ಬಹುತೇಕರು ಸಾಮಾನ್ಯರಾಗಿರುತ್ತಾರೆ; ಇನ್ನು ಕೆಲವರು ಅಸಾಮಾನ್ಯರಾಗಿ, ಅದ್ಭುತವಾಗಿ ಇರುತ್ತಾರೆ. ಅದಕ್ಕೆ ಅವರ ಕಾರ್ಯಚಟುವಟಿಕೆ, ಕ್ರಿಯಾಶೀಲತೆ ಅವರ ವ್ಯಕ್ತಿತ್ವ, ಪ್ರವೃತ್ತಿ ಎಲ್ಲವನ್ನು ಗಮನಿಸಿಯೇ “ಈತ ಅದ್ಭುತ ಅದಾನರೀ, ಈಕಿ ಅದ್ಭುತ ಅದಾಳರೀ” ಎಂದು ಅವರನ್ನು ನಾವು ಆಗಾಗ ಗುಣಗಾನ ಮಾಡುತ್ತಿರುತ್ತೇವೆ. ಅವರ ಕಾರ್ಯಗಳು ಅಸಾಮಾನ್ಯವಾಗಿದ್ದರೆ ನಾವು ಅವರನ್ನು ಕೊಂಡಾಡುತ್ತೇವೆ; ಸನ್ಮಾನಿಸಿ ಗೌರವಿಸುತ್ತೇವೆ. ಇಂತಹ ಅಸಾಮಾನ್ಯ ಮತ್ತು ಅದ್ಭುತ ವ್ಯಕ್ತಿಗಳು ಸಮಾಜದಲ್ಲಿ ಅನೇಕರು ಸಿಗುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಶ್ರೀ ಹನುಮಂತಪ್ಪ ಅಂಡಗಿಯವರು ಒಬ್ಬರು ಎಂದರೆ ತಪ್ಪಾಗಲಾರದು.
ಹನುಮಂತಪ್ಪ ಅಂಡಗಿಯವರು ಮೂಲತಃ ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದವರು. ಎಂ.ಎ, ಎಂ.ಎಡ್ ಪದವೀಧರರಾದ ಇವರು; ಸದ್ಯ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯ : ಹನುಮಂತಪ್ಪ ಅಂಡಗಿಯವರು ಸಿದ್ಧಮ್ಮ ಮತ್ತು ನಿಂಗಪ್ಪ ಅಂಡಗಿಯವರ ದಂಪತಿಗಳ ಮಗನಾಗಿ ದಿನಾಂಕ 01-06-1971ರಂದು ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಜನಿಸಿದ್ದಾರೆ. ಇವರದು ತುಂಬು ಕುಟುಂಬ. ಹನುಮಂತಪ್ಪನವರು ತಂದೆ-ತಾಯಿಗಳಿಗೆ ಇವರು ಮೂರನೆ ಮಗ. ಸಿದ್ಧಮ್ಮ ಮತ್ತು ನಿಂಗಪ್ಪ ದಂಪತಿಗಳು ಬಡತನದಲ್ಲಿಯೇ ಎಂಟು ಮಕ್ಕಳನ್ನು ಹೆತ್ತು ಸಾಕಿ ಬೆಳೆಸಿದ ಪುಣ್ಯ ದಂಪತಿಗಳು. ಹನುಮಂತಪ್ಪ ಅಂಡಗಿಯವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಸ್ವಗ್ರಾದಲ್ಲಿಯೇ ಪೂರೈಸಿದ್ದಾರೆ.
ಶಿಕ್ಷಣ :ಅಂಡಗಿಯವರು ತಮ್ಮ ಶಿಕ್ಷಣವನ್ನು ಸ್ವಗ್ರಾಮದ ಜೊತೆಗೆ ಕೊಪ್ಪಳ, ಬಳ್ಳಾರಿ, ಗುಲಬರ್ಗಾಗಳಲ್ಲಿ ಪೂರೈಸಿದ್ದಾರೆ. ಪದವಿ ಪೂರ್ವ(1991) ಮತ್ತು ಪದವಿ(1993) ಶಿಕ್ಷಣವನ್ನು ಕೊಪ್ಪಳದ ಪ್ರತಿಷ್ಠಿತ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಪೂರೈಸಿದ್ದಾರೆ. ನಂತರ ಬಳ್ಳಾರಿಯಲ್ಲಿ ಬಿ.ಎಡ್ ಶಿಕ್ಷಣವನ್ನು 1994ರಲ್ಲಿ ಮುಗಿಸಿದ್ದಾರೆ. ನಂತರ ಗುಲಬರ್ಗಾದಲ್ಲಿ ಎಂ.ಎಡ್ ಶಿಕ್ಷಣ ಅಭ್ಯಾಸ ಮಾಡುತ್ತಿರುವಾಗಲೇ ಶಿಕ್ಷಕ ವೃತ್ತಿಗೆ ನೇಮಕವಾದರು.
ವೃತ್ತಿ : ದಿನಾಂಕ 01-03-1997ರಂದು ಗುಲಬರ್ಗಾ ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲಾ ಸಹಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಅಲ್ಲಿ ಸುಮಾರು ಐದು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆಸಲ್ಲಿಸಿದರು. ನಂತರ 2001 ರಿಂದ 2008ರವರೆಗೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಹಾಗೂ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದ್ದಾರೆ. ನಂತರ ಬಡ್ತಿಹೊಂದಿ ದಿನಾಂಕ 24-11-2008 ರಿಂದ ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ವೃತ್ತಿಯ ಜೊತೆಗೆ ಕೆಲವು ವರ್ಷಗಳ ಕಾಲ ಪ್ರಭಾರಿ ಪ್ರಾಚಾರ್ಯರಾಗಿಯೂ ಸಹ ಸೇವೆಸಲ್ಲಿಸಿದ್ದಾರೆ.
ಪ್ರವೃತ್ತಿ : ಹನುಮಂತಪ್ಪ ಅಂಡಗಿಯವರು ಕೇವಲ ವೃತ್ತಿಗಷ್ಟೇ ಸೀಮಿತರಾಗಿ ಜೋತುಬಿದ್ದವರಲ್ಲ. ವೃತ್ತಿಯ ಜೊತೆ-ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಗಳ ಪ್ರವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 2001 ರಿಂದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಮಟ್ಟದ 14ನೇ ಹಾಗೂ 17ನೇ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಅದ್ಧೂರಿಯಾಗಿ ಮಾಡಿ ಹೆಸರುವಾಸಿಯಾಗಿದ್ದಾರೆ.
2004ರಲ್ಲಿ ಪ್ರೊ.ಚಂದ್ರಶೇಖರ ಪಾಟೀಲರವರ ಸರ್ವಾಧ್ಯಕ್ಷತೆಯಲ್ಲಿ 14ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು 2008ರಲ್ಲಿ ಪ್ರೊ.ಇಟಗಿ ಈರಣ್ಣನವರ ಸರ್ವಾಧ್ಯಕ್ಷತೆಯಲ್ಲಿ 17ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನವನ್ನು ತಮ್ಮ ಚುಟುಕು ಸಾಹಿತ್ಯ ಪರಿಷತ್ತಿನಿಂದ ನಡೆಸಿದ್ದಾರೆ. ಅಲ್ಲದೇ ಕೊಪ್ಪಳ ಜಿಲ್ಲೆಯಲ್ಲಿ 10 ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿಯೇ ಒಬ್ಬ ವ್ಯಕ್ತಿ ಇಷ್ಟು ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಮಾಡಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ.
ಸಾಹಿತ್ಯ : ಅಂಡಗಿಯವರು ಮೂಲತಃ ಅರ್ಥಶಾಸ್ತ್ರ ಉಪನ್ಯಾಸಕರು. ಆದರೂ ಅವರು ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಬಲ್ಲವರು ಹಾಗು ಆಸಕ್ತಿಯನ್ನೂ ಹೊಂದಿದವರಾಗಿದ್ದಾರೆ. ಆದ್ದರಿಂದಲೇ ಅವರಿಂದ ಅನೇಕ ಸಾಹಿತ್ಯಿಕ ಕೃತಿಗಳು ರಚನೆಯಾಗಿವೆ ಎಂದು ಹೇಳಬಹುದು. ಅಂಡಗಿಯವರು ಸಂಪಾದನಾ ಕೃತಿಗಳನ್ನು ಪ್ರಕಟಿಸುವಲ್ಲಿ ಹೆಸರುವಾಸಿಯಾದವರು. ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ನಾಡಿನ ತುಂಬಾ ಹೆಸರು ಮಾಡಿದ ದೊಡ್ಡ-ದೊಡ್ಡ ವಿದ್ವಾಂಸರ ಕುರಿತು ಪ್ರಕಟವಾದ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ. ಮೂವತ್ಮೂರು ಸಂಪಾದನಾ ಕೃತಿಗಳನ್ನು ಪ್ರಕಟಿಸಿರುವುದು ಸಾಮಾನ್ಯ ಸಂಗತಿಯೆನಲ್ಲ. ಇದು ಸಹೃದಯರನ್ನು ಹುಬ್ಬೇರಿಸುವಂತೆ ಮಾಡಿದೆ. ಬೇರೊಬ್ಬ ವ್ಯಕ್ತಿಗಳು ಇಷ್ಟು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆಯೇ? ಎಂಬ ಪ್ರಶ್ನೆ ಉಂಟಾಗುತ್ತದೆ.
ನಾಡಿನ ವಿದ್ವಾಂಸರು ಹಾಗೂ 8ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರರ ಕುರಿತು ‘ಕಂಬಾರರಿಗೆ ಜ್ಞಾನಪೀಠ ಅಭಿನಂದನೆ’, ಸ್ವಾತಂತ್ರ್ಯ ಹೋರಾಟಗಾರ ಶ್ರೀ ಶಿವಮೂರ್ತಿಸ್ವಾಮಿ ಅಳವಂಡಿಯವರ ಕುರಿತು ‘ಕರ್ನಾಟಕದ ಹುಲಿ’ ಹಾಗೂ ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಶರಣಬಸವರಾಜ ಬಿಸರಳ್ಳಿಯವರ ಕುರಿತು ‘ಶರಣ ಪಥಿಕ’, ಗಾನ ವಿದ್ವಾಂಸರಾದ ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳ ಕುರಿತು ‘ಗಾನಯೋಗಿ’, ಸಂಪತ್ತಿಗೆ ಸವಾಲ್ ಖ್ಯಾತಿಯ ನಾಟಕದ ಕತೃ ಶ್ರೀ ಪಿ.ಬಿ ಧುತ್ತರಗಿಯವರ ಕುರಿತು ‘ರಂಗಭೂಮಿಯ ಜಂಗಮ’, ಕೊಪ್ಪಳದ ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರ, ಶ್ರೀ ಗವಿಮಠ ಮತ್ತು ಪರಂಪರೆಯ ಕುರಿತು ‘ಗವಿಸಿರಿ’ ಮತ್ತು ‘ಗವಿಬೆಳಕು’, ರಾಜಕೀಯ ಧುರೀಣ ಮತ್ತು ಮಾಜಿ ಶಾಸಕರಾದ ಶ್ರೀ ಎಂ.ಬಿ ದಿವಟರವರ ಬಗ್ಗೆ ‘ಸಾಂಸ್ಕೃತಿಕ ನಾಯಕ’, ಸಂಶೋಧಕರಾದ ಶ್ರೀ ಬಿ.ಸಿ. ಪಾಟೀಲರ ಕುರಿತು ‘ಚೈತನ್ಯಶೀಲ ಸಂಶೋಧಕ’, ಹಿರಿಯ ಸಾಹಿತಿ ಶ್ರೀ ಎಚ್.ಎಸ್. ಪಾಟೀಲರ ಕುರಿತು ‘ಕೊಪಣ ಕೋಶ’ ಹಾಗೂ ಡಾ.ಮಹಾಂತೇಶ ಮಲ್ಲನಗೌಡರ ಕುರಿತು ‘ಮನಸ್ಸು ಮಲ್ಲಿಗೆ’ ಹಾಗೂ ಸಾಂಸ್ಕೃತಿಕ ಮಹಿಳೆ ಶ್ರೀಮತಿ ನಿರ್ಮಲಾ ಬಳ್ಳೊಳ್ಳಿಯವರ ಕುರಿತು ‘ನಿರ್ಮಲಾ ದಾಸೋಹಿ’ ಹೀಗೆ ಮುಂತಾದ ಮೂವತ್ಮೂರು ಸಂಪಾದನಾ ಕೃತಿಗಳನ್ನು ಪ್ರಕಟಿಸಿದ ಅಂಡಗಿಯವರ ಕಾರ್ಯ ಅದ್ಭುತವೇ ಸರಿ.
ಹನುಮಂತಪ್ಪ ಅಂಡಗಿಯವರು ಬರೀ ಸಂಪಾದನಾ ಕೃತಿಗಳನ್ನಷ್ಟೇ ಪ್ರಕಟಿಸಿದವರಲ್ಲ; ಸ್ವತಂತ್ರ ಕೃತಿಗಳನ್ನೂ ಸಹ ಬರೆದು ಆ ಮೂಲಕ ಸಾಹಿತ್ಯಿಕ ಸೇವೆಗೈದಿದ್ದಾರೆ. 12ನೇ ಶತಮಾನದ ಶ್ರೇಷ್ಠ ವಚನಕಾರರಾದ ಅಂಬಿಗರ ಚೌಡಯ್ಯನವರ ಕುರಿತು ‘ಒಡಲಿಲ್ಲದಂಬಿಗ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಅಲ್ಲದೇ ಹಿರಿಯ ವಿದ್ವಾಂಸರ ಮತ್ತು ಚಿಂತಕರ ಜೀವನ ಚರಿತ್ರೆಗಳನ್ನು ಕುರಿತು ‘ಚೈತನ್ಯಶೀಲರು’ ಎಂಬ ಕೃತಿಯನ್ನು ಬರೆದು ಪ್ರಕಟಿಸಿ ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.
ಜಾನಪದ ರಂಗ : ಅಂಡಗಿಯವರು ವಿವಿಧ ಆಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದ ಬಗ್ಗೆ ಇವರಿಗೆ ಎಷ್ಟು ಒಲವಿದೆಯೋ ಅಷ್ಟೇ ಜಾನಪದ ಕ್ಷೇತ್ರದ ಬಗ್ಗೆಯೂ ಸಹ ಆಸಕ್ತಿಯನ್ನು ಹೊಂದಿದ್ದಾರೆ. ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆ ಸಂಘಟನೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ‘ಜಾನಪದ ಸಂಜೆ’ ಎಂಬ ಕಾರ್ಯಕ್ರಮದ ಮೂಲಕ ಹಳ್ಳಿ-ಹಳ್ಳಿಗಳಲ್ಲಿ ಜಾನಪದದ ಅಭಿರುಚಿಯನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಂಡಗಿಯವರು ಒಬ್ಬ ಒಳ್ಳೆಯ ಜನಪದ ಗಾಯಕರೂ ಹೌದು. ಮೂಲ ಜನಪದ ಗೀತೆಗಳನ್ನು ಹಾಡುವ ಕಲೆ ಇವರಿಗೆ ಕರಗತವಾಗಿದೆ. ಅನೇಕ ಉತ್ಸವಗಳಲ್ಲಿ ತಮ್ಮ ಗಾಯನದ ವಿದ್ವತ್ ಪ್ರದರ್ಶನ ಮಾಡಿದ್ದಾರೆ.
ಆನೆಗುಂದಿ ಉತ್ಸವ, ಕನಕಗಿರಿ ಉತ್ಸವ, ಇಟಗಿ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ ಹೀಗೆ ಮುಂತಾದ ಉತ್ಸವಗಳಲ್ಲಿ ತಮ್ಮ ಜನಪದ ಗೀತೆಗಳ ಗಾಯನದ ಮೂಲಕ ಕಲಾರಸಿಕರ ಮನಗೆದ್ದಿದ್ದಾರೆ. ತಾವು ಭಾಗವಹಿಸಿದ ಯಾವುದೇ ಕಾರ್ಯಕ್ರಮಗಳಿದ್ದರೂ ಅಲ್ಲಿ ತಮ್ಮ ಜನಪದ ಗಾಯನದ ಮೂಲಕ ಅಲ್ಲಿ ನೆರೆದವರನ್ನು ರಂಜಿಸಿಯೇ ತಮ್ಮ ಮಾತುಗಳಿಗೆ ವಿರಾಮ ಹೇಳುವ ಸಂಪ್ರದಾಯವನ್ನಿಟ್ಟುಕೊಂಡಿದ್ದಾರೆ. ಜಾನಪದ ಅಕಾಡೆಮಿ ಮೂಲಕ ಅನೇಕ ಜಾನಪದ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಜನಪದ ಸಾಹಿತ್ಯದ ಕುರಿತು ಅನೇಕ ಉಪನ್ಯಾಸ ಹಾಗೂ ಜನಪದ ಗೀತೆಗಳನ್ನು ಹಾಡುವುದರ ಮೂಲಕ, ನಶಿಸಿ ಹೋಗುತ್ತಿರುವ ಜನಪದ ಸಾಹಿತ್ಯದ ಪ್ರಕಾರಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನ ಮಾಡುತ್ತಿರುವುದು ಅಭಿನಂದನಾರ್ಹವಾದ ಸಂಗತಿ ಎಂದೇ ಹೇಳಬಹುದು.
ಸಂಘಟನೆ : ಅಂಡಗಿಯವರು ಸಂಘಟನಾ ಚತುರರು. ಚುಟುಕು ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಅಕಾಡೆಮಿ ಹೀಗೆ ಅನೇಕ ಸಂಘಟನೆಗಳ ಮೂಲಕ ಸಾಹಿತ್ಯಿಕ ಮತ್ತು ಜಾನಪದ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಸಮ್ಮೇಳನ, ಉಪನ್ಯಾಸ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಸನ್ಮಾನ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಸಂಘಟನಾ ಚತುರತೆಯ ಮೂಲಕ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಸದಾ ಅಧ್ಯಯನಶೀಲರು : ಶ್ರೀ ಅಂಡಗಿಯವರು ಸದಾ ಅಧ್ಯಯನಶೀಲರೆಂದೇ ಹೇಳಬಹುದು. ಪ್ರತಿನಿತ್ಯ ಸುಮಾರು 40-50 ರೂಪಾಯಿಗಳ ಪತ್ರಿಕೆಯನ್ನು ಖರೀದಿಸುತ್ತಾರೆ. ಅಲ್ಲದೇ ತಿಂಗಳಲ್ಲಿ ಸುಮಾರು 400-500 ರೂಪಾಯಿಗಳ ಪುಸ್ತಕ ಖರೀದಿಸುತ್ತಾರೆ. ಹೀಗಾಗಿ ಸದಾ ಅವರ ಜೊತೆಯಲ್ಲಿ ಪತ್ರಿಕೆ ಇಲ್ಲವೇ ಪುಸ್ತಕಗಳನ್ನು ಕಾಣಬಹುದು. ಹೀಗಾಗಿ ಸದಾ ಓದುವ ಅಭಿರುಚಿಯುಳ್ಳವರು ಎಂದು ಹೇಳಬಹುದು. ಆದ್ದರಿಂದಲೇ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ 2016ರಲ್ಲಿ ಎಂ.ಎ ಕನ್ನಡ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಡಾ.ಪ್ರಭುದೇವ ಗಂಜಿಹಾಳರವರ ಮಾರ್ಗದರ್ಶನದಲ್ಲಿ ‘ಸ್ವಾತಂತ್ರೋತ್ತರ ಕಾಲದ ಕನ್ನಡ ಲಲಿತ ಪ್ರಬಂಧಗಳಲ್ಲಿ ಸಾಮಾಜಿಕ ವಾಸ್ತವ’ ಎಂಬ ವಿಷಯದ ಮೇಲೆ ಪಿಎಚ್.ಡಿ ಸಂಶೋಧನೆ ಮಾಡುತ್ತಿರುವುದನ್ನು ಗಮನಿಸಿದರೆ ಅವರು ಸದಾ ಅಧ್ಯಯನಶೀಲಯುಳ್ಳವರು ಎಂಬುವುದು ಕಂಡುಬರುತ್ತದೆ.
ಪ್ರಶಸ್ತಿಗಳು : ಅಂಡಗಿಯವರ ಸೇವೆಯು ಅಗಾಧವಾಗಿದೆ. ಅವರ ಸೇವೆಗೆ ಸಂದ ಪ್ರಶಸ್ತಿಗಳು ಸಹ ಅನೇಕ. ಅವರ ಸಾಹಿತ್ಯ, ಸಂಘಟನೆ ಮತ್ತು ಜಾನಪದ ರಂಗದ ಸೇವೆಯನ್ನು ಗಮನಿಸಿ ಸರಕಾರ ಮತ್ತು ಅನೇಕ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2004ರಲ್ಲಿ ‘ಜನಮೆಚ್ಚಿದ ಶಿಕ್ಷಕ’ ಹಾಗೂ 2008ರಲ್ಲಿ ‘ಜಿಲ್ಲಾಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ ರಾಜ್ಯಮಟ್ಟದ ಕನಕಶ್ರೀ ಪ್ರಶಸ್ತಿ, ರಾಜ್ಯಮಟ್ಟದ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ರಾಜ್ಯಮಟ್ಟದ ಶ್ರೀಕೃಷ್ಣದೇವರಾಯ ಪ್ರಶಸ್ತಿ, ರಾಜ್ಯಮಟ್ಟದ ಅಂಬಿಗರ ಚೌಡಯ್ಯ ಪ್ರಶಸ್ತಿ, ರಾಜ್ಯಮಟ್ಟದ ಪಿ.ಬಿ ಧುತ್ತರಗಿ ಪ್ರಶಸ್ತಿ ಹೀಗೆ ಮುಂತಾದ ಪ್ರಶಸ್ತಿಗಳು ಇವರ ಮುಡಿಗೇರಿವೆ.
2003ರಲ್ಲಿ ಬಾಳೆಹೊನ್ನೂರಿನಲ್ಲಿ ನಡೆದ ರಾಜ್ಯಮಟ್ಟದ 13ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ 2005ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 15ನೇ ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಚುಟುಕುಶ್ರೀ ಸ್ಫರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. 2011ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಮೂರನೆ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಜನಪದಗೀತೆಗಳನ್ನು ಹಾಡಿ ಜನಮನಸೂರೆಗೊಳಿಸಿದ್ದಾರೆ. 2013ರಲ್ಲಿ ಗಂಗಾವತಿಯಲ್ಲಿ ಡಾ.ಎಂ.ಎಂ. ಕಲಬುರ್ಗಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ 5ನೇ ಹಾಲುಮತ ಸಂಸ್ಕೃತಿ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಅಲ್ಲದೇ 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನಿಗವನ ವಾಚನ ಮತ್ತು 2011ರಲ್ಲಿ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ಗೀತೆಗಳನ್ನು ಹಾಡುವುದಕ್ಕೆ ಸಿಕ್ಕ ಅವಕಾಶಗಳು ಅವರ ಸಾಹಿತ್ಯಿಕ ಸೇವೆಗೆ ಸಂದ ಗೌರವಗಳೆಂದೇ ಹೇಳಬಹುದು.
ಹೀಗೆ ಶ್ರೀ ಹನುಮಂತಪ್ಪ ಅಂಡಗಿಯವರ ಸಾಹಿತ್ಯ ಮತ್ತು ಸಂಘಟನಾ ಕಾರ್ಯಗಳನ್ನು ಕಂಡಾಗ ಸಾಮಾನ್ಯವಾಗಿಯೇ ಇವನ್ನು ನಾವು ಅದ್ಭುತ ಎನ್ನುತ್ತೇವೆ. ಅವರು ಸದಾ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಇರುವಿಕೆಯನ್ನು ತೋರಿಸುತ್ತಿರುವ ವ್ಯಕ್ತಿ ಎನ್ನಬಹುದು.