ಜೇವರ್ಗಿ: ಇಲ್ಲಿನ ಕೋಳಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಸುಮಾರು 15 ಲಕ್ಷ ರೂಪಾಯಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಎತ್ತಿ ಬಳಕೆ ಮಾಡಿ ಪಂಗನಾಮ ಹಾಕಿದ್ದಾರೆ .
ಈ ಕುರಿತಂತೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೇರಿ ತಹಸಿಲ್ ಕಚೇರಿ ಜೇವರ್ಗಿ ಮುಂದೆ ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶೌಚಗೃಹ ನಿರ್ಮಿಸಿಕೊಳ್ಳಲು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಪ್ರತಿಯೊಂದು ಕುಟುಂಬಕ್ಕಾಗಿ 15 ಸಾವಿರ ರೂಪಾಯಿಗಳ ಹಣಕಾಸಿನ ನೆರವು ನೀಡುತ್ತಿದ್ದು, ಫಲಾನುಭವಿಗಳಿಗೆ ನೇರವಾಗಿ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ಈ ಕುರಿತಂತೆ 126 ಶೌಚ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳಾಗಿ ದಾಖಲಿಸಿ.ಸುಮ್ಮನೆ ಬೋಕಸ್ ಬಿಲ್ ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಕೂಡಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ .ಇವರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಿ ಅದಕ್ಕೆ ಕಾರಣರಾದ ಇತರ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಸಿದ್ದರಾಮ ಕಟ್ಟಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮದ ಮಲ್ಲಯ್ಯ ಸ್ವಾಮಿ ನಂದೂರ್ ಮಠ ,ಸೇರಿದಂತೆ ಶ್ರೀನಾಥ್ ಮಡಿವಾಳ, ಮಾಪಣ್ಣ ಕಟ್ಟಿ , ನಿಂಗಣ್ಣ ಆಡಿನ, ಸಿದ್ದಣ್ಣ ಆಡಿನ್ ,ನಾಗಣ್ಣ ಸಂಕೇಶ್ವರ, ಆಕಾಶ್, ಬಾಬುಮಿಯ ಮದರಿ, ಶಿವಕುಮಾರ ಸೊನ್ನ, ಈರಪ್ಪ ಮಾಗಣಗೇರಿ, ಗುಂಡೂರಾವ್ ಹೊನಕೇರಿ, ಮಲ್ಲಿಕಾರ್ಜುನ್ ಸೇರಿದಂತೆ ಇತರ ಗ್ರಾಮಸ್ಥರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.