ಕಲಬುರಗಿ: ಕನ್ನಡಿಗರಾದ ನಾವು ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿರುವುದರಿಂದ ಸರ್ಕಾರವೇ ಪ್ರಾಧಿಕಾರ, ಅಕಾಡೆಮಿಗಳನ್ನು ಸ್ಥಾಪಿಸಬೇಕಾಗಿ ಬಂದಿರುವುದು ವಿಪರ್ಯಾಸದ ಸಂಗತಿ ಎಂದು ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಎಂಬ ವಿಷಯ ಕುರಿತು ಬುಧವಾರ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಬದುಕು. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದ್ದರಿಂದ ಶಾಸ್ತ್ರೀಯ ಸ್ಥಾನಮಾನ ದಕ್ಕಿದೆ. ಕನ್ನಡ ಭಾಷೆ ಬಳಕೆಯಿಂದ ಉಳಿಯಲು ಸಾಧ್ಯ. ಕುರಿತೋದದಯೇ ಕಾವ್ಯ ಪ್ರಯೋಗದ ಪರಿಣತಮತಿಗಳಾಗಿದ್ದವರು. ಜನಪದರು ನಮ್ಮ ಕನ್ನಡ ಉಳಿಸಿದರು ಎಂದರು.
ಜನಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ದಾಸರು, ತತ್ವಪದಕಾರರು ಕೊಡುಗೆ ಕೂಡ ಅಪಾರವಾಗಿದೆ ಎಂದರು. ‘ಎದ್ದ ಕಲ್ಲುಪೂಜಾರಿಗೆ ಬಿದ್ದ ಕಲ್ಲು ಮಡಿವಾಳನಿಗೆ’ ಎನ್ನುವಂತೆ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಸಾಕಷ್ಟಿಸಿದೆ. ಕನ್ನಡ ನಮ್ಮ ಅಸ್ಮಿತೆ ಕನ್ನಡವಾಗಬೇಕು ಎಂದು ಪ್ರೊ. ಪೋತೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ರಿ ಮಾತನಾಡಿ, ಕನ್ನಡವೇ ಶಕ್ತಿ, ಕನ್ನಡವೇ ಧರ್ಮ ಎಂದು ತಿಳಿಯಬೇಕು. ಕನ್ನಡಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಭಾಷೆಯ ಬಗ್ಗೆ ದುರಭಿಮಾನ ಬೇಡ. ಆದರೆ ಅಭಿಮಾನ ಇರಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ, ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕ ಬಸವರಾಜ ಕೊನೇಕ್ ಮಾತನಾಡಿದರು.
ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶಿವಪುತ್ರ ಡೆಂಕಿ ಅಧ್ಯಕ್ಷತೆ ವಹಿಸಿದ್ದರು. ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ವನಿತಾ ಜಾಧ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಎಲ್. ಪಾಟೀಲ ವೇದಿಕೆಯಲ್ಲಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿ, ಬ್ಯಾಂಕ್, ಕೋರ್ಟ್, ಪಾಲಿಕೆ ಸೇರಿದಂತೆ ಎರಡು ವರ್ಷದ ಅವಧಿಯಲ್ಲಿ ಸದಸ್ಯರೊಂದಿಗೆ ಕೂಡಿ 9 ಅಭಿಯಾನಗಳನ್ನು ನಡೆಸಲಾಗಿದೆ. ಕನ್ನಡವೇ ನಮ್ಮ ನಡೆ-ನುಡಿಯಾಗಬೇಕು ಎಂದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಸ್ವಾಗತಿಸಿದರು. ಬಸವರಾಜ ಗೌನಳ್ಳಿ ನಿರೂಪಿಸಿದರು.