ಶಹಾಬಾದ:ನಗರದ ಜಿಇ ಕಾಲೋನಿಯಲ್ಲಿರುವ ಮೌಂಟ್ ಕಾರಮೇಲ್ ಕಾನವೆಂಟ್ (ಎಮ್‍ಸಿಸಿ) ಶಾಲೆಯಲ್ಲಿ ಪಾಲಕ ಶಿಕ್ಷಕರ ಸಂಘ ರಚನೆ ಮಾಡಲಾಯಿತು.
ಶಾಲೆಯ ಪಾಲಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನಾಗರಾಜ ಸಿಂಘೆ, ಉಪಾಧ್ಯಕ್ಷರಾಗಿ ಮಾರ್ಗರೇಟ್ ಜಾರ್ಜ,ಕಾರ್ಯದರ್ಶಿಯಾಗಿ ಸುನೀಲ್ ಭಗತ್ ಹಾಗೂ ಖಜಾಂಚಿಯಾಗಿ ದುರ್ಗ ಕುಸಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಅನಿತಾ ಕುಲಕರ್ಣಿ ಇತರರು ಇದ್ದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಮಾತೆ ಸಿಸ್ಟರ್ ಲಿನೇಟ್ ಸಿಕ್ವೇರಿಯಾ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮುಖ್ಯ. ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಮೂಲಕವೇ ಶಿಕ್ಷಣ ನೀಡುವ ಅನಿವಾರ್ಯತೆ ಎದುರಾಗಿತ್ತು.
ಆ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯದಂತೆ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿತ್ತು. ಆದರೆ ಮನೆಯಲ್ಲಿದ್ದ ಮಕ್ಕಳು ಟಿ.ವಿ., ಮೊಬೈಲ್, ಕಂಪ್ಯೂಟರ್ ದಾಸರಾಗುತ್ತಿರುವುದರಿಂದ ಇಂದು ಪರಸ್ಪರ ಪ್ರೀತಿ, ಸಹಾಯಕ, ಸಹಕಾರವನ್ನೇ ಮರೆತು ಬಿಡುತ್ತಿದ್ದಾರೆ. ಅದನ್ನು ಪಾಲಕರು ಆದಷ್ಟು ದೂರ ಮಾಡಿದಾಗ ಮಕ್ಕಳಲ್ಲಿ ಕಲಿಕಾ ಮನೋಭಾವನೆ ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಪಾಲಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ನಾಗರಾಜ ಸಿಂಘೆ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕ,ಪಾಲಕ, ಬಾಲಕ ಹಾಗೂ ಮಾಲಕನ ಪಾತ್ರವೂ ಮುಖ್ಯವಾಗಿರುತ್ತದೆ. ಇದರಲ್ಲಿ ಒಬ್ಬರಾದರೂ ತಮ್ಮ ಕರ್ತವ್ಯದಿಂದ ವಿಮುಖರಾದರೆ ಮಕ್ಕಳ ಅಭ್ಯಾಸ ಕುಂಠಿತಗೊಳ್ಳುತ್ತದೆ.ಆದ್ದರಿಂದ ಪಾಲಕರು ಮಕ್ಕಳು ಯಾವ ರೀತಿ ಅಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಶಿಕ್ಷಕರಿಂದ ತಿಳಿದುಕೊಳ್ಳಬೇಕು.ಅಲ್ಲದೇ ಶಾಲೆಗೆ ಆಗಾಗ ಬೇಟಿ ನೀಡಿ ನಿಮ್ಮ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ತಿಳಿಯಬೇಕೆಂದು ಹೇಳಿದರು.
ಕಾರ್ಯದರ್ಶಿ ಸುನೀಲ ಭಗತ್ ಮಾತನಾಡಿ, ತಾಲೂಕಿನಲ್ಲಿಯೇ ಎಮ್‍ಸಿಸಿ ಶಾಲೆ ಉತ್ತಮ ಶಾಲೆಯೆಂದು ಹೆಗ್ಗಳಿಕೆ ಪಡೆದಿದೆ. ಇಲ್ಲಿ ಅಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ.ಇಲ್ಲಿ ಉತ್ತಮ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಕ್ಕಳ ಪಾಲಕರು ಹಾಗೂ ಶಿಕ್ಷಕರು ಇದ್ದರು.