೆಂಬವು ಬತ್ತಿಯಾಗಿ
ಜೀವಜಾತಿಯ ಬೆಳಗ ಬೆಳಗಿನರಿಯಬೇಕು
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು
ಎಣ್ಣೆಯೆಂಬ ಜವ್ವನ ಸವೆಯದ ಮುನ್ನ
ಬೆಳಗು ಕತ್ತಲೆಯಾಗದ ಮುನ್ನ
ರೇಕಣ್ಣ ಪ್ರಿಯ ನಾಗಿನಾಥ, ಬೆಳಗ
ಬೆಳಗಿನಲರಿಯಬೇಕು

ಪ್ರಣತಿ, ಎಣ್ಣೆ, ಬತ್ತಿಯ ರೂಪಕಗಳನ್ನು ಬಳಸುವ ಮೂಲಕ ಸಮಸ್ತ ಜೀವ ಸಂಕುಲದ ಉಳಿವಿಗೆ ಕಾರಣನಾದ ಕೂಡಲ ಸಂಗಮನನ್ನು ಕೂಡುವ, ಸೇರುವ ಬೆಳಕು, ಬೆಳಗು, ಬೆರಗು, ಬೆಡಗನ್ನು ಅರಿಯವುರಲ್ಲೇ ಮಾನವ ಜನ್ಮದ ಸಾರ್ಥಕತೆ ಅಡಗಿದೆ ಎಂದು ಹೇಳುತ್ತಾರೆ.

ಹಾಗೆಂದ ಮಾತ್ರಕ್ಕೆ ಶರಣರು ಆಕಾಶದಿಂದ ಉದುರಲಿಲ್ಲ. ಭೂಮಿಯಲ್ಲಿ ಚಿಗುರಲಿಲ್ಲ. ಧುತ್ತನೆ ಉದ್ಭವವಾದವರಲ್ಲ, ನಮ್ಮ ನಿಮ್ಮಂತೆ ತಂದೆ-ತಾಯಿ ಉದರದಲ್ಲಿ ಹುಟ್ಟಿ ಕಾಯಕ ದಾಸೋಹ ಎಂಬ ಮಂತ್ರವನ್ನು ಈ ಜಗತ್ತಿಗೆ ಕಾಣಕೆಯಾಗಿ ನೀಡಿದರು. ಭಕ್ತಿಗೆ ಬಸವಣ್ಣನೇ ಬಣ್ಣ, ಭಾರತಕ್ಕೆ ಬಸವಣ್ಣನೇ ಬೆಳಕು ಎಂದು ಶರಣರನ್ನು ಹಾಡಿ ಹೊಗಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here