ಶಹಾಬಾದ: ಭಂಕೂರ ಗ್ರಾಮದಿಂದ ಸಣ್ಣೂರ ಗ್ರಾಮಕ್ಕೆ ಹಾದು ಹೋಗುವ ಭಂಕೂರ ಗ್ರಾಮದ ಕಮಾನ್ ಹತ್ತಿರದ ರಸ್ತೆಯಲ್ಲಿ ದೊಡ್ಡದಾದ ಗುಂಡಿಗಳು ಬಿದ್ದು ಪ್ರಯಾಣಿಕರು ಸಂಚರಿಸದಂತಹ ಪರಿಸ್ಥಿತಿ ಎದುರಾಗಿದೆ.
ಭಂಕೂರ ಗ್ರಾಮದಿಂದ ಹೊರಡುವ ಮುಖ್ಯ ರಸ್ತೆಯಿಂದ ಸಣ್ಣೂರಿಗೆ ಪ್ರತಿನಿತ್ಯಇಲ್ಲಿ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಹೀಗೆ ಸಂಚಾರ ಮಾಡುವ ಪ್ರಯಾಣಿಕರ ವಾಹನಗಳು ಸೇರಿದಂತೆ ದ್ವಿಚಕ್ರ ಸವಾರರು, ಆಟೋ, ಗೂಡ್ಸ್ ವಾಹನಗಳು, ಲಾರಿ, ಬಸ್, ಟ್ರ್ಯಾಕ್ಟರ್ ಮುಂತಾದ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಭಂಕೂರ ಗ್ರಾಮದ ಕಮಾನ್ ಹತ್ತಿರವೇ ಈ ಬೃಹದಾಕಾರದ ಗುಂಡಿಯನ್ನು ನೋಡಿದರೇ ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿ ತೋರಿಸುತ್ತಿದೆ. ಈಗಾಗಲೇ ಹೆದ್ದಾರಿಗಳಲ್ಲಿ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಬೈಕ್ ಸವಾರರು ಪರಸ್ಪರ ಡಿಕ್ಕಿಹೊಡೆದುಕೊಂಡಿದ್ದಾರೆ. ತೆರಿಗೆ ನೀಡುವ ಸಾರ್ವಜನಿಕರಿಗೆ ಕನಿಷ್ಠ ಪಕ್ಷ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ಇರಾದೆ ಜನಪ್ರತಿನಿಧಿಗಳಗಿಲ್ಲ. ಅಲ್ಲದೇ ಸಂಬಂಧಪಟ್ಟ ಇಲಾಖೆ ದುರಸ್ತಿ ಕಾರ್ಯಕ್ಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೆದ್ದಾರಿಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ.ಅಲ್ಲದೇ ಬುತೇಕ ಕಡೆಗಳಲ್ಲಿ ರಸ್ತೆ ಮೇಲಿನ ಪದರು ಕಿತ್ತುಕೊಂಡು ಹೋಗಿವೆ. ಇದರಿಂದ ರಸ್ತೆಯಲ್ಲಿ ಸಂಚಾರ ಮಾಡಲು ಭಯವಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು. ಸಾರ್ವಜನಿಕರ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ರಸ್ತೆಯ ಮೇಲೆ ಗುಂಡಿಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆಯಿದೆ.ಕೂಡಲೇ ಸಂಬಂಧಪಟ್ಟ ಇಲಾಖೆ ಸರಿಪಡಿಸಬೇಕು. – ಮಹ್ಮದ್ ಅಜರ್ ಶಹಾಬಾದ.
ಭಂಕೂರ ಗ್ರಾಮದ ಐತಿಹಾಸಿಕ ಎರಡು ಉದ್ಭವ ಗಣಪಗಳನ್ನು ನೋಡಲು ಹಾಗೂ ದರ್ಶನ ಪಡೆಯಲು ನಿತ್ಯ ಸಾರ್ವಜನಿಕರು ಬರುತ್ತಾರೆ.ನೂರಾರು ಜನರು ಇದೇ ರಸ್ತೆಯಿಂದ ಸಂಚರಿಸುತ್ತಾರೆ. ಇಲ್ಲಿನ ಬೃಹದಾಕಾರದ ಗುಂಡಿಯನ್ನು ನೋಡಿ ಯಾರಾದರೂ ಶಪಿಸದೇ ಇರಲಾರರು.ಕೂಡಲೇ ಗುಂಡಿಯನ್ನು ಮುಚ್ಚಿಸಿ. – ಅಶೋಕ ಗುತ್ತೆದಾರ.